Dhamul Curd Sale: ಧಾಮುಲ್ ಮೊಸರಿಗೆ ಭಾರಿ ಬೇಡಿಕೆ; ಜೂನ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಮಾರಾಟ

|

Updated on: Jul 11, 2023 | 6:01 PM

ಕಳೆದ ತಿಂಗಳು ಪ್ರತಿ ದಿನ 30,000 ಕೆಜಿಯಂತೆ ಮೊಸರು ಮಾರಾಟವಾಗಿದೆ. ಪ್ರಸ್ತುತ ದಿನಕ್ಕೆ 20 ಸಾವಿರದಿಂದ 25 ಸಾವಿರ ಕೆಜಿ ಮಾರಾಟವಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.

Dhamul Curd Sale: ಧಾಮುಲ್ ಮೊಸರಿಗೆ ಭಾರಿ ಬೇಡಿಕೆ; ಜೂನ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಮಾರಾಟ
ಮೊಸರು (ಪ್ರಾತಿನಿಧಿಕ ಚಿತ್ರ)
Follow us on

ಹುಬ್ಬಳ್ಳಿ: ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವತ್ತ ಗಮನಹರಿಸಿರುವ ಧಾರವಾಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (Dhamul) ಪ್ರತಿ ದಿನದ ಮೊಸರು ಮಾರಾಟ 30,000 ಕೆಜಿ ತಲುಪಿದೆ. ಈ ಮೂಲಕ ಮೊಸರು ಮಾರಾಟ (Curd Sale) ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದಂತಾಗಿದೆ. ಮೂಲಗಳ ಪ್ರಕಾರ, ಈ ಹಿಂದೆ ಪ್ರತಿ ದಿನ 10,000 ರಿಂದ 12,000 ಕೆಜಿ ಮೊಸರು ಮಾರಾಟವಾಗುತ್ತಿತ್ತು. ಉತ್ಪಾದನೆ ಮತ್ತು ಮಾರಾಟದಲ್ಲಿ ಒಕ್ಕೂಟ ಮಾಡಿದ ಪ್ರಮುಖ ಪ್ರಯತ್ನಗಳು ಮತ್ತು ಸುಧಾರಣೆಗಳೊಂದಿಗೆ, ಅದರ ಮೊಸರು ಈಗ ಖಾಸಗಿ ಕಂಪನಿಗಳ ಮೊಸರುಗಳೊಂದಿಗೆ ಸ್ಪರ್ಧಿಸುತ್ತಿದೆ.

ಪ್ರಸ್ತುತ, ಪ್ರತಿ ದಿನ ಸುಮಾರು 1,30,000 ಲೀಟರ್ ಹಾಲು ಧಾರವಾಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಪೂರೈಕೆಯಾಗುತ್ತಿದೆ. ರಾಜ್ಯದೊಳಗೆ ಮತ್ತು ಹೊರಗಿನಿಂದ, ಮುಖ್ಯವಾಗಿ ಮಹಾರಾಷ್ಟ್ರ ಗೋವಾದಿಂದ ಖಾಸಗಿ ಹಾಲಿನ ಬ್ರಾಂಡ್‌ಗಳಿಗೆ ಪ್ರತಿಸ್ಪರ್ಧಿಯಾಗಿ, ಧಾರವಾಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ತನ್ನ ಇತರ ಉತ್ಪನ್ನಗಳನ್ನು ಸಹ ಪ್ರಚಾರ ಮಾಡುತ್ತದೆ. ಹಾಲಿನೊಂದಿಗೆ, ಧಾರವಾಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧಿಕಾರಿಗಳು ನಂದಿನಿಯ ಮೊಸರನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಿದ್ದಾರೆ. ಇದು ಹೆಚ್ಚಿನ ಮಾರಾಟಕ್ಕೆ ಕಾರಣವಾಯಿತು. ಹಾಲಿನ ಜತೆಗೆ ಇತರೆ ಉತ್ಪನ್ನಗಳಿಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಧಾರವಾಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆಎಂ ಲೋಹಿತೇಶ್ವರ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಧಾರವಾಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 10 ಕೆಜಿ, 5 ಕೆಜಿ ತೂಕದ ಮೊಸರು ಬಕೆಟ್​​ಗಳನ್ನು ಪರಿಚಯಿಸಿದ ನಂತರ, ಮಾರಾಟವು ಹೆಚ್ಚಾಗಿದೆ. ಕಳೆದ ತಿಂಗಳು ಪ್ರತಿ ದಿನ 30,000 ಕೆಜಿಯಂತೆ ಮೊಸರು ಮಾರಾಟವಾಗಿದೆ. ಪ್ರಸ್ತುತ ದಿನಕ್ಕೆ 20 ಸಾವಿರದಿಂದ 25 ಸಾವಿರ ಕೆಜಿ ಮಾರಾಟವಾಗುತ್ತಿದೆ ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿಗೆ ನಾನೇ ಡಾನ್ ಎಂದು ರೀಲ್ಸ್ ಮಾಡುತ್ತಿದ್ದ ಯುವಕನ ಅಪಹರಣ, ಬೆತ್ತಲೆ ಮಾಡಿ ಹಲ್ಲೆ

ಈ ಹಿಂದೆ ಖಾಸಗಿ ಕಂಪನಿಗಳು ಮಾತ್ರ ಮೊಸರನ್ನು ಬಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದವು. ಈಗ ನಂದಿನಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮೊಸರು ಮಾರಾಟ ಮಾಡುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

1986ರ ಮಾರ್ಚ್‌ನಲ್ಲಿ ಕರ್ನಾಟಕ ಸಹಕಾರ ಕಾಯ್ದೆಯಡಿ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಧಾರವಾಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವನ್ನು ನೋಂದಾಯಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ