ಧಾರವಾಡ: ಭಾರತರತ್ನ ಪಂಡಿತ ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನವೆಂಬರ್ 13 ರಂದು ಸಂಜೆ 5:45 ಕ್ಕೆ ಸೃಜನಾ ರಂಗಮಂದಿರದಲ್ಲಿ ಸಂಗೀತದ ರಸಮಾಧುರ್ಯ ಹರಿದು ಬರಲಿದೆ. ಮೈಸೂರಿನ ಪಿ. ಶ್ರೀಮತಿ ದೇವಿ ಹಾಗೂ ಪುಣೆಯ ರಮಾಕಾಂತ ಗಾಯಕವಾಡ ಅವರಿಂದ ಗಾನಸುಧೆ ಮೂಡಿಬರಲಿದೆ. ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್ಐಸಿಯ ಹೌಸಿಂಗ್ ಫೈನಾನ್ಸ್ ಸಹಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ಸಹಕಲಾವಿದರಾಗಿ ಶ್ರೀಹರಿ ದಿಗ್ಗಾವಿ, ರಾಮಕೃಷ್ಣ ಕರಂಬೇಲ್ಕರ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ, ಸುಧಾಂಶು ಘರ್ಪುರೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಮುಂಬೈನ ಗಾಯಕ ರಮಾಕಾಂತ ಗಾಯಕವಾಡ ಪರಿಚಯ
ಸಂಗೀತಗಾರರ ಮನೆತನದಲ್ಲಿ ಜನಿಸಿದ ರಮಾಕಾಂತ ಗಾಯಕವಾಡ ಹಿಂದುಸ್ತಾನಿ ಸಂಗೀತದ ಉದಯೋನ್ಮುಖ ಪ್ರತಿಭೆ. ತಂದೆ ಪಂಡಿತ ಸೂರ್ಯಕಾಂತ ಹಾಗೂ ತಾಯಿ ಸಂಗೀತಾ ಗಾಯಕವಾಡ, ಅವರಿಬ್ಬರೂ ಸಂಗೀತ ಶಿಕ್ಷಕರು. ರಮಾಕಾಂತ ಅವರ ಗಾಯನ ಕಲಿಕೆ ಪ್ರಾರಂಭಗೊಂಡಾಗ ಅವರಿಗೆ ಕೇವಲ ಆರು ವರ್ಷ. ತಂದೆ ಸೂರ್ಯಕಾಂತ ಅವರು ನಡೆಸುವ ಹರಿ ಓಂ ಸಂಗೀತ ಕಲಾ ಮಂಚ್ ಸಂಸ್ಥೆಯಲ್ಲಿ ಪಟಿಯಾಲಾ ಘರಾಣೆ ಶೈಲಿಯಲ್ಲಿ ಶಾಸ್ತ್ರೋಕ್ತವಾಗಿ ಮತ್ತು ಆಳವಾಗಿ ಸಂಗೀತಾಭ್ಯಾಸ ಮಾಡಿದರು. ನಂತರ ಡಾ. ಸತೀಶ ಕೌಶಿಕ್ ಅವರಲ್ಲಿ ಕಿರಾನಾ ಘರಾಣೆ ಹಾಗೂ ಪಂಡಿತ ಜಗದೀಶ ಪ್ರಸಾದ ಅವರಿಂದ ಪಟಿಯಾಲಾ ಘರಾಣೆಯ ಆಳವಾದ ಮಾರ್ಗದರ್ಶನ ಪಡೆದು ಅತೀ ಚಿಕ್ಕ ವಯಸ್ಸಿನಲ್ಲಿಯೇ ಓರ್ವ ಭರವಸೆಯ ಗಾಯಕನಾಗಿ ಹೊರಹೊಮ್ಮಿದರು.
ಗಂಧರ್ವ ಮಹಾವಿದ್ಯಾಲಯದಿಂದ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವ ರಮಾಕಾಂತ ಅವರು ಪಂಡಿತ ರಾಮ ಮರಾಠೆ ಪುರಸ್ಕಾರ, ಪಂಡಿತ ಜಗನ್ನಾಥಬುವಾ ಪುರೋಹಿತ ಪುರಸ್ಕಾರ, ಪಂಡಿತ ಜಿತೇಂದ್ರ ಅಭಿಷೇಕಿ ಪುರಸ್ಕಾರ, ಪಂಡಿತ ವಸಂತರಾವ ದೇಶಪಾಂಡೆ ಪುರಸ್ಕಾರ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿರುವ ಅತೀ ಕಡಿಮೆ ವಯಸ್ಸಿನ ಸಂಗೀತ ಪ್ರತಿಭೆ. ಮುಂಬೈ, ಪುಣೆ, ಕೊಲ್ಹಾಪುರ, ಜೈಪುರ, ಹೈದರಾಬಾದ್ ಅಲ್ಲದೇ ಅಮೆರಿಕದ ಅನೇಕ ಸ್ಥಳಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
ಮೈಸೂರಿನ ಗಾಯಕಿ ಶ್ರೀಮತಿದೇವಿ ಪರಿಚಯ
ಕೀರ್ತನಕಾರರ ಮನೆತನದ ಹಿನ್ನೆಲೆಯುಳ್ಳ ಶ್ರೀಮತಿದೇವಿ ಅವರು ನಾಡಿನ ಪ್ರಬುದ್ಧ ಹಿಂದುಸ್ತಾನಿ ಗಾಯಕಿ. ತಂದೆ ಜಗದೀಶ ದಾಸ ಅವರು ಹರಿಕಥಾ ವಿದ್ವಾನರು. ತಾಯಿ ಗಿರಿಜಾಬಾಯಿ ಕೂಡ ಗಾಯಕಿ. ಸಹಜವಾಗಿ ಶ್ರೀಮತಿ ದೇವಿಯವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು ಮೂಡಿತು. ಧಾರವಾಡದ ಪಂಡಿತ ಚಂದ್ರಶೇಖರ ಪುರಾಣಿಕಮಠ ಹಾಗೂ ಹೊನ್ನಾವಾರದ ಪಂಡಿತ ನಾರಾಯಣ ಅವರಲ್ಲಿ ಆಳವಾದ ಸಂಗೀತಾಧ್ಯಯನ ಮಾಡಿ ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು. ನಂತರದ ದಿನಗಳಲ್ಲಿ ವಿದುಷಿ ಪದ್ಮಾ ತಳವಲಕರ, ಪಂಡಿತ ವ್ಯಾಸಮೂರ್ತಿ ಕಟ್ಟಿ, ಪಂಡಿತ ರವಿಕಿರಣ ಮಣಿಪಾಲ ಅವರಲ್ಲಿ ಅಭ್ಯಾಸ ನಡೆಸಿದರು.
ಪ್ರಸ್ತುತವಾಗಿ ಮುಂಬೈನ ವಿದುಷಿ ಅಪೂರ್ವಾ ಗೋಖಲೆ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ವಿವಿಧ ಶಿಷ್ಯವೇತನ, ತಾಮಣಕರ ಪುರಸ್ಕಾರ, ವಾಮನದಾಜಿ ಪುರಸ್ಕಾರಗಳಿಗೆ ಭಾಜನರಾಗಿರುವ ಶ್ರೀಮತಿದೇವಿ ಅವರು ಅಮೆರಿಕ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ:
ಸಾವಿರಕ್ಕೂ ಹೆಚ್ಚು ಸ್ಥಳ, ಐದು ಲಕ್ಷ ಕಂಠಗಳಲ್ಲಿ ಕನ್ನಡ ಗೀತೆ ಗಾಯನ! ಅಭೂತಪೂರ್ವ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ
ತನ್ನಮ್ಮನ ಭವಿಷ್ಯದಂತೆ ಅಪ್ಪು ಬಹಳ ಕೀರ್ತಿವಂತನಾದ, ಆದರೆ ಅದರ ಶಿಖರದಲ್ಲಿರುವಾಗಲೇ ನಮ್ಮನ್ನಗಲಿದ: ಭಗವಾನ್