AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ: ಘೋಷಿಸಿದ್ದು 2500, ರೈತರ ಖಾತೆಗೆ ಜಮೆ ಆಗಿದ್ದು 1500-2000 ರೂಪಾಯಿ!

ರೈತರ ಖಾತೆಗೆ ಘೋಷಿಸಿದಂತೆ ₹2,500 ಬರ ಪರಿಹಾರ ನೀಡದೆ ₹1,500 - ₹2,000 ಜಮೆ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಯಾದಗಿರಿ ರೈತರು ಹಾಗೂ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮಾತಿನ ಗ್ಯಾರಂಟಿ ಸಾಕು, ನುಡಿದಂತೆ ನಡೆದು ರೈತರಿಗೆ ಭರವಸೆ ನೀಡಿದ ಸಂಪೂರ್ಣ 2,500 ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಆಗ್ರಹಿಸಿವೆ.

ಬರ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ: ಘೋಷಿಸಿದ್ದು 2500, ರೈತರ ಖಾತೆಗೆ ಜಮೆ ಆಗಿದ್ದು 1500-2000 ರೂಪಾಯಿ!
ಬರ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ
ಅಮೀನ್​ ಸಾಬ್​
| Edited By: |

Updated on:Nov 10, 2026 | 1:44 PM

Share

ಯಾದಗಿರಿ, ನವೆಂಬರ್​ 10: ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಜಮಾ ಮಾಡಿರುವ ಬರ ಪರಿಹಾರ ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದಿದೆ. ರೈತರಿಗೆ ತಲಾ 2,500 ರೂ. ವಿತರಣೆಯಾಗಬೇಕಿತ್ತಾದರೂ ಒಬ್ಬೊಬ್ಬ ರೈತರ ಖಾತೆಗೆ ಒಂದೊಂದು ರೀತಿ ಪರಿಹಾರ ಹಣ ಬಂದಿದೆ. 1500, 2000 ರೂ. ಹಣ ಜಮೆಯಾಗಿರೋದೀಗ ರೈತ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲ ಕಂತಿನಲ್ಲಿ 2,500 ಇನ್​ಪುಟ್ ಸಬ್ಸಿಡಿ ನೀಡಿದ್ದ ಸರ್ಕಾರ, ಎರಡನೇ ಕಂತಿನಲ್ಲಿ ಮತ್ತೆ 2,500 ರೂ. ನೀಡುವುದಾಗಿ ಘೋಷಿಸಿತ್ತು. ಹೀಗಾಗಿ ಒಟ್ಟು 5 ಸಾವಿರ ರೂ. ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ನಿರಾಸೆಯಾಗಿದೆ. ಪರಿಹಾರದ ಹಣದಲ್ಲೂ ತಾರತಮ್ಯ ಯಾಕೆ ಎಂದು ರೈತರು ಪ್ರಶ್ನಿಸಿದ್ದು, ಕೂಡಲೇ ಪೂರ್ಣ ಪರಿಹಾರ ಮೊತ್ತ ಜಮೆ ಮಾಡುವಂತೆ ಒತ್ತಾಯ ಕೇಳಿಬಂದಿದೆ.

ಬಿಜೆಪಿ-ಜೆಡಿಎಸ್​​ ಆಕ್ರೋಶ

ರೈತರಿಗೆ 2,500 ಬರ ಪರಿಹಾರದ ಬದಲು ಕಡಿಮೆ ಹಣ ನೀಡಿದ ವಿಚಾರ ಸಂಬಂಧ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಕಿಡಿ ಕಾರಿದ್ದು, ಗ್ಯಾರಂಟಿ ಯೋಜನೆ ನೆಪದಲ್ಲಿ ರೈತರನ್ನು ಸರ್ಕಾರ ಭಿಕ್ಷುಕರ ರೀತಿ ನೋಡುತ್ತಿದೆ. ಯಾರೂ ಕೂಡ ಇವರ 2000 ರೂ.ಗೆ ಕಾಯ್ದುಕೊಂಡಿಲ್ಲ. ಇದು ದಗಾಕೋರ ಸರ್ಕಾರವಾಗಿದ್ದು, ನೀವು ಬೇಕಾದ್ದು ಮಾಡಿಕೊಳ್ಳಿ ಎಂಬ ಧೋರಣೆಯಲ್ಲಿದ್ದಾರೆ. ನಾವು ಇರೋದೇ ಒಂದು ವರ್ಷ ಎಂಬ ನಿಲುವಿಗೆ ಅವರು ಬಂದಿದ್ದಾರೆ ಎಂದವರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಜೆಡಿಎಸ್​​ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಬರ ಪರಿಹಾರವಾಗಿ 2,500 ನೀಡುವುದಾಗಿ ಭರವಸೆ ನೀಡಿ, ಈಗ ರೈತರ ಖಾತೆಗಳಿಗೆ ಕೇವಲ 1,500ರಿಂದ 2,000 ಮಾತ್ರ ಜಮೆ ಮಾಡಿ ಉಳಿದ ಹಣಕ್ಕೆ ಕತ್ತರಿ ಹಾಕಿದ್ದೇಕೆ? ಮುಖ್ಯಮಂತ್ರಿಗಳೇ, ರಾಜ್ಯದ ಜನತೆಗೆ ನೀಡಿದ ಭರವಸೆಗಳೆಲ್ಲ ಎಲ್ಲಿ ಹೋದವು? ಬರಗಾಲದ ಸಂಕಷ್ಟದಿಂದ ಕಂಗೆಟ್ಟಿರುವ ಅನ್ನದಾತರಿಗೆ ನೀಡುವ ಪರಿಹಾರದಲ್ಲೂ ಇಂತಹ ಕಡಿತವೇಕೆ? ಮಾತಿನ ಗ್ಯಾರಂಟಿ ಸಾಕು, ನುಡಿದಂತೆ ನಡೆದು ರೈತರಿಗೆ ಭರವಸೆ ನೀಡಿದ ಸಂಪೂರ್ಣ 2,500 ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಿ. ರೈತರ ಹಕ್ಕಿನ ಹಣ ನೀಡಲು ಸಾಧ್ಯವಾಗದಿದ್ದರೆ, ಸರ್ಕಾರ ದಿವಾಳಿಯಾಗಿದೆ ಎಂದು ಆರ್ಥಿಕ ಸ್ಥಿತಿಯ ಬಗ್ಗೆ ಘೋಷಿಸಿ ಬಿಡಿ ಎಂದು ತಿಳಿಸಿದೆ.

ಇದನ್ನೂ ಓದಿ: ರೈತರಿಗೆ ದೀಪಾವಳಿ ಗಿಫ್ಟ್: ಬರ ಪರಿಹಾರ ಹೆಚ್ಚಳ, ಮೊದಲ ಕಂತಿನಲ್ಲಿ 2500 ರೂ. ರಿಲೀಸ್

ಸಮಸ್ಯೆ ಬಗೆಹರಿಸುವ ಭರವಸೆ

ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯಾದಗಿರಿ ಮತ್ತು ಗದಗ ಜಿಲ್ಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ರೈತರಿಗೆ ಸಂಪೂರ್ಣ ಹಣ ಹೋಗಿಲ್ಲ ಎಂಬ ಮಾಹಿತಿ ಬಂದಿದೆ. ಇಂದು ಬ್ಯಾಂಕ್ ರಜೆ ಇರುವ ಕಾರಣ ನಾಳೆ ಮಾಹಿತಿ ಪಡೆಯುತ್ತೇನೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ನಿಗದಿಗಿಂತ ಕಡಿಮೆ ಬರ ಪರಿಹಾರ ಹಣ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಮತ್ತೋರ್ವ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದು, ಯಾಕೆ ಆ ರೀತಿ ಆಗಿದೆ ಎಂದು ಪರಿಶೀಲನೆ ಮಾಡುತ್ತೇವೆ. ಕೊಟ್ಟ ಮಾತನ್ನು ಈಡೇರಿಸುತ್ತೇವೆ, ಯಾವ ಅನುಮಾನ ಬೇಡ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:44 pm, Tue, 10 November 26

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಅಮೀನ್​ ಸಾಬ್​ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದಾರೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕ್ರಿಕೆಟ್ ಆಡುವುದು, ಮಾನವೀಯ ಮೌಲ್ಯಗಳುಳ್ಳ ಸುದ್ದಿಗಳನ್ನ ವರದಿ ಮಾಡುವುದು.

Read More