Dharwad road accident: ಧಾರವಾಡ ಭೀಕರ ರಸ್ತೆ ಅಪಘಾತಕ್ಕೆ ಒಂದು ವರ್ಷ; ಇನ್ನೂ ಮುಗಿಯದ ರಸ್ತೆ ಅಗಲೀಕರಣ ಕಾಮಗಾರಿ

| Updated By: preethi shettigar

Updated on: Jan 15, 2022 | 11:00 AM

ಈ ಅಪಘಾತ ಬರೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಪಘಾತದಲ್ಲಿ ಅಸುನೀಗಿದವರ ಆತ್ಮಕ್ಕೆ ಶಾಂತಿ ಕೋರಿದ್ದರು. ಈ ಘಟನೆ ನಡೆದ ಬಳಿಕ ಈ ರಸ್ತೆಯನ್ನು ಅಗಲೀಕರಣ ಮಾಡಬೇಕು ಎನ್ನುವ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿತ್ತು.

Dharwad road accident: ಧಾರವಾಡ ಭೀಕರ ರಸ್ತೆ ಅಪಘಾತಕ್ಕೆ ಒಂದು ವರ್ಷ; ಇನ್ನೂ ಮುಗಿಯದ ರಸ್ತೆ ಅಗಲೀಕರಣ ಕಾಮಗಾರಿ
ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ದೊಡ್ಡ ಅಪಘಾತ
Follow us on

ಧಾರವಾಡ: ಅದು ಕಳೆದ ವರ್ಷದ ಜನವರಿ 15, ಧಾರವಾಡದ ಬಳಿ ನಡೆದಿದ್ದ ಘಟನೆಯೊಂದು ಇಡೀ ರಾಜ್ಯದ ಜನರ ಮನವನ್ನೇ ಕಲಕಿತ್ತು. ಅಂದು ಅನೇಕ ಮನೆಗಳ ದೀಪಗಳೇ ನಂದಿ ಹೋಗಿದ್ದವು. ಅದು ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಮರೆಯಲಾಗದ ಕರಾಳ ದಿನ. ಆ ಘಟನೆಗೆ ಇದೀಗ ಒಂದು ವರ್ಷ. ಆದರೆ ಘಟನೆಗೆ ಕಾರಣವಾಗಿದ್ದ ರಸ್ತೆ ಮಾತ್ರ ಅವತ್ತು ಹೇಗಿತ್ತೋ ಇವತ್ತು ಕೂಡ ಹಾಗೆಯೇ ಇದೆ. ಹುಬ್ಬಳ್ಳಿ-ಧಾರವಾಡ ಬೈಪಾಸ್​ನ ಇಟ್ಟಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ (National highway) ಬೆಳಗಿನ ಜಾವು ಸುಮಾರು ಆರು ಗಂಟೆ ಹೊತ್ತಿಗೆ ಟೆಂಪೋ ಟ್ರಾವೆಲ್​ಗೆ (Tempo traveller) ಎದುರಿನಿಂದ ಬಂದ ಮರಳಿನ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ದಾವಣಗೆರೆ ಮೂಲದ 13 ಮಹಿಳೆಯರು ಹಾಗೂ ಚಾಲಕ ಅಸುನೀಗಿದ್ದರು. ಆ ಅಪಘಾತ ನಡೆದು ಇಂದಿಗೆ ಬರೋಬ್ಬರಿ ಒಂದು ವರ್ಷ. ಘಟನೆ ನಡೆದು ಒಂದು ವರ್ಷವಾದರೂ ಇಂದಿಗೂ ಆ ಅಪಘಾತ (Accident) ಯಾರ ಮನಸ್ಸಿನಿಂದಲೂ ಮರೆಯಾಗಿಲ್ಲ.

ಸಂಕ್ರಮಣ ಮುಗಿಸಿ ಅದರ ಮರುದಿನ ದಾವಣಗೆರೆ ಮೂಲದ ಮಹಿಳೆಯರು ಗೋವಾಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಎಲ್ಲರೂ ಪ್ರತಿಷ್ಠಿತ ಕುಟುಂಬದ ಮಹಿಳೆಯರೇ ಆಗಿದ್ದರು. ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ದಾವಣಗೆರೆ ಬಿಟ್ಟಿದ್ದ ವಾಹನ ಸುಮಾರು ಐದೂವರೆ ಗಂಟೆಗೆ ಹುಬ್ಬಳ್ಳಿ ದಾಟಿ ಧಾರವಾಡದತ್ತ ಪ್ರಯಾಣ ಬೆಳೆಸಿತ್ತು. ಆದರೆ ಎದುರಿನಿಂದ ಬಂದಿದ್ದ ಟಿಪ್ಪರ್ ಟೆಂಪೋಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸ್ಥಳದಲ್ಲಿ 12 ಜನ ಮೃತರಾದರೆ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಮೊದಲಿನಿಂದಲೂ ಬೈಪಾಸ್ ರಸ್ತೆಯಲ್ಲಿ ಇಂತಹ ದುರ್ಘಟನೆಗಳು ನಡೆದರೂ ಅತೀ ಹೆಚ್ಚಿನ ಸಾವು-ನೋವು ಕಂಡ ಘಟನೆ ಇದಾಗಿದ್ದರಿಂದ ಈ ರಸ್ತೆಯ ಅಗಲೀಕರಣಕ್ಕೆ ಸಾಕಷ್ಟು ಒತ್ತಡ ಕೇಳಿ ಬಂದಿತ್ತು. ಆದರೆ ಇದಾಗಿ ಒಂದು ವರ್ಷವಾದರೂ ಇದುವರೆಗೂ ಟೆಂಡರ್ ಪ್ರಕ್ರಿಯೆ ಬಿಟ್ಟರೆ ಮತ್ತೇನೂ ನಡೆದೇ ಇಲ್ಲ ಎಂದು ಸ್ಥಳೀಯರಾದ ಮಹೇಶ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅಪಘಾತ ಬರೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಪಘಾತದಲ್ಲಿ ಅಸುನೀಗಿದವರ ಆತ್ಮಕ್ಕೆ ಶಾಂತಿ ಕೋರಿದ್ದರು. ಈ ಘಟನೆ ನಡೆದ ಬಳಿಕ ಈ ರಸ್ತೆಯನ್ನು ಅಗಲೀಕರಣ ಮಾಡಬೇಕು ಎನ್ನುವ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿತ್ತು. ಈ ರಸ್ತೆಯನ್ನು ನಂದಿ ಇನ್ಫ್ರಾಸ್ಟಕ್ಟರ್ ಕಂಪನಿ ನಿರ್ಮಿಸಿ, ನಿರ್ವಹಣೆ ಮಾಡುತ್ತಿದೆ. 2024 ರ ಮೇ ತಿಂಗಳವರೆಗೆ ಅವರೇ ನಿರ್ವಹಣೆ ಮಾಡಬೇಕಿದೆ. ಆದರೆ ಆ ಕಂಪನಿಗೆ ಅಗಲೀಕರಣ ಮಾಡಲು ಇಷ್ಟವಿಲ್ಲದಿದ್ದಕ್ಕೆ ಈ ಸಮಸ್ಯೆ ಇಂದಿಗೂ ಮುಂದುವರೆಯುತ್ತಲೇ ಇದೆ.

ಅಪಘಾತದಲ್ಲಿ ಮೃತಪಟ್ಟ ಮಹಿಳೆಯರು

ಇನ್ನು ಈ ಒಂದು ವರ್ಷದ ಅವಧಿಯಲ್ಲಿ ಮತ್ತೆ ಅನೇಕ ಅಪಘಾತಗಳು ಆಗಿದ್ದು, ಹತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ರಸ್ತೆ ಅಗಲೀಕರಣಕ್ಕೆ ಮನಸ್ಸು ಮಾಡಿದ್ದು, ಆರು ಪಥಗಳನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿವೆ. ಆದರೆ, ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು, ಇವೆಲ್ಲಾ ಮುಗಿಯುವುದಕ್ಕೆ ಎಷ್ಟು ದಿನಗಳು ಬೇಕು ಎಂಬುವುದಕ್ಕೆ ಮಾತ್ರ ನಿಖರವಾದ ಉತ್ತರ ಇಲ್ಲ.

ನೂರಾರು ಅಪಘಾತಗಳು ಹಾಗೂ ಹತ್ತಾರು ಸಾವುಗಳಿಗೆ ಕಾರಣವಾಗಿರೋ ಈ ರಸ್ತೆಯಲ್ಲಿ ಇನ್ನೂ ಎಷ್ಟು ಹೆಣಗಳು ಬೀಳಬೇಕಿದೆಯೋ ಗೊತ್ತಿಲ್ಲ. ಧಾರವಾಡದ ನರೇಂದ್ರ ಬೈಪಾಸ್​ನಿಂದ ಹುಬ್ಬಳ್ಳಿಯ ಗಬ್ಬೂರು ಕ್ರಾಸ್​ವರೆಗೆ ಇರುವ 31 ಕಿ.ಮೀ ರಸ್ತೆ ಅಗಲೀಕರಣಗೊಳಿಸಿಬಿಟ್ಟರೆ ಸಮಸ್ಯೆ ಮುಗಿದೇ ಹೋಗುತ್ತಿದೆ. ಆದರೆ ನಂದಿ ಇನ್ಫ್ರಾಸ್ಟಕ್ಚರ್ ಕಂಪನಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಗಲೀಕರಣ ಪ್ರಕ್ರಿಯೆ ಇಂದಿಗೂ ಹೀಗೆಯೇ ನೆನೆಗುದಿಗೆ ಬಿದ್ದಿದೆ. ಇತ್ತೀಚಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಬಗ್ಗೆ ಉತ್ಸುಕತೆ ತೋರಿಸಿದ್ದಕ್ಕೆ ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಆದಷ್ಟು ಬೇಗನೇ ಎಲ್ಲ ಪ್ರಕ್ರಿಯೆಗಳು ಮುಗಿದು, ರಸ್ತೆ ಅಗಲೀಕರಣವಾದಾಗ ಮಾತ್ರ ಜನರು ಜನರು ನೆಮ್ಮದಿಯಿಂದ ಪ್ರಯಾಣ ಮಾಡುವಂತಾಗಲಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ:
Dharwad road accident ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು

ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ

Published On - 11:00 am, Sat, 15 January 22