Dharma Dangal: ಮತ್ತೆ ಧರ್ಮ ದಂಗಲ್ ಶುರು? ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಒಡೆದ ಪ್ರಕರಣಕ್ಕೆ ಮತ್ತೆ ಜೀವ
Dharwad Nuggikeri Anjaneya Temple: ಕಳೆದ ವರ್ಷ ಏಪ್ರಿಲ್ 9 ರಂದು ಧಾರವಾಡ ತಾಲೂಕಿನ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಶ್ರೀರಾಮ ಸೇನೆ ಕಾರ್ಯಕರ್ತರು ಗಲಾಟೆ ಮಾಡಿದ್ದರು. ಇದೀಗ ಅದೇ ದೇವಸ್ಥಾನದಲ್ಲಿ ಮತ್ತೆ ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಅಂತಾ ಸಂಘಟನೆ ಕಾರ್ಯಕರ್ತರು ಮತ್ತೊಮ್ಮೆ ಹೋರಾಟ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಧರ್ಮ ದಂಗಲ್ ವಿಚಾರ ಹಿಂದೆ ಸರಿದಿತ್ತು. ಆದರೆ ಇದೀಗ ಕಳೆದ ವರ್ಷ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಒಡೆದ ಪ್ರಕರಣಕ್ಕೆ (Dharwad Nuggikeri Anjaneya Temple Dharma Dangal) ಮತ್ತೆ ಜೀವ ಬಂದಿದೆ. ಇದಕ್ಕೆ ಕಾರಣ ಹಿಂದೂ ದೇವಸ್ಥಾನಗಳಲ್ಲಿ ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಅನ್ನೋ ಹಿಂದೂಪರ ಸಂಘಟನೆಗಳ ಆಗ್ರಹ. ಆ ಆಗ್ರಹ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅದರಲ್ಲೂ ಮುಸ್ಲಿಂ ವ್ಯಾಪಾರಿಯ (Muslim Trader) ಕಲ್ಲಂಗಡಿ ಹಣ್ಣು ಒಡೆದಿದ್ದ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡಿತ್ತು. ಇದೀಗ ಅದೇ ದೇವಸ್ಥಾನದಲ್ಲಿ ಮತ್ತೆ ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಅಂತಾ ಸಂಘಟನೆ ಕಾರ್ಯಕರ್ತರು ಆಗ್ರಹಿಸಿ, ಮತ್ತೊಮ್ಮೆ ಹೋರಾಟ ಆರಂಭಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 9 ರಂದು ಧಾರವಾಡ ತಾಲೂಕಿನ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಘಟನೆಯೊಂದು ಜರುಗಿತ್ತು. ಶ್ರೀರಾಮ ಸೇನೆ ಕಾರ್ಯಕರ್ತರು ಈ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಗಲಾಟೆ ಮಾಡಿದ್ದರು. ಯಾವುದೇ ಕಾರಣಕ್ಕೂ ಹಿಂದೂ ದೇವಸ್ಥಾನಗಳ ಬಳಿಕ ಬೇರೆ ಧರ್ಮದವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಅನ್ನೋದಕ್ಕೆ ಈ ಗಲಾಟೆ ಮಾಡಲಾಗಿತ್ತು.
ಇದು ರಾಷ್ಟ್ರಾದ್ಯಂತ ಸಾಕಷ್ಟು ಸುದ್ದಿ ಮಾಡಿತ್ತು. ಅದಾದ ಬಳಿಕ ಶ್ರೀರಾಮ ಸೇನೆ ಕಾರ್ಯಕರ್ತರ ಬಂಧನವೂ ಆಗಿತ್ತು, ಬಳಿಕ ಜಾಮೀನಿನ ಮೇಲೆ ಅವರು ಬಿಡುಗಡೆ ಕೂಡ ಆಗಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಅಸ್ತಿತ್ವಕ್ಕೆ ಬಂತು. ಯಾವಾಗ ಹೊಸ ಸರಕಾರ ಅಸ್ತಿತ್ವಕ್ಕೆ ಬಂತೋ ಆಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೊಂಚ ಸೈಲೆಂಟ್ ಆಗಿದ್ದರು. ಆದರೆ ಇದೀಗ ಮತ್ತೆ ಬಜರಂಗದಳ ಕಾರ್ಯಕರ್ತರು ಹೋರಾಟವನ್ನು ಶುರು ಮಾಡಿದ್ದಾರೆ.
ದೇವಾಲಯಗಳ ಬಳಿ ಹಿಂದೂಗಳನ್ನು ಹೊರತುಪಡಿಸಿ ಬೇರೆಯವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಅನ್ನೋ ಹೋರಾಟವನ್ನು ಮತ್ತೆ ಶುರು ಮಾಡಿದ್ದಾರೆ. ರಾಷ್ಟ್ರಾದ್ಯಂತ ಸುದ್ದಿಗೆ ಕಾರಣವಾಗಿದ್ದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಿಂದಲೇ ಇದೀಗ ಹೋರಾಟ ಆರಂಭಿಸಿದ್ದು, ಯಾವುದೇ ಕಾರಣಕ್ಕೂ ಹಿಂದೂಯೇತರರಿಗೆ ಅವಕಾಶ ನೀಡಬಾರದು ಅಂತಾ ಶಿವಾನಂದ ಸತ್ತಿಗೇರಿ, ಬಜರಂಗದಳ ವಿಭಾಗೀಯ ಸಂಚಾಲಕ ಆಗ್ರಹಿಸಿದ್ದಾರೆ.
ಈ ದೇವಸ್ಥಾನದಲ್ಲಿ ಅನೇಕರಿಗೆ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಲಾಗಿತ್ತು. ಈ ವೇಳೆ ಅವರಲ್ಲಿ ಮುಸ್ಲಿಂ ವ್ಯಾಪಾರಿಗಳು ಕೂಡ ಇದ್ದರು. ಇದರಲ್ಲಿ ಒಬ್ಬ ವ್ಯಾಪಾರಿ ಕಲ್ಲಂಗಡಿ ವ್ಯಾಪಾರಿಯಾಗಿದ್ದ. ಆ ವ್ಯಾಪಾರಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು, ಆತ ಮಾರಾಟ ಮಾಡುತ್ತಿದ್ದ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಅದಾದ ಬಳಿಕ ಎಲ್ಲ ಅಂಗಡಿಗಳನ್ನು ದೇವಸ್ಥಾನದವರು ತೆರವುಗೊಳಿಸಿದ್ದರು. ಇದೀಗ ಮತ್ತೆ ಅನೇಕ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಮತ್ತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಹೋರಾಟವನ್ನು ಆರಂಭಿಸಿರೋದು ಸಜಹವಾಗಿ ದೇವಸ್ಥಾನ ಆಡಳಿತ ಮಂಡಳಿಗೆ ಆತಂಕವುಂಟಾಗಿದೆ. ಇದರಿಂದಾಗಿ ಅವರು ಕೂಡ ಬಜರಂಗದಳದವರ ಮನವಿಯನ್ನು ಪರಿಗಣಿಸೋದಾಗಿ ಹೇಳಿದ್ದಾರೆ.
ಇದೇ ವೇಳೆ ಆಡಳಿತ ಮಂಡಳಿಯವರು ರಿಸ್ಕ್ ತೆಗೆದುಕೊಳ್ಳಲು ಕೂಡ ತಯಾರಿಲ್ಲ. ಕಳೆದ ವರ್ಷ ಕಲ್ಲಂಗಡಿ ಒಡೆದ ಪ್ರಕರಣ ನಡೆದ ಬಳಿಕ ಎಲ್ಲ ಅಂಗಡಿ ತೆರವುಗೊಳಿಸಿ, ಮತ್ಯಾರಿಗೂ ಅವಕಾಶವನ್ನೇ ಕಲ್ಪಿಸಿರಲಿಲ್ಲ. ಇದೀಗ ಅದೇ ನೀತಿಯನ್ನು ಮುಂದುವರೆಸಲು ಪ್ಲ್ಯಾನ್ ಮಾಡಲಾಗಿದೆಯಂತೆ. ಒಟ್ಟಿನಲ್ಲಿ ಹಲವಾರು ತಿಂಗಳುಗಳ ಬಳಿಕ ಮತ್ತೆ ಧರ್ಮ ದಂಗಲ್ ಶುರುವಾಗಿದೆ. ಈ ಬಾರಿ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ