ರಾಷ್ಟ್ರೀಯ ಪ್ಯಾರಾ ಟೇಕ್ವಾಂಡೊ ಟ್ರೋಫಿ ಪಂದ್ಯಾವಳಿಯಲ್ಲಿ ಧಾರವಾಡದ ವಿಶೇಷ ಚೇತನ ಕ್ರೀಡಾಪಟುಗಳ ಸಾಧನೆ

| Updated By: ವಿವೇಕ ಬಿರಾದಾರ

Updated on: Jun 17, 2024 | 8:15 AM

ಧಾರವಾಡ ವಿದ್ಯಾಕಾಶಿ ಹೆಸರನ್ನು ಪಡೆಯೋದರ ಜೊತೆಗೆ ವಿವಿಧ ರಂಗಗಳಲ್ಲಿಯೂ ಸಾಕಷ್ಟು ಹೆಸರು ಮಾಡಿದೆ. ಅದರಲ್ಲಿ ಕ್ರೀಡಾ ಕ್ಷೇತ್ರವೂ ಒಂದು. ಇದೀಗ ಧಾರವಾಡದ ಕ್ರೀಡಾಪಟುಗಳು ದೂರದ ಉತ್ತರ ಪ್ರದೇಶದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಯಾವುದಾ ಕ್ರೀಡೆ? ಇಲ್ಲಿದೆ ಓದಿ.

ರಾಷ್ಟ್ರೀಯ ಪ್ಯಾರಾ ಟೇಕ್ವಾಂಡೊ ಟ್ರೋಫಿ ಪಂದ್ಯಾವಳಿಯಲ್ಲಿ ಧಾರವಾಡದ ವಿಶೇಷ ಚೇತನ ಕ್ರೀಡಾಪಟುಗಳ ಸಾಧನೆ
ಧಾರವಾಡದ ಕ್ರೀಡಾಪಟುಗಳು
Follow us on

ಧಾರವಾಡ, ಜೂನ್​​ 17: ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ 7ನೇ ರಾಷ್ಟ್ರೀಯ ಪ್ಯಾರಾ ಟೇಕ್ವಾಂಡೊ ಟ್ರೋಫಿ ಪಂದ್ಯಾವಳಿ (National Para Taekwondo Trophy Tournament) ನಡೆಯಿತು. ಈ ಪಂದ್ಯಾವಳಿಯಲ್ಲಿ ಧಾರವಾಡ ವಿಶೇಷ ಚೇತನ ಕ್ರೀಡಾಪಟುಗಳು (Dharwad Disabled Women Athletes) ಭಾಗವಹಿಸಿ ಸಾಧನೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ (Uttar Pradesh) ಜೂನ್ 8 ಮತ್ತು 9 ರಂದು 7ನೇ ರಾಷ್ಟ್ರೀಯ ಪ್ಯಾರಾ ಟೇಕ್ವಾಂಡೊ ಟ್ರೋಫಿ ಪಂದ್ಯಾವಳಿ ನಡೆಯಿತು. ಈ ಪಂದ್ಯಾವಳಿಯಲ್ಲಿ ವಿಶೇಷ ಚೇತನರ ವಿಭಾಗದಲ್ಲಿ ಪಾಲ್ಗೊಂಡಿದ್ದ ಧಾರವಾಡದ ಕ್ರೀಡಾಪಟುಗಳು ಐದು ಚಿನ್ನದ ಪದಕ ಹಾಗೂ ಎರಡು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಒಟ್ಟು 9 ಪದಕಗಳನ್ನು ಪಡೆಯುವ ಮೂಲಕ ರನ್ನರ್ ಆಫ್ ಟ್ರೋಫಿಯನ್ನು ಧಾರವಾಡ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕ್ರೀಡಾಪಟುಗಳು ಪಡೆದುಕೊಂಡಿದ್ದಾರೆ.

ಈ ಮುಂಚೆಯೂ ಧಾರವಾಡದ ಟೇಕ್ವಾಂಡೋ ತಂಡವು ವಿದೇಶಿ ನೆಲದಲ್ಲಿಯೂ ಸಾಧನೆ ಮಾಡಿತ್ತು. ಅನೇಕ ದೇಶಗಳಲ್ಲಿ ಈ ಸಂಸ್ಥೆಯ ಕ್ರೀಡಾಪಟುಗಳು ಸಾಧನೆ ಮಾಡಿ, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದರು. ಇದೀಗ ಈ ತಂಡ ಕರ್ನಾಟಕದ ಪರವಾಗಿ ಪ್ರತಿನಿಧಿಸುವ ಮೂಲಕ ರಾಜ್ಯಕ್ಕೆ ಮತ್ತೊಮ್ಮೆ ಕೀರ್ತಿ ತಂದಿದೆ. ಇದುವರೆಗೂ ಸಾಮಾನ್ಯ ವರ್ಗದ ಕ್ರೀಡಾಪಟುಗಳು ಸಾಧನೆ ಮಾಡುತ್ತಲೇ ಬಂದಿದ್ದರು. ಆದರೆ, ಇದೀಗ ಈ ವಿಶೇಷ ಚೇತನ ಕ್ರೀಡಾಪಟುಗಳು ತಮ್ಮ ಸಾಧನೆ ಮೆರೆದಿದ್ದಾರೆ. ಸಾಧನೆ ಮಾಡಿದ ಮಹಿಳಾ ವಿಶೇಷ ಚೇತನ ಕ್ರೀಡಾಪಟುಗಳಿಗೆ ಧಾರವಾಡ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಮುಖ್ಯಸ್ಥರು ಹಾಗೂ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಎಸ್​ಎಸ್​ಎಲ್​ಸಿ ಟಾಪರ್ ಅಂಕಿತಾ

ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಈ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿಲ್ಲ. ಆದರೆ ಧಾರವಾಡದಲ್ಲಿ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ತಮ್ಮಲ್ಲಿರುವ ಅತಿ ಕಡಿಮೆ ಸೌಲಭ್ಯಗಳು ಹಾಗೂ ಸಂಪನ್ಮೂಲಗಳ ನಡುವೆಯೂ ಇಂಥದ್ದೊಂದು ಸಾಧನೆ ಮಾಡಿದ್ದು ನಿಜಕ್ಕೂ ಪ್ರಶಂಸನೀಯ. ಒಟ್ಟಿನಲ್ಲಿ ಒಂಬತ್ತು ಪದಕಗಳನ್ನು ಪಡೆಯುವ ಮೂಲಕ ದೊಡ್ಡ ಸಾಧನೆ ಮಾಡಿದ್ದಂತೂ ಸತ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ