ಧಾರವಾಡ ರೈತ ಕುಟುಂಬದ ಕೆರೆ ಕ್ರಾಂತಿ: ಭೀಕರ ಬರದ ನಡುವೆಯೂ ಹಚ್ಚ ಹಸಿರಿನ ಬೆಳೆ ಬೆಳೆದ ಅನ್ನದಾತ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ರೂಗಿ ಕುಟುಂಬ ಬೆಣ್ಣೆಹಳ್ಳದ ನೀರನ್ನು ಸಂಗ್ರಹಿಸಿ 4 ಕೆರೆಗಳ ಮೂಲಕ 160 ಎಕರೆ ಜಮೀನಿನಲ್ಲಿ ಹಚ್ಚ ಹಸಿರಿನ ಬೆಳೆ ಬೆಳೆದು ಸಾಧನೆ ಮಾಡಿದೆ. ಬರದ ನಡುವೆಯೂ ಈ ಕ್ರಾಂತಿಯನ್ನು ಮಾಡಿರುವುದು ಎಲ್ಲರ ಮೆಚ್ಚುಗೆ ಕಾರಣವಾಗಿದೆ. ಉಪ್ಪಿನ ನೀರನ್ನು ಕೂಡ ಅದ್ಭುತವಾಗಿ ಈ ಕುಟುಂಬ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಇಲ್ಲಿದೆ ನೀಡಿ

ಧಾರವಾಡ , ನ.10: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಮಳೆಯಿಲ್ಲದೆ ಕೃಷಿ ಭೂಮಿ ಒಣಗಿ ರೈತರು ಕಣ್ಣೀರಿಡುತ್ತಿದ್ದಾರೆ. ಆದರೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ರೈತ ಕುಟುಂಬವೊಂದು ನಿಸರ್ಗದ ಸವಾಲನ್ನೇ ಮೆಟ್ಟಿ ನಿಂತು ಭವ್ಯ ‘ಕೆರೆ ಕ್ರಾಂತಿ’ ಮಾಡಿದೆ. ಸ್ವಂತ ಶ್ರಮ ಹಾಗೂ ತಂತ್ರಜ್ಞಾನದಿಂದ 160 ಎಕರೆ ಜಮೀನಿನಲ್ಲಿ ಹಚ್ಚ ಹಸಿರಿನ ಬೆಳೆಗಳನ್ನು ಉಳಿಸಿಕೊಂಡು, ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿರುವ ಈ ‘ರೂಗಿ ಕುಟುಂಬದ’ ಕೃಷಿ ಸಾಧನೆ ಈಗ ಇಡೀ ಜಿಲ್ಲೆಗೆ ಮಾದರಿಯಾಗಿದೆ.
8 ಕಿ.ಮೀ. ದೂರದ ಬೆಣ್ಣೆಹಳ್ಳವೇ ವರದಾನ: ಹೊಲದಲ್ಲೇ 4 ದೊಡ್ಡ ಕೆರೆಗಳು!
ಮಳೆ ನೀರನ್ನು ನೆಚ್ಚಿಕೊಳ್ಳದ ರೂಗಿ ಕುಟುಂಬ, ತಮ್ಮ ಹೊಲಗಳಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ ಹರಿಯುವ ಬೆಣ್ಣೆಹಳ್ಳದ ನೀರನ್ನು ಅವಲಂಬಿಸಿದೆ. ಪ್ರತಿವರ್ಷ ಪ್ರವಾಹದ ವೇಳೆ ಬೆಣ್ಣೆಹಳ್ಳದಿಂದ 20-25 ಟಿಎಂಸಿ ನೀರು ಪೋಲಾಗಿ ಸಮುದ್ರ ಸೇರುತ್ತಿತ್ತು. ಪೋಲಾಗುತ್ತಿದ್ದ ಆ ನೀರನ್ನು ಬಳಸಿಕೊಳ್ಳಲು ತಮ್ಮ 160 ಎಕರೆ ಹೊಲದಲ್ಲೇ 4 ಎಕರೆ, 3 ಎಕರೆ ಹಾಗೂ ತಲಾ 2 ಎಕರೆಯ ಎರಡು ಕೆರೆಗಳು ಸೇರಿದಂತೆ ಒಟ್ಟು 4 ಬೃಹತ್ ಕೆರೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಹಳ್ಳದಲ್ಲಿ ನೀರು ತುಂಬಿ ಹರಿದಾಗ 18 ಪಂಪ್‌ಸೆಟ್‌ಗಳ ಮೂಲಕ ನೀರನ್ನು ಮೊದಲು ಸಣ್ಣ ಕೆರೆಗಳಿಗೆ, ಬಳಿಕ ದೊಡ್ಡ ಕೆರೆಗಳಿಗೆ ತುಂಬಿಸಿಕೊಳ್ಳಲಾಗುತ್ತದೆ. ಒಮ್ಮೆ ಕೆರೆಗಳು ತುಂಬಿದರೆ ಇಡೀ ವರ್ಷದ ಬೆಳೆಗೆ ನೀರು ಚಿಂತೆಯಿಲ್ಲ.
ಉಪ್ಪುನೀರಿಗೆ ಪರಿಹಾರ ಮತ್ತು ಮೊಬೈಲ್‌ನಲ್ಲೇ ಪಂಪ್‌ಸೆಟ್ ಕಂಟ್ರೋಲ್
ಬೆಣ್ಣೆಹಳ್ಳದ ನೀರಿನಲ್ಲಿ ಲವಣಾಂಶ (ಉಪ್ಪು) ಹೆಚ್ಚಿರುತ್ತದೆ ಎಂದು ಹಲವು ರೈತರು ಅದನ್ನು ಬಳಸುವುದಿಲ್ಲ. ಆದರೆ, ನೀರನ್ನು ಕೆರೆಯಲ್ಲಿ 2 ವಾರಗಳ ಕಾಲ ಸಂಗ್ರಹಿಸಿಟ್ಟಾಗ ಲವಣಾಂಶವೆಲ್ಲವೂ ತಳ ಸೇರಿ ಮೇಲಿನ ನೀರು ಸಹಜ ನೀರಿನಂತಾಗುತ್ತದೆ ಎಂಬ ವಿಜ್ಞಾನವನ್ನು ರೂಗಿ ಕುಟುಂಬ ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ನೀರು ತುಂಬಿಸುವ ಮತ್ತು ಪಂಪ್‌ಸೆಟ್ ಚಾಲನೆ ಮಾಡುವ ಸಂಪೂರ್ಣ ವ್ಯವಸ್ಥೆಯನ್ನು ಮೊಬೈಲ್ ಆ್ಯಪ್ ಮೂಲಕವೇ ಆಟೋಮ್ಯಾಟಿಕ್ ನಿಯಂತ್ರಣ ಮಾಡಲಾಗುತ್ತದೆ. ಎಲ್ಲೇ ಕುಳಿತಿದ್ದರೂ ಪಂಪ್‌ಗಳ ಕಾರ್ಯನಿರ್ವಹಣೆಯ ಮಾಹಿತಿ ಇವರ ಬೆರಳ ತುದಿಯಲ್ಲಿದೆ.
ಇದನ್ನೂ ಓದಿ: ಬರ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ: ಘೋಷಿಸಿದ್ದು 2500, ರೈತರ ಖಾತೆಗೆ ಜಮೆ ಆಗಿದ್ದು 1500-2000 ರೂಪಾಯಿ!
ಶಾಪವಾಗಿದ್ದ ಹಳ್ಳವನ್ನೇ ಆದಾಯದ ಗಣಿಗೊಳಿಸಿದ ಸಾಧಕರು:
ಪ್ರತಿವರ್ಷ ಬೆಣ್ಣೆಹಳ್ಳದ ಪ್ರವಾಹದಿಂದ ಬೆಳೆ ಕೊಚ್ಚಿ ಹೋಗಿ ಸದಾ ಹಳ್ಳವನ್ನು ಶಪಿಸುತ್ತಿದ್ದ ರೈತರ ನಡುವೆ, ಬಾಲರೆಡ್ಡಿ ಹಾಗೂ ಅವರ ರೂಗಿ ಕುಟುಂಬಸ್ಥರು ಅದೇ ಹಳ್ಳದ ನೀರನ್ನು ಬಳಸಿಕೊಂಡು ಕೃಷಿಯಲ್ಲಿ ಆವಿಷ್ಕಾರ ಮಾಡಿದ್ದಾರೆ. ಬರದ ನಾಡಿನಲ್ಲೂ ಕೋಟಿ ಕೋಟಿ ಆದಾಯ ಗಳಿಸುತ್ತಾ ಕೃಷಿ ಕ್ಷೇತ್ರಕ್ಕೆ ಹೊಸ ದಾರಿ ದೀಪವಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
