ಯಾವುದಾದರೂ ಒಂದು ಕೇಸ್‌ನಲ್ಲಿ ವ್ಯಕ್ತಿಯೊಬ್ಬ ನಾಪತ್ತೆಯಾಗಿ ಬಿಟ್ಟರೆ, ಆತ ಮಾಡಿರೋ ಅಪರಾಧದ ಸ್ವರೂಪವನ್ನು ಪರಿಗಣಿಸಿ ಅತನನ್ನು ಹುಡುಕುವುದಕ್ಕೆ ಪೊಲೀಸರು ಶ್ರಮ ಪಡೋದು ಸಾಮಾನ್ಯ. ಅದರಲ್ಲಿಯೂ ಕಳ್ಳತನ ಇಲ್ಲವೇ ಕೊಲೆಯಂತ ಕೇಸ್ ಗಳಿದ್ದರಂತೂ ವ್ಯಕ್ತಿ ಎಷ್ಟೇ ವರ್ಷ ಎಲ್ಲಿಯೇ ಬಚ್ಚಿಟ್ಟುಕೊಂಡಿರೂ ಪೊಲೀಸರು (Dharwad Police) ಬಿಡೋದೇ ಇಲ್ಲ. ಆದರೆ ಧಾರವಾಡದಲ್ಲಿ (Dharwad) ವ್ಯಕ್ತಿಯೊಬ್ಬ ಚುನಾವಣೆ ವೇಳೆಯಲ್ಲಿ ಗಲಾಟೆ ಮಾಡಿ ಊರು ಬಿಟ್ಟವನು 28 ವರ್ಷಗಳ ಬಳಿಕ ಪೊಲೀಸ್ ಅತಿಥಿಯಾಗಿದ್ದಾನೆ (Arrest)!
ಈ ಫೊಟೋದಲ್ಲಿರೋ ಈ ವ್ಯಕ್ತಿಯ ಹೆಸರು ಚಂದ್ರಪ್ಪ ಹುರುಳಿ. ಈತನಿಗೆ ಈಗ 60 ವರ್ಷ ವಯಸ್ಸು. ಆದರೆ ಈತ 32 ವಯಸ್ಸಿನ ಯುವಕನಿದ್ದಾಗ ಮಾಡಿದ ತಪ್ಪೊಂದಕ್ಕೆ ಈಗ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ. ಹೌದು; ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಈತ ತನ್ನೂರ ಬಿಟ್ಟು ಹೋಗಿ ಮೈಸೂರು ಸೇರಿಕೊಂಡಿದ್ದನು. ಆದ್ರೆ ಈಗ ಸಿಕ್ಕಿ ಬಿದಿದ್ದಾನೆ.
1994ರಲ್ಲಿ ನಡೆದ ಗ್ರಾಪಂ ಚುನಾವಣೆ ವೇಳೆಯಲ್ಲಿ ಗಲಾಟೆ ಮಾಡಿದ್ದ. ಆಗ ಈತನ ವಿರುದ್ಧ ಸೆಕ್ಷನ್ 143, 147, 148, 341, 324, 504 ಹಾಗೂ 506ರ ಕಲಂ ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆಯೇ ಕುಟುಂಬ ಸಮೇತ ನಾಪತ್ತೆಯಾಗಿದ್ದನು. ಆದರೆ ಈತ ಮೈಸೂರಿನಲ್ಲಿರೋ ಮಾಹಿತಿ ತಿಳಿದು ಪೊಲೀಸರು ಈಗ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಧಾರವಾಡ ಎಸ್ಪಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.
ಇನ್ನು ಈತ ಪೊಲೀಸರಿಗೆ ಸಿಕ್ಕಿಬಿದ್ದ ಹಿನ್ನೆಲೆಯೂ ತುಂಬಾ ರೋಚಕವಾಗಿದೆ. ಈತನು ಊರು ಬಿಟ್ಟು ಬಳಿಕ ಹತ್ತಾರು ಪೊಲೀಸ್ ಅಧಿಕಾರಿಗಳು ಧಾರವಾಡ ಗ್ರಾಮೀಣ ಠಾಣೆಗೆ ಬಂದು ಹೋಗಿದ್ದಾರೆ. ಹೀಗಾಗಿ ಆ ಬಳಿಕ ಯಾರೂ ಸಹ ತಲೆ ಕೆಡಿಸಿಕೊಂಡಿರಲೂ ಇಲ್ಲ. ಆದರೆ ಇತ್ತೀಚೆಗೆ ಕ್ಯಾರಕೊಪ್ಪದ ಕೆಲವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿ ಚಂದ್ರಪ್ಪನ ಮಗ ಸೆಕ್ಯೂರಿಟಿ ಗಾರ್ಡ್ ಆಗಿದ್ದನು.
ತನ್ನೂರಿನ ಜನರನ್ನು ಗುರುತಿಸಿ ದೇವಿಯ ದರ್ಶನವನ್ನೂ ಮಾಡಿಸಿ ಕಳುಹಿಸಿದ್ದನು. ಅಲ್ಲಿಂದ ಮರಳಿ ಬಂದವರು ಊರಿನಲ್ಲಿ ಆತನ ಮಗ ಅಲ್ಲಿದ್ದಾನೆ. ಆತನಿಂದಲೇ ನಮ್ಮ ದರ್ಶನ ಸರಳವಾಯ್ತು ಅಂತೆಲ್ಲ ಮಾತನಾಡಿಕೊಂಡಿದ್ದರು. ಇದು ಹೇಗೋ ಧಾರವಾಡ ಗ್ರಾಮೀಣ ಪೊಲೀಸರ ಕಿವಿಗೂ ಬಿದ್ದಿದೆ.
ಆತ ಹಳೇ ಕೇಸ್ ನ ಆರೋಪಿ ಅನ್ನೋದನ್ನು ತಿಳಿದು ಗ್ರಾಮೀಣ ಪೊಲೀಸರು ಗ್ರಾಮದ ಕೆಲವರೊಂದಿಗೆ ತಾವೂ ಸಹ ಪ್ರವಾಸಿಗರಂತೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿನ ಕೆ.ಆರ್. ಮಿಲ್ ಗೆಸ್ಟ್ ಹೌಸ್ ಹತ್ತಿರ ಆರೋಪಿ ಚಂದ್ರಪ್ಪನನ್ನು ಬಂಧಿಸಿ ಧಾರವಾಡಕ್ಕೆ ಕರೆ ತಂದಿದ್ದಾರೆ. ಪೊಲೀಸರ ಕಾರ್ಯ ಈಗ ಮೆಚ್ಚುಗೆಗೆ ಪಾತ್ರವಾಗಿದೆ.
ಅಪರಾಧ ಮಾಡಿ ತಪ್ಪಿಸಿಕೊಂಡು ಬಿಟ್ಟರೆ, ಪಾತಾಳದಲ್ಲಿಯೇ ಅಡಗಿದ್ದರೂ ಕಾನೂನಿನ ಕೈಗಳು ಸುಮ್ಮನೆ ಬಿಡೋದಿಲ್ಲ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ