ಹುಬ್ಬಳ್ಳಿ, ಫೆಬ್ರುವರಿ 1: ಧಾರವಾಡದ ಬಣ ರಾಜಕೀಯವನ್ನು ಶಮನ ಮಾಡಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಮುಂದಾಗಿದ್ದಾರೆ. ಆ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ವಿಧಾನಸಭಾ ಉಪನಾಯಕ ಅರವಿಂದ ಬೆಲ್ಲದ್ ಅವರೊಂದಿಗೆ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಪ್ರತ್ಯೇಕ ಸಭೆ ಮಾಡಿದ್ದಾರೆ. ಮೂವರು ನಾಯಕರೊಂದಿಗೆ ಬಿ.ವೈ.ವಿಜಯೇಂದ್ರ ಚರ್ಚೆ ಮಾಡಿದ್ದಾರೆ. ಧಾರಾವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಘರವಾಪ್ಸಿಯಾದರೂ ಭಿನ್ನಮತವಿತ್ತು. ಶೆಟ್ಟರ್ ಮೆರವಣಿಗೆಯಲ್ಲೂ ಸ್ಥಳೀಯ ನಾಯಕರು ಭಾಗಿಯಾಗಿರಲಿಲ್ಲ. ಹೀಗಾಗಿ ಬಣ ರಾಜಕೀಯವನ್ನು ಶಮನ ಮಾಡಲು ಸಭೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ನಮ್ಮ ಮುಂದೆ ಇರುವ ದೊಡ್ಡ ಸವಾಲು ಲೋಕಸಭೆ ಚುನಾವಣೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಾಗಿದೆ. ಕಾಂಗ್ರೆಸ್ ಎಂಪಿ ಚುನಾವಣೆಯಲ್ಲಿ ಗೆಲ್ತೇವೆ ಅನ್ನೋ ಭ್ರಮೆಯಲ್ಲಿದೆ. ಪಂಚರಾಜ್ಯಗಳ ಚುನಾವಣೆ ಕಾಂಗ್ರೆಸ್ನವರಿಗೆ ಆಘಾತ ನೀಡಿದೆ. ಕಳೆದ ಕೆಲ ತಿಂಗಳಿಂದ ರಾಜ್ಯದಲ್ಲಿ ಅನೇಕ ಬದಲಾವಣೆ ಆಗಿದೆ. ಅನುದಾನ ಕೊಡದ ಸರ್ಕಾರ ಇದು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆ ಸುರೇಶ್ ಬೇಜವಾಬ್ದಾರಿ ಹೇಳಿಕೆ ನೀಡಬಾರದು: ಬಿವೈ ವಿಜಯೇಂದ್ರ
ಅಧಿಕಾರಕ್ಕೆ ಬಂದು 8 ತಿಂಗಳಾದರೂ ಯಾವ ಅನುದಾನ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕತೆ ಅರಾಜಕತೆಗೆ ನೂಕಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಗೆಲ್ಲಲಿದೆ ಎಂದಿದ್ದಾರೆ.
ಶೆಟ್ಟರ್ ಬಿಜೆಪಿಗೆ ವಾಪಸ್ ಬಂದಿರುವುದು ಅವಕಾಶಕ್ಕಾಗಿ ಅಲ್ಲ. ಎಂಎಲ್ಸಿ ಸ್ಥಾನಕ್ಕೆ ಶೆಟ್ಟರ್ ರಾಜೀನಾಮೆ ಕೊಟ್ಟು ಬಂದಿದ್ದಾರೆ. ನಾವೆಲ್ಲ ಒಟ್ಟಾಗಿ ದುಡಿಯಬೇಕು ಎಂದಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿ ಆಗಲಿದ್ದಾರೆ. ಕಾಂಗ್ರೆಸ್ ಏನೇ ಮಾಡಿದರೂ ಇದನ್ನು ತಡೆಯಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಿದ್ದು ನಮಗೆ ಹೆಮ್ಮೆ. ಮೋದಿ ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಜೈ ಶ್ರೀರಾಮ್ ಅಂದರೆ ನಿದ್ದೆ ಬರಲ್ಲ. ಕೇಸರಿ ಬಣ್ಣ ನೋಡಿದರೂ ಸಹ ಕಾಂಗ್ರೆಸ್ನವರಿಗೆ ನಿದ್ದೆ ಬರಲ್ಲ ಎಂದಿದ್ದಾರೆ.
ಆಪರೇಶನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಆಪರೇಶನ್ ನಿಮಗೆ ಹೇಳಿ ಮಾಡಬೇಕಾ? ಇನ್ನೂ ಕಾಂಗ್ರೆಸ್ನಿಂದ ಬಹಳ ಜನ ಬಿಜೆಪಿಗೆ ಬರುವವರಿದ್ದಾರೆ. ಲೋಕಸಭೆಯಲ್ಲಿ 28 ಸ್ಥಾನ ಗಳಿಸುವುದೇ ನಮ್ಮ ಗುರಿ ಎಂದು ಹುಬ್ಬಳ್ಳಿಯಲ್ಲಿ ಆಪರೇಶನ್ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್‌ಗೆ ಮತ ಹಾಕಿದರೆ 5 ಗ್ಯಾರಂಟಿ ಇರುತ್ತೆಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹಣ ಕ್ರೋಡೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಪರದಾಡುತ್ತಿದ್ದಾರೆ. ರಾಜ್ಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಭರವಸೆ ನೀಡಿದ್ದ ಗ್ಯಾರಂಟಿ ಈಡೇರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರಿಂದ ಗ್ಯಾರಂಟಿ ರದ್ದತಿ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.