ಧಾರವಾಡ: ರೈತರ ಕೃಷಿ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಗಬೇಕೆಂದು ಕೇಂದ್ರ ಸರ್ಕಾರ ಹೆಸರುಕಾಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರಗಳನ್ನು ಆರಂಭಿಸಲು ಆದೇಶಿಸಿದೆ. ಈ ಕೇಂದ್ರಗಳಲ್ಲಿ ರೈತರು ನೋಂದಣಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆದಿರೋವಾಗಲೇ ನಿರೀಕ್ಷೆಯೇ ಇಲ್ಲದ ಕಂಟಕವೊಂದು ರೈತರಿಗೆ ಎದುರಾಗಿದೆ. ಇನ್ನೇನು ಖರೀದಿ ಕೇಂದ್ರಕ್ಕೆ ಹೆಸರುಕಾಳನ್ನು ತರಬೇಕು ಅಂದುಕೊಳ್ಳುತ್ತಿರುವಾಗಲೇ ತಾಂತ್ರಿಕ ಸಮಸ್ಯೆಯೊಂದು ರೈತರನ್ನು ಮತ್ತೆ ಚಿಂತೆಗೀಡು ಮಾಡಿದೆ. ಹೆಸರುಕಾಳಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಇರುವುದರಿಂದ ಖರೀದಿ ಕೇಂದ್ರದಲ್ಲಿ ತೆಗೆದುಕೊಳ್ಳಲಾಗುತ್ತಿಲ್ಲ.
ಧಾರವಾಡ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾಗಿರೋ ಹೆಸರು ಈ ಸಲ ಚೆನ್ನಾಗಿಯೇ ಉತ್ಪನ್ನ ಕೊಟ್ಟಿದೆ. ಈಗಾಗಲೇ ಹೆಸರುಕಾಳನ್ನು ರಾಶಿ ಮಾಡಿ, ಕಾಳುಗಳನ್ನು ಸಂಸ್ಕರಿಸಿ, ಚೀಲಗಳಲ್ಲಿ ತುಂಬಿ ಇಟ್ಟುಕೊಂಡಿರೋ ರೈತರು ಸರ್ಕಾರದ ಖರೀದಿ ಕೇಂದ್ರಕ್ಕೆ ಇಷ್ಟು ದಿನ ಕಾಯುತ್ತ ಕುಳಿತಿದ್ದರು. ಇತ್ತೀಚೆಗೆ ಸರ್ಕಾರ ಬೆಂಬಲ ಬೆಲೆಯನ್ನೂ ಘೋಷಣೆ ಮಾಡಿ ಜಿಲ್ಲೆಯ 17 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಇಲ್ಲಿಯವರೆಗೆ 10,530 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ವಾರದ ಆರಂಭದಿಂದಲೇ ಹೆಸರಿನ ಖರೀದಿಯೂ ಆರಂಭಗೊಳ್ಳಬೇಕಿತ್ತು. ಆದರೆ ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಹೆಸರು ಪಡೆಯಬೇಕಾದ್ರೆ ತೇವಾಂಶ ಶೇಕಡಾ 12 ರೊಳಗೆ ಇರಬೇಕು. ಆದರೆ ಸದ್ಯ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ಮಳೆ ಆಗುತ್ತಿರುವ ಕಾರಣಕ್ಕೆ ತೇವಾಂಶ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿಗೆ ಇದೆ. ಹೀಗಾಗಿ ಎಲ್ಲಿಯೂ ಹೆಸರನ್ನು ಖರೀದಿ ಮಾಡುತ್ತಲೇ ಇಲ್ಲ. ಕೇಂದ್ರಗಳಿಗೆ ಬರುತ್ತಿರೋ ರೈತರು ಕಾಳುಗಳನ್ನು ಪರೀಕ್ಷಿಸಿಕೊಂಡು ನಿರಾಸೆಯಿಂದಲೇ ಮರಳಿ ಹೋಗುತ್ತಿದ್ದಾರೆ.
ಜಿಲ್ಲೆಯಲ್ಲಿ ಬೆಳೆದಿರುವ ಹೆಸರಿನ ಪ್ರಮಾಣವೆಷ್ಟು?
ಧಾರವಾಡ ಜಿಲ್ಲೆಯಲ್ಲಿ ಒಟ್ಟು 52 ಸಾವಿರದ 931 ಹೆಕ್ಟೇರ್ ಪ್ರದೇಶದಲ್ಲಿ ಈ ಸಲ ಹೆಸರು ಬೆಳೆಯಲಾಗಿತ್ತು. ಅದರಿಂದ ಅಂದಾಜು 6 ಲಕ್ಷ ಕ್ವಿಂಟಲ್ ಉತ್ಪನ್ನ ಬಂದಿದೆ. ಸರ್ಕಾರ ಪ್ರತಿ ಕ್ವಿಂಟಲ್ ಗೆ 7275 ರೂಪಾಯಿ ಬೆಲೆ ನಿಗದಿ ಮಾಡಿದೆ. ಆಗಸ್ಟ್ 26ರಿಂದಲೇ ಖರೀದಿ ಕೇಂದ್ರಗಳ ಪ್ರಕ್ರಿಯೆ ಆರಂಭಗೊಂಡಿದ್ದು, ಇದು 90 ದಿನಗಳೊಳಗೆ ಅಂತ್ಯಗೊಳ್ಳಬೇಕಾಗಿದೆ. ಹೀಗಾಗಿ ಅದರಲ್ಲಿ ಒಂದು ತಿಂಗಳು ಈಗಾಗಲೇ ಮುಗಿದು ಹೋಗಿದ್ದು, ತೇವಾಂಶ ಕಡಿಮೆ ಮಾಡಿಕೊಳ್ಳುವುದೇ ರೈತರಿಗೆ ಸವಾಲಾಗಿದೆ. ಆದರೆ ಖಾಸಗಿಯವರು ಮಾತ್ರ ಯಾವುದೇ ತೇವಾಂಶ ನೋಡದೆಯೇ ಹೆಸರು ಖರೀದಿ ಮಾಡುತ್ತಿದ್ದಾರೆ. ಆದರೆ ಅವರು ನೀಡುತ್ತಿರುವ ಹಣ ಸರ್ಕಾರ ನಿಗದಿಪಡಿಸಿರೋ ದರಕ್ಕಿಂತಲೂ ತೀರಾ ಕಡಿಮೆ ಇದೆ. ಹೀಗಾಗಿ ತೇವಾಂಶದ ಪ್ರಮಾಣದಲ್ಲಿ ಸ್ವಲ್ಪ ರಿಯಾಯಿತಿ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಖಾಸಗಿಯವರಿಗೆ ಹೆಸರು ಮಾರಾಟ
ಸದ್ಯ ಧಾರವಾಡ ಜಿಲ್ಲೆಯಲ್ಲಿ ಹೆಸರು ಬೆಳೆದ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂಬ ಹಾಗಾಗಿದೆ. ತೇವಾಂಶ ಕಡಿಮೆ ಮಾಡಬೇಕಾದ್ರೆ ಹೆಸರನ್ನು ಒಣಗಿಸಬೇಕು. ಆದರೆ ಒಣಗಿಸಲು ಅನುಕೂಲಕರವಾದ ವಾತಾವರಣ ಇಲ್ಲ. ಹೀಗಾಗಿ ಇಕ್ಕಟ್ಟಿನಲ್ಲಿ ಸಿಲುಕಿರೋ ರೈತರು ಹೆಸರು ಇಟ್ಟುಕೊಳ್ಳಲಾಗದೇ ಅನಿವಾರ್ಯವಾಗಿ ಖಾಸಗಿಯವರಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ತೇವಾಂಶದಲ್ಲಿ ರಿಯಾಯತಿ ನೀಡಿದರೆ ರೈತರಿಗೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ಹರಿಸಬೇಕಿದೆ.
ಕಷ್ಟಪಟ್ಟು ಬೆಳೆದಿದ್ದೇವೆ, ಖರೀದಿಯಾಗದಿದ್ದರೆ ಗತಿ ಏನು? – ಮಲ್ಲಿಕಾರ್ಜುನಗೌಡ
ಎಲ್ಲ ಕಷ್ಟಗಳ ನಡುವೆಯೂ ನಾವು ಹೆಸರನ್ನು ಬೆಳೆದಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಕೊಂಚ ಉತ್ತಮ ಬೆಳೆ ಬಂದಿದೆ. ಆದರೆ ತೇವಾಂಶದ ನೆಪ ಹೇಳಿ ಖರೀದಿ ಕೇಂದ್ರದಲ್ಲಿ ಖರೀದಿ ಮಾಡದಿದ್ದರೆ ನಮ್ಮ ಗತಿ ಏನು? ಎಲ್ಲ ರೈತರ ಹೆಸರನ್ನು ಪರಿಕ್ಷಿಸಿದಾಗ ಕನಿಷ್ಟ ಶೇ 18 ಕ್ಕಿಂತ ಹೆಚ್ಚಿಗೆ ಬರುತ್ತಿದೆ. ಹೀಗಾದರೆ ಖರೀದಿ ಕೇಂದ್ರ ಆರಂಭಿಸಿದ ಉದ್ದೇಶವಾದರೂ ಏನು? ಎಂದು ಪ್ರಶ್ನಿಸುತ್ತಾರೆ ರೈತ ಮಲ್ಲಿಕಾರ್ಜುನಗೌಡ.
ಟಿವಿ9 ಡಿಜಿಟಲ್ ಜತೆ ಮಾತನಾಡಿದ ಎಪಿಎಂಸಿಯಲ್ಲಿರುವ ಖರೀದಿ ಕೇಂದ್ರದ ಅಧಿಕಾರಿ ಬಸವರಾಜ, ಬೆಂಬಲ ಬೆಲೆಯಡಿ ಖರೀದಿ ಮಾಡಿಕೊಳ್ಳೋದು ಕೇಂದ್ರ ಸರ್ಕಾರದ ನಿಯಮಗಳ ಅಡಿಯಲ್ಲಿಯೇ ನಡೆಯಬೇಕು. ಹೀಗಾಗಿ ತೇವಾಂಶ ಹೆಚ್ಚು ಇರೋದ್ರಿಂದ ಖರೀದಿ ನಡೆಯುತ್ತಿಲ್ಲ. ಇದರಲ್ಲಿ ನಾವು ಕೂಡ ಏನನ್ನೂ ಮಾಡುವಂತಿಲ್ಲ. ಸರಕಾರ ಈ ಬಗ್ಗೆ ಹೊಸ ನಿಯಮ ರೂಪಿಸಿದರಷ್ಟೇ ನಾವು ಅದನ್ನು ಪಾಲಿಸುತ್ತೇವೆ ಅನ್ನುತ್ತಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಟಿವಿ-9, ಧಾರವಾಡ
ಇದನ್ನೂ ಓದಿ:
ಕೊಪ್ಪಳ: ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ ಎಂದು ದಂಡ ಹಾಕಿದ್ದ ಐವರ ಬಂಧನ
ಕೋಲಾರ: ರೂಬಿಕ್ಸ್ ಕ್ಯೂಬ್ನಲ್ಲಿ ಸಾಧನೆಯ ದಾಖಲೆ ಬರೆದ ಬಾಲಕಿ; 14ನೇ ವಯಸ್ಸಿಗೆ 600 ಮಕ್ಕಳಿಗೆ ಶಿಕ್ಷಕಿ
(Dharwad Mung Bean producing farmers have selling problems due to high Moisturization)