ಕೋಲಾರ: ರೂಬಿಕ್ಸ್ ಕ್ಯೂಬ್ನಲ್ಲಿ ಸಾಧನೆಯ ದಾಖಲೆ ಬರೆದ ಬಾಲಕಿ; 14ನೇ ವಯಸ್ಸಿಗೆ 600 ಮಕ್ಕಳಿಗೆ ಶಿಕ್ಷಕಿ
ಈ ಬಾಲಕಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿ 8 ವಿಶ್ವ ದಾಖಲೆ ಪಡೆದಿದ್ದಾಳೆ. ಇತ್ತೀಚಿಗೆ ಅಮೆರಿಕಾದ ನಳಂದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪ್ರಸ್ತುತ 9ನೇ ತರಗತಿ ಓದುತ್ತಿರುವ ಪಟ್ಟಣದ ಬಾಲಕಿ ಯುಕ್ತಾ 56 ಬಗೆಯ ರೂಬಿಕ್ಸ್ ಕ್ಯೂಬ್‌ಗಳ ಬಗ್ಗೆ ಪರಿಣಿತಿ ಪಡೆದಿದ್ದು, ಆನ್‌ಲೈನ್ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾಳೆ.
ಕೋಲಾರ: ರೂಬಿಕ್ಸ್ ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹಿರೋ ಅಥವಾ ವಿಲನ್ಗಳ ಕೈನಲ್ಲಿ ಹೆಚ್ಚು ಕಾಣಸಿಗುತ್ತದೆ. ಇದನ್ನು ಹಿಡಿದುಕೊಂಡು ತಿರುಗಿಸುತ್ತಾ, ಆ ಬಣ್ಣವನ್ನು ಹೊಂದಾಣಿಕೆ ಮಾಡುತ್ತಿರುತ್ತಾರೆ. ಈ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಆದರೆ ಅದರಲ್ಲೇ ಒಂದು ಸಾಧನೆ ಮಾಡಿ ಜನ ಮೆಚ್ಚುಗೆ ಪಡೆದುಕೊಳ್ಳಬಹುದು ಎನ್ನುವುದನ್ನು ಇಲ್ಲೊಂದು ಬಾಲಕಿ ಸಾಧಿಸಿ ತೋರಿಸಿದ್ದಾಳೆ. ಏನದು ಬಾಲಕಿ ಮಾಡಿದ ಸಾಧನೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.
ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಎಲೆಪೇಟೆಯ ಕೊಲ್ಲ ಕಮಲ್ ವಿಜಯ್ ಮತ್ತು ವಿದ್ಯಾಲಕ್ಷ್ಮೀ ದಂಪತಿಗಳ ಪುತ್ರಿ ಯುಕ್ತಾ ರೂಬಿಕ್ಸ್ನಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾಧೆಗೆ ತಕ್ಕಂತೆ ಪಟ್ಟಣದ 14 ವರ್ಷದ ಯುಕ್ತಾ ವಿಶ್ವದ ಕಿರಿಯ ರೂಬಿಕ್ಸ್ ಕ್ಯೂಬ್ಸ್ ಶಿಕ್ಷಕಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಹದಿನಾಲ್ಕರ ಬಾಲಕಿ ಶಿಕ್ಷಕಿಯಾಗಿದ್ದು ಹೇಗೆ? ಈ ಬಾಲಕಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿ 8 ವಿಶ್ವ ದಾಖಲೆ ಪಡೆದಿದ್ದಾಳೆ. ಇತ್ತೀಚಿಗೆ ಅಮೆರಿಕಾದ ನಳಂದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪ್ರಸ್ತುತ 9ನೇ ತರಗತಿ ಓದುತ್ತಿರುವ ಪಟ್ಟಣದ ಬಾಲಕಿ ಯುಕ್ತಾ 56 ಬಗೆಯ ರೂಬಿಕ್ಸ್ ಕ್ಯೂಬ್‌ಗಳ ಬಗ್ಗೆ ಪರಿಣಿತಿ ಪಡೆದಿದ್ದು, ಆನ್‌ಲೈನ್ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾಳೆ. ಕ್ರ್ಯಾಕ್ ಎ ಕ್ಯೂಬ್ ಎನ್ನುವ ಹೆಸರಲ್ಲಿ ಯು ಟ್ಯೂಬ್ ಚಾನಲ್ ತೆರೆದು, ತಾನು ಅಭ್ಯಾಸ ಮಾಡುವ ವಿವಿಧ ರೀತಿಯ ವಿಡಿಯೋ ಅಪ್ಲೋಡ್ ಮಾಡಿದ್ದಾಳೆ. ಇದುವರೆಗೂ ದೇಶ ಸೇರಿದಂತೆ ವಿಶ್ವಾದ್ಯಂತ 600 ಮಕ್ಕಳಿಗೆ ಆನ್‌ಲೈನ್ ತರಬೇತಿ ನೀಡುತ್ತಿದ್ದಾಳೆ.
ಲಾಕ್ಡೌನ್ ಸಮಯದಲ್ಲಿ ಹೆಚ್ಚಾದ ಆಸಕ್ತಿ! ತನ್ನ ತಾಯಿಯ ಆಸೆಯಂತೆ ಎರಡು ವರ್ಷ ರೂಬಿಕ್ಸ್ ಕ್ಯೂಬ್ ತರಬೇತಿ ಪಡೆದ ಯುಕ್ತಾ, ನಂತರ ಇದರ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾಳೆ. ಆದರೆ ಕಳೆದ ಲಾಕ್ಡೌನ್ ಸಂದರ್ಭದಲ್ಲಿ ರೂಬಿಕ್ಸ್ ಕ್ಯೂಬ್ ಬಗ್ಗೆ ಆಸಕ್ತಿ ತೋರಿದ ಯುಕ್ತಾ ನಂತರ ಹಿಂತಿರುಗಿ ನೋಡಿಲ್ಲ. ಸುಮಾರು 56 ಬಗೆಯ ರೂಬಿಕ್ಸ್ಗಳನ್ನು ಕೇವಲ 30 ಸೆಕೆಂಡ್ಗಳಲ್ಲಿ ಕ್ಲಿಯರ್ ಮಾಡಿ ಎಲ್ಲಾರನ್ನು ವಿಸ್ಮಯಗೊಳಿಸುತ್ತಾಳೆ. ಜೊತಗೆ ರೂಬಿಕ್ಸ್ ಕುರಿತು ಪುಸಕ್ತವನ್ನು ಬರೆದು ಯುವ ಲೇಖಕಿ ಸಹ ಆಗಿದ್ದಾಳೆ.
ಈ ಬಗ್ಗೆ ಈಗಾಗಲೇ ಬುಕ್ ಆಫ್ ರೆಕಾರ್ಡ್ಸ್ಗಳ್ನು ಪಡೆದಿರುವ ಯುಕ್ತಾ, ಗಿನ್ನಿಸ್ ದಾಖಲೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯದಲ್ಲಿ ಗ್ರಿನ್ನಿಸ್ ದಾಖಲೆ ಸೇರಲಿರುವ ಯುಕ್ತಾಳ ಪ್ರತಿಭೆ ಬಗ್ಗೆ ತಂದೆ ತಾಯಿಗೆ ಎಲ್ಲಿಲ್ಲದ ಮೆಚ್ಚುಗೆ, ಸಂತೋಷ ತಂದಿದೆ. ಈಗಾಗಲೇ ವಿಶ್ವಾದ್ಯಾಂತ ಹೆಸರು ಮಾಡಿರುವ ಯುಕ್ತಾ ಗಿನ್ನಿಸ್ ದಾಖಲೆ ಸೇರುವ ಮೂಲಕ ಕೋಲಾರ ಜಿಲ್ಲೆಯ ಬಂಗಾರದ ಮಗಳು ಆಗಲಿ ಎನ್ನುವುದು ತಾಯಿಯ ಆಶಯ.
ಒಟ್ಟಾರೆ ಸಾಧನೆ ಮಾಡಬೇಕೆಂದರೆ ವಯಸ್ಸಿನ ಮಿತಿ ಇಲ್ಲ. ಆಸಕ್ತಿಯೊಂದೇ ಮೂಲ ಮಂತ್ರ ಎನ್ನುವಂತೆ ಯುಕ್ತಾಳ ಸಾಧನೆ ಕಂಡು ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತಷ್ಟು ಜನ ಆಶ್ಚರ್ಯ ಕೂಡಾ ವ್ಯಕ್ತಪಡಿಸಿದ್ದಾರೆ. ಸದ್ಯ ಸಾಧನೆ ಹಾದಿಯಲ್ಲಿರುವ ಯುಕ್ತಾ ಮುಂದೆ ಗಿನ್ನಿಸ್ ದಾಖಲೆ ಮಾಡಿ ಜಿಲ್ಲೆಗೆ ಕೀರ್ತಿ ತರಲಿ ಎನ್ನುವುದು ನಮ್ಮೆಲ್ಲರ ಆಶಯ.
ವರದಿ: ರಾಜೇಂದ್ರ ಸಿಂಹ
ಇದನ್ನೂ ಓದಿ: ಫೇಸ್ಬುಕ್ ಪುಟದಲ್ಲಿ ಕೊವಿಡ್ ಸಂಬಂಧಿತ ಮಾಹಿತಿ ಒದಗಿಸುವ ಕೇರಳದ ವ್ಯಕ್ತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವ
ಸಾಲುಮರದ ತಿಮ್ಮಕ್ಕಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Published On - 8:49 am, Wed, 22 September 21