ಧಾರವಾಡ, ಅಕ್ಟೋಬರ್ 20: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಕೊಟ್ಟ ಟಿವಿಎಸ್ (TVS) ಕಂಪನಿಗೆ ಹೊಸ ವಾಹನ ಕೊಡಲು ಅಥವಾ 1.60 ಲಕ್ಷ ರೂ. ದಂಡ ಮತ್ತು ಪರಿಹಾರ ಕೊಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ (Dharawad District Consumer Commission) ಆದೇಶಿಸಿದೆ. ಹುಬ್ಬಳ್ಳಿಯ (Hubballi) ಶಿಂಧೆ ಕಾಂಪ್ಲೆಕ್ಸ್ ನಿವಾಸಿ ಉಷಾ ಜೈನ್ ಎಂಬುವವರು ವಿದ್ಯಾನಗರದ ಪ್ರಕಲ್ಪ ಮೋಟಾರ್ಸ್ ಅವರಿಂದ 2021 ಜೂನ್ 18ರಂದು 1.25 ಲಕ್ಷ ರೂ. ಕೊಟ್ಟು ಟಿವಿಎಸ್ ಐಕ್ಯೂಬ್ ಇಲೆಕ್ಟ್ರಿಕಲ್ ಬೈಕ್ ಖರೀದಿಸಿದ್ದರು. ವಾಹನ ಖರೀದಿಸಿದ ಆರು ತಿಂಗಳಲ್ಲಿಯೇ ಅದರ ಬ್ರೇಕ್‌ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು.
ಈ ಬಗ್ಗೆ ದೋಷ ಸರಿಪಡಿಸಲು ಉಷಾ ಜೈನ್ ಹಲವು ಬಾರಿ ಮನವಿ ಮಾಡಿದ್ದರು. ಪ್ರಕಲ್ಪ ಮೋಟಾರ್ಸ್ ಹಲವು ಬಿಡಿ ಭಾಗಗಳನ್ನು ಐದು ಬಾರಿ ಬದಲಾಯಿಸಿ ರಿಪೇರಿ ಮಾಡಿಕೊಟ್ಟಿದ್ದರು. ಆದರೂ ವಾಹನದ ರಿಪೇರಿ ಕೆಲಸ ಸರಿಯಾಗಿ ಆಗಿರಲಿಲ್ಲ. ವಾಹನವನ್ನು ಸ್ಟಾರ್ಟ್ ಮಾಡುವಾಗ ದೂರುದಾರರ ಕೈಗೆ ಶಾಕ್ ತಗುಲುತ್ತಿತ್ತು. ಆದ್ದರಿಂದ ವಾಹನವನ್ನು ಬದಲಾಯಿಸಿ ಬೇರೆ ವಾಹನ ಕೊಡುವಂತೆ ಮನವಿ ಮಾಡಿದರೂ ಪುರಸ್ಕಾರ ಸಿಗಲಿಲ್ಲ. ಹೀಗಾಗಿ ಬೇಸತ್ತ ಉಷಾ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: ರೈತರ ಗೋಳು ಕೇಳುವರಾರು! ಕೈ ಕೊಟ್ಟ ಮಳೆರಾಯ; ನೀರಿಲ್ಲದೇ ಒಣಗಿದ ಬೆಳೆಗಳು
ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಮೋಟಾರು ಕಂಪನಿಯವರು ಬೈಕ್ ದೋಷ ಸರಿಪಡಿಸಲು ವಿಫಲರಾಗಿದ್ದಾರೆ. ರಿಪೇರಿ ಮಾಡಿದ ನಂತರವು ಅದನ್ನು ಚಾಲನೆ ಮಾಡುವಾಗ ಕರೆಂಟ್ ಬರುತ್ತಿರುವುದರಿಂದ ಆ ವಾಹನದಲ್ಲಿ ಉತ್ಪಾದನಾ ದೋಷ ಇದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಎದುರುದಾರ ಟಿ.ವಿ.ಎಸ್ ಉತ್ಪಾದನಾ ಕಂಪನಿ ಮತ್ತು ಡೀಲರ್‌ಗಳಿಂದ ದೂರುದಾರರಿಗೆ ಸೇವಾ ನ್ಯೂನ್ಯತೆ ಆಗಿದ್ದು, ಹೊಸ ವಾಹನವನ್ನು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಈ ನಿಯಮಕ್ಕೆ ವಿಫಲವಾದರೆ ರೂ. 1.25 ಲಕ್ಷ ಹಣವನ್ನು ಸಂದಾಯ ಮಾಡುವಂತೆ ಮೋಟಾರು ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ. 25 ಸಾವಿರ ಪರಿಹಾರ ಹಾಗೂ ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ