ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubli-Dharwad Central) ಕ್ಷೇತ್ರದಲ್ಲಿ ಸೋತ ಹಿನ್ನೆಲೆ ಜಿಲ್ಲಾ ಯುವ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಮಂಜುನಾಥ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಂಜುನಾಥ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮನಸ್ಸಿಗೆ ಬಹಳ ಖುಷಿಯಾಗಿದೆ. ಜನರ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಮತ್ತು ಕುಂದುಗೊಳ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು ಸೋತಿದ್ದಾರೆ. ಈ ಸೋಲಿನ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ಕೊಡುತ್ತಿದ್ದೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಲಿಂಗಾಯತ ಯುವ ಮುಖಂಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಯಂಟ್ರುವಿ ಅವರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಬರೆದ ಪತ್ರ ಬರೆದಿದ್ದರು. ಪತ್ರದ ಪೋಟೋಗಳು ವೈರಲ್ ಆಗಿದ್ದವು.
ಇನ್ನು ಈ ಬಗ್ಗೆ ಮಾಧ್ಯಮಗಳೀಗೆ ಪ್ರತಿಕ್ರಿಯಿಸಿದ್ದ ಮಂಜುನಾಥ ಯಂಟ್ರೂವಿ, ಒಬ್ಬ ಲಿಂಗಾಯತ ನಾಯಕರ ಮೇಲೆ ಲಿಂಗಾಯತ ನಾಯಕರನ್ನೇ ಎತ್ತಿ ಕಟ್ಟಲಾಗುತ್ತಿದೆ. ರಕ್ತದಲ್ಲಿ ಬರೆದು ಕೊಡ್ತೇನೆ ಶೆಟ್ಟರ್ ಸೋಲುವುದು ಖಚಿತ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ ನಾನು ರಕ್ತದಲ್ಲಿ ಬರೆದುಕೊಡ್ತೀನಿ ಯಾವುದೇ ಕಾರಣಕ್ಕೆ ಶೆಟ್ಟರ್ ಅವರು ಸೋಲುವುದಿಲ್ಲ. ಶೆಟ್ಟರ್ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ರಾಜಕೀಯ ನಾಯಕರ ಮಾತುಗಳನ್ನ ನಾನು ಕೃತಿಯಲ್ಲಿ ತೋರಿಸುತ್ತೇನೆ ಎಂದು ಹೇಳಿದ್ದರು.
ಇದಾದ ಬಳಿಕ ಜಗದೀಶ್ ಶೆಟ್ಟರ್ ಅವರು ಯುವಕ ಮಂಜುನಾಥನ ನಿವಾಸಕ್ಕೆ ಏಪ್ರಿಲ್ 28 ರಂದು ಭೇಟಿ ನೀಡಿದ್ದರು. ಈ ವೇಳೆ ತಮ್ಮ ಗೆಲುವಿಗಾಗಿ ರಕ್ತದಲ್ಲಿ ಶುಭ ಹಾರೈಸಿದ ಮಂಜುನಾಥನಿಗೆ ಸನ್ಮಾನಿಸಿ ಕೃತಜ್ಞತೆ ತಿಳಿಸಿದ್ದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಂಜುನಾಥ ಮನೆಗೆ ಜಗದೀಶ್ ಶೆಟ್ಟರ್ ಭೇಟಿ ನೀಡಿ ಅಭಿಮಾನ ತೋರಿದಕ್ಕೆ ಸನ್ಮಾನ ಮಾಡಿದ್ದರು. ಇದೇ ವೇಳೆ ಮಂಜುನಾಥ ಸಹ ಚುನಾವಣೆಯಲ್ಲಿ ಗೆಲುವಾಗಲಿ ಎಂದು ಜಗದೀಶ್ ಶೆಟ್ಟರ್ ಅವರಿಗೆ ಶುಭ ಹಾರೈಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ