ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಅರ್ಧಕ್ಕೆ ನಿಂತ ಧಾರವಾಡ-ಗೋವಾ ಎರಡು ಮೇಲ್ಸೇತುವೆ ಕಾಮಗಾರಿ

| Updated By: ವಿವೇಕ ಬಿರಾದಾರ

Updated on: Jul 03, 2024 | 10:29 AM

ಧಾರವಾಡದಿಂದ ಗೋವಾದಿಂದ ಸಂರ್ಪಕ ಕಲ್ಪಿಸುವ ಧಾರವಾಡದ ಕೆಲಗೇರಿ ಬಡಾವಣೆ ಹಾಗೂ ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದ ಬಳಿಯ ಎರಡು ಮೇಲ್ಸೇತುವೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಕಾಮಗಾರಿ ಅರ್ಧಕ್ಕೆ ನಿಲ್ಲಲು ಕಾರಣವೇನು? ಈ ಸ್ಟೋರಿ ಓದಿ.

ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಅರ್ಧಕ್ಕೆ ನಿಂತ ಧಾರವಾಡ-ಗೋವಾ ಎರಡು ಮೇಲ್ಸೇತುವೆ ಕಾಮಗಾರಿ
ಧಾರವಾಡ-ಗೋವಾ ರಸ್ತೆ ಮೇಲ್ಸೇತುವೆ ಕಾಮಗಾರಿ
Follow us on

ಧಾರವಾಡ, ಜುಲೈ 03: ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾಕ್ಕೆ (Goa) ಹೋಗಬೇಕೆಂದರೆ ಉತ್ತರ ಕರ್ನಾಟಕದ ಬಹುತೇಕ ಜನರು ಧಾರವಾಡದ (Dharwad) ಮೂಲಕವೇ ಹೋಗಬೇಕು. ಧಾರವಾಡದಿಂದ ಗೋವಾಕ್ಕೆ ಹೋಗಬೇಕೆಂದರೆ ಎರಡು ರೈಲ್ವೆ ಗೇಟ್ ಬರುತ್ತವೆ. ಇದನ್ನು ತಪ್ಪಿಸಲು ಹಲವಾರು ವರ್ಷಗಳ ಹಿಂದೆ ನಿರ್ಮಿಸಲು ಉದ್ದೇಶಿಸಿದ್ದ ಮೇಲ್ಸೇತುವೆಗಳು (Flyover) ಅರ್ಧಕ್ಕೆ ನಿಂತು ಹೋಗಿದ್ದವು. ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ತಂದಿದ್ದರು. ಈ ಸೇತುವೆಗಳು ಮುಗಿಯುವ ಹಂತಕ್ಕೆ ಬಂದರೂ ರಾಜ್ಯ ಸರಕಾರದ ಅವಿವೇಕತನದಿಂದಾಗಿ ಇದೀಗ ಕೆಲಸ ನಿಂತು ಹೋಗಿದೆ.

ಧಾರವಾಡದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಇತ್ತೀಚಿಗೆ ಮತ್ತೆ ಎರಡು ಹೊಸ ರೈಲು ಟ್ರ್ಯಾಕ್ ಆಗಿರುವುದರಿಂದ ರೈಲುಗಳ ಓಡಾಟವೂ ಹೆಚ್ಚಾಗಿದೆ. ಹೀಗಾಗಿ ಗೇಟ್ ತೆರೆದಿರುವುದಕ್ಕಿಂತ ಹೆಚ್ಚು ಮುಚ್ಚಿರುತ್ತದೆ. ಇದೇ ಕಾರಣಕ್ಕೆ ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಲ್ಲದೆ ಇದನ್ನು ಟೋಲ್ ರಸ್ತೆ ಮಾಡಲು ಉದ್ದೇಶಿಸಿ ರಾಜ್ಯ ಸರಕಾರ ಚೆನ್ನೈ ಮೂಲದ ಕಂಪನಿಗೆ ಗುತ್ತಿಗೆ ಕೊಟ್ಟಿತ್ತು.

ಆದರೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಬಳ್ಳಾರಿಯಲ್ಲಿ ಗಣಿ ಚಟುವಟಿಕೆಗೆ ಬ್ರೇಕ್ ಬಿದ್ದಿದ್ದರಿಂದ, ಈ ರಸ್ತೆ ಮೂಲಕ ಓಡಾಡುವ ಲಾರಿಗಳ ಸಂಖ್ಯೆ ಕಡಿಮೆಯಾಗುತ್ತೆ ಅಂತ ಹೇಳಿ ಆ ಕಂಪನಿ ಗುತ್ತಿಗೆಯನ್ನು ಸ್ಥಗಿತಗೊಳಿಸಿತು. ಈ ಹಿನ್ನೆಲೆಯಲ್ಲಿ ಧಾರವಾಡದ ಕೆಲಗೇರಿ ಬಡಾವಣೆ ಹಾಗೂ ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದ ಬಳಿಯ ಎರಡು ಸೇತುವೆಗಳ ಕಾಮಗಾರಿ ಅರ್ಧಕ್ಕೆ ನಿಂತು ಬಿಟ್ಟಿತು. ಸುಮಾರು ಹತ್ತು ವರ್ಷಗಳ ಬಳಿಕ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಎಲ್ಲ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ, ಈ ಎರಡೂ ಸೇತುವೆಗಳ ಪೂರ್ಣಗೊಳಿಸಲು 50 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ತಂದರು. ಇದರಲ್ಲಿ ಅರ್ಧ ಭಾಗವನ್ನು ರಾಜ್ಯ ಸರಕಾರ ನೀಡಬೇಕು. ಆದರೆ ರಾಜ್ಯದಲ್ಲಿ ಹೊಸ ಸರಕಾರ ಬಂದ ಬಳಿಕ ಹಣ ನೀಡದೆ ಇರುವುದರಿಂದ ಸಮಸ್ಯೆಯಾಗಿದೆ.

ಇದನ್ನೂ ಓದಿ: ತಮ್ಮ ಎಡೆಯಲ್ಲಿ ಕತ್ತೆ ಸತ್ತು ಬಿದ್ರೆ, ಬಿಜೆಪಿ ಮೇಲೇಕೆ ಗೂಬೆ ಕೂರಿಸುತ್ತಿರಿ? ಕಾಂಗ್ರೆಸ್ ವಿರುದ್ಧ ಪ್ರಹ್ಲಾದ ಜೋಶಿ ಗರಂ

ಈ ಕಾಮಗಾರಿಯನ್ನು ರೈಲ್ವೆ ಇಲಾಖೆ ನೋಡಿಕೊಳ್ಳುತ್ತಿದ್ದು, ಆ ಇಲಾಖೆಗೆ ರಾಜ್ಯ ಸರಕಾರ ಕಾಮಗಾರಿ ಅರ್ಧದಷ್ಟು ಹಣವನ್ನು ಡೆಪಾಸಿಟ್ ಇಡಬೇಕು. ಆದರೆ ರಾಜ್ಯ ಸರಕಾರ ಇದರ ಬಗ್ಗೆ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಇಷ್ಟೊತ್ತಿಗೆ ಈ ಎರಡೂ ಸೇತುವೆಗಳ ಕೆಲಸ ಮುಕ್ತಾಯವಾಗಬೇಕಿತ್ತು. ಆದರೆ ರಾಜ್ಯ ಸರಕಾರದ ನಿರಾಸಕ್ತಿಯಿಂದಾಗಿ ಕೊನೆಯ ಹಂತದ ಕೆಲಸ ಮುಗಿಯುತ್ತಿಲ್ಲ. ಗುತ್ತಿಗೆ ಪಡೆದಿದ್ದ ಕಂಪನಿಯ ಸುಪರ್ದಿಯಿಂದ ತಮ್ಮ ಸುಪರ್ದಿಗೆ ಪಡೆದು ಕೆಲಸ ಶುರು ಮಾಡಬೇಕಾಗಿದ್ದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ ಕಂಪನಿಯವರೊಂದಿಗೆ ನಿರಂತರವಾಗಿ ಮಾತನಾಡಿ, ಅವರನ್ನು ಒಪ್ಪಿಸಿ ಈ ಕಾಮಗಾರಿ ಶುರು ಮಾಡಿಸುವಲ್ಲಿ ಪ್ರಲ್ಹಾದ ಜೋಶಿ ಪ್ರಮುಖ ಪಾತ್ರ ವಹಿಸಿದ್ದರು.

ರೇಲ್ವೆ ಗೇಟ್​

ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ರಾಜ್ಯ ಸರ್ಕಾರ ಮುಕ್ತಾಯದ ಹಂತಕ್ಕೆ ಬೇಕಾಗಿರುವ ಕೆಲಸವನ್ನು ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ ಹೊರ ಹಾಕಿದ್ದಾರೆ.

ನಿತ್ಯವೂ ಈ ರಸ್ತೆಯ ಮೂಲಕ ಬೇರೆ ರಾಜ್ಯಗಳ ವಾಹನಗಳು ಹೋಗುತ್ತವೆ. ಈ ಎರಡೂ ಗೇಟ್​ಗಳ ಸಮಸ್ಯೆಯಿಂದ ಗಂಟೆಗಟ್ಟಲೇ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಕೂಡಲೆ ಈ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂಬುವುದು ಜನರ ಆಗ್ರಹ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋದಕ್ಕೆ ಈ ಪ್ರಕರಣ ಒಂದು ಒಳ್ಳೆಯ ಉದಾಹರಣೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ