ಯುವಜನೋತ್ಸವ ವೇಳೆ ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ಕೈಯಲ್ಲಿ ಬೇಲೂರು ಶಿಲಾಬಾಲಕಿ ಹಿಡಿದು ನಿಂತಿರುವ ಧಾರವಾಡದ ಯುವಕ

| Updated By: ಸಾಧು ಶ್ರೀನಾಥ್​

Updated on: Jan 09, 2023 | 3:54 PM

ಪ್ರಧಾನಿ ಮೋದಿ ನನ್ನ ನೆಚ್ಚಿನ ನಾಯಕ. ನಮ್ಮ ಜಿಲ್ಲೆಯ ಮಣ್ಣಿನಲ್ಲಿಯೇ ತಯಾರಾದ ಕಲಾಕೃತಿಯನ್ನು ಅವರಿಗೆ ಯುವ ಜನೋತ್ಸವದ ವೇಳೆ ಕೊಡಬೇಕು ಅನ್ನೋ ಆಸೆಯಿದೆ. ಜಿಲ್ಲಾಡಳಿತ ಅವಕಾಶ ಒದಗಿಸಿಕೊಟ್ಟರೆ ಅದು ನನ್ನ ಪಾಲಿನ ಮರೆಯಲಾಗದ ಕ್ಷಣವಾಗಲಿದೆ ಅಂತಾ ಹೇಳಿದ್ದಾನೆ ಯುವ ಕಲಾವಿದ ವಿನಾಯಕ ಹಿರೇಮಠ.

ಯುವಜನೋತ್ಸವ ವೇಳೆ ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ಕೈಯಲ್ಲಿ ಬೇಲೂರು ಶಿಲಾಬಾಲಕಿ ಹಿಡಿದು ನಿಂತಿರುವ ಧಾರವಾಡದ ಯುವಕ
ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ಕೈಯಲ್ಲಿ ಬೇಲೂರು ಶಿಲಾಬಾಲಕಿಯನ್ನು ಹಿಡಿದು ನಿಂತಿರುವ ಧಾರವಾಡದ ಯುವಕ
Follow us on

ಕಳೆದ ವರ್ಷ ವಿಶ್ವ ಪ್ರಸಿದ್ಧ ಹಂಪಿಯ ಕಲ್ಲಿನ ರಥವನ್ನು ಮಣ್ಣಿನಲ್ಲಿ ಅರಳಿಸಿದ್ದ ಧಾರವಾಡದ ಯುವಕ ಇದೀಗ ಬೇಲೂರಿನ ಶಿಲಾಬಾಲಿಕೆ ಪ್ರತಿಕೃತಿ ತಯಾರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವ ಬಯಕೆ ವ್ಯಕ್ತಪಡಿಸಿದ್ದಾನೆ. ಬೇಲೂರಿನ ಪ್ರಸಿದ್ಧ ಶಿಲಾಬಾಲಿಕೆ ದರ್ಪಣ ಸುಂದರಿಯ ಕಲಾಕೃತಿಯನ್ನು ಸಿದ್ಧಪಡಿಸಿ, ಮೋದಿ ಅವರ ಬರುವಿಕೆಗಾಗಿ ಕಾಯುತ್ತಿದ್ದಾನೆ. ಧಾರವಾಡ ನಗರದ ಕೆಲಗೇರಿ ಬಡಾವಣೆಯ ಪರಿಸರ ಸ್ನೇಹಿ ಗಣೇಶ ವಿಗ್ರಹ ಕಲಾವಿದ ಮಂಜುನಾಥ ಹಿರೇಮಠ ಅವರ ಮಗ ವಿನಾಯಕ ಹಿರೇಮಠ ಇದೀಗ ಇಂಥದ್ದೊಂದು ಕಲಾಕೃತಿ ತಯಾರಿಸಿದ್ದಾನೆ. ಪ್ರತಿದಿನ ಸುಮಾರು 6 ತಾಸುಗಳಂತೆ 12 ದಿನಗಳ ಕಾಲ ವಿನಾಯಕ ಅಲುಗಾಡದೇ ಕುಳಿತು ಇಂಥದ್ದೊಂದು ಅದ್ಭುತ ಕಲಾಕೃತಿಯನ್ನು ಮಣ್ಣಿನಲ್ಲಿಯೇ ತಯಾರಿಸಿದ್ದಾನೆ.

ಈತನ ಕಠಿಣ ಕಲಾತಪಸ್ಸಿನ ಫಲ‌ವಾಗಿ ಇದೀಗ 15 ಇಂಚಿನ ಮಣ್ಣಿನ ದರ್ಪಣ ಸುಂದರಿ ಸಿದ್ಧವಾಗಿದ್ದಾಳೆ. ಕಲಾಕೃತಿ ನಿರ್ಮಾಣವಾದ ಬಳಿಕ ಒಂದು ರಾತ್ರಿಯಿಡೀ ಕುಳಿತು ಫೈನಲ್ ಟಚ್ ಅಪ್ ಕೊಟ್ಟಿದ್ದಾನೆ. ಅಚ್ಚರಿಯ ಸಂಗತಿ ಎಂದರೆ, ಆ ಸುಂದರಿಯ ಮುಖ ಕೈಯಲ್ಲಿನ ಕನ್ನಡಿಯಲ್ಲಿ ಪ್ರತಿಫಲಿಸುವಷ್ಟು ಅದ್ಭುತವಾಗಿ ಕಲಾಕೃತಿ ನಿರ್ಮಾಣವಾಗಿದೆ.

ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಬಿವಿಎ ಮೂರನೇ ವರ್ಷದ ವಿದ್ಯಾರ್ಥಿಯಾಗಿರೋ ವಿನಾಯಕನಿಗೆ ಈ ಕಲಾಕೃತಿ ತಯಾರಿಸುವಾಗ ಯಾವುದೇ ವಿಚಾರ ತಲೆಯಲ್ಲಿ ಇರಲಿಲ್ಲ. ಆದರೆ ಯಾವಾಗ ಕಲಾಕೃತಿ ನಿರ್ಮಾಣವಾಯಿತೋ ಆಗ ಧಾರವಾಡದಲ್ಲಿ ಜ. 12 ರಿಂದ ಐದು ದಿನಗಳ ಕಾಲ ನಡೆಯೋ ರಾಷ್ಟ್ರೀಯ ಯುವಜನೋತ್ಸವ ನೆನಪಿಗೆ ಬಂದಿದೆ. ಈ ಉತ್ಸವದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಹೇಗಿದ್ದರೂ ಇದು ಯುವ ಜನತೆಯ ಕಾರ್ಯಕ್ರಮ. ಹೀಗಾಗಿ ಧಾರವಾಡದ ಮಣ್ಣಿನಲ್ಲಿಯೇ ತಯಾರಾದ ಈ ಕಲಾಕೃತಿಯನ್ನು ಅವರಿಗೆ ನೀಡಿದರೆ ಹೇಗೆ? ಅಂತಾ ತಂದೆ ಮಂಜುನಾಥ ಹಿರೇಮಠರಿಗೆ ಕೇಳಿದ್ದಾನೆ. ನಮ್ಮ ಧಾರವಾಡದ ಮಣ್ಣಿನ ನೆನಪಿಗಾಗಿ ನಮ್ಮ ಕೈಯ್ಯಾರೆ ಉಡುಗೊರೆಯಾಗಿ ನೀಡಲು ಸಾಧ್ಯವಾಗಬಹುದಾ? ಅಂತಾ ಕೇಳುತ್ತಿದ್ದಾನೆ.

ಗಮನ ಸೆಳೆದಿದ್ದ ಹಂಪಿ ಕಲ್ಲಿನ ರಥ ಕಲಾಕೃತಿ:

ಇದಕ್ಕೂ ಮುನ್ನ ವಿನಾಯಕ, ಹಂಪಿಯ ಕಲ್ಲಿನ ರಥದ ಕಲಾಕೃತಿಯನ್ನೂ ಮಣ್ಣಿನಲ್ಲಿಯೇ ನಿರ್ಮಿಸಿದ್ದ. ಇತ್ತೀಚೆಗೆ ಹಂಪಿ ಪ್ರವಾಸಕ್ಕೆ ಹೋದಾಗ, ಅಲ್ಲಿನ  ರಥ ನೋಡಿ ಬಂದಿದ್ದ. ಅಲ್ಲಿಂದ ಬಂದ ಮರುದಿನವೇ ಅಂಥದ್ದೇ ಪುಟ್ಟ ರಥವನ್ನು ಮಣ್ಣಿನಿಂದ ಮಾಡಿ, ಅದರೊಂದಿಗೆ ಫೋಟೋ ತೆಗೆಯಿಸಿಕೊಂಡಿದ್ದ. ಅದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹದಿನೈದು ದಿನಗಳ ಕಾಲ ನಿತ್ಯ ಎರಡು ಗಂಟೆ ಶ್ರಮವಹಿಸಿ ವಿನಾಯಕ ಅದನ್ನು ಮಾದರಿ ಮಾಡಿದ್ದ. , ಅನೇಕ ಕೇಂದ್ರ ಸಚಿವರು, ಗಣ್ಯರು, ರಾಜ್ಯದ ವಿವಿಧ ಸಚಿವರು, ಸಂಸದರು, ಸ್ವಾಮೀಜಿಗಳು, ದೊಡ್ಡ ಕಲಾವಿದರು ಈತನ ಕಲೆ ಮೆಚ್ಚಿ, ಪೋಸ್ಟ್ ಹಾಕಿದ್ದರು. ಇದರ ಜೊತೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಲಾ ಸ್ಪರ್ಧೆಯೊಂದರಲ್ಲಿ ಹೊಯ್ಸಳ ರಾಜ್ಯ ಲಾಂಛನವನ್ನೂ ಮಣ್ಣಿನಿಂದ ತಯಾರಿಸಿ ಮೊದಲ ಬಹುಮಾನವನ್ನೂ ಪಡೆದಿದ್ದ. ವಿನಾಯಕನ ಈ ಕಲಾ ಚತುರತೆ ಇಡೀ ವಿಶ್ವದ ಸೋಶಿಯಲ್ ಮೀಡಿಯಾ ಗಮನ ಸೆಳೆಯುತ್ತಿದ್ದಂತೆಯೇ ಇದು ಧಾರವಾಡದ ಹೆಮ್ಮೆ ಎಂದುಕೊಂಡು ಅನೇಕರು ರಥ ನೋಡೋದಕ್ಕೆ ಮನೆಗೆ ಬಂದಿದ್ದರು.

ತಂದೆಗೆ ತಕ್ಕ ಮಗ:

ವಿನಾಯಕನ ತಂದೆ ಮಂಜುನಾಥ ಹಿರೇಮಠ ತಮ್ಮ ಕಲಾನೈಪುಣ್ಯತೆಯಿಂದಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಅದರಲ್ಲೂ ಅವರು ತಯಾರಿಸೋ ಗಣೇಶ ವಿಗ್ರಹಗಳು ಇಕೋ ಫ್ರೆಂಡ್ಲಿ. ಇಂಥ ಮಂಜುನಾಥ ಹಿರೇಮಠ ಇತ್ತೀಚಿಗೆ ಲಿಂಗೈಕ್ಯರಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಕಲಾಕೃತಿಯನ್ನು ಮಣ್ಣಿನಲ್ಲಿಯೇ ತಯಾರಿಸಿ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಇದೀಗ ವಿನಾಯಕ ದರ್ಪಣ ಸುಂದರಿಯ ಕಲಾಕೃತಿ ನಿರ್ಮಿಸಿರೋ ಹಿನ್ನೆಲೆಯಲ್ಲಿ ಅದನ್ನು ನೋಡಿದ ಕಲಾಸಕ್ತರು, ವಿನಾಯಕ ತಂದೆಗೆ ತಕ್ಕ ಮಗ ಅಂತಾ ಹೇಳುತ್ತಿದ್ದಾರೆ.

ಅವಕಾಶ ಸಿಕ್ಕರೆ ಅದು ಮರೆಯಲಾಗದ ಕ್ಷಣವಾಗಲಿದೆ – ವಿನಾಯಕ ಹಿರೇಮಠ

ಇನ್ನು ಟಿವಿ 9 ಡಿಜಿಟಲ್ ಜೊತೆ ಮಾತನಾಡಿದ ವಿನಾಯಕ ಹಿರೇಮಠ, ಪ್ರಧಾನಿ ನರೇಂದ್ರ ಮೋದಿ ನನ್ನ ನೆಚ್ಚಿನ ನಾಯಕ. ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರೋ ಅವರು ನಮ್ಮೆಲ್ಲೆರ ಕಣ್ಮಣಿ. ನಾನು ದರ್ಪಣ ಸುಂದರಿಯನ್ನು ತಯಾರಿಸುವಾಗ ಈ ವಿಚಾರ ಹೊಳೆದಿರಲಿಲ್ಲ. ಇದೀಗ ಹೇಗಿದ್ದರೂ ಮೋದಿಯವರು ನಮ್ಮ ಜಿಲ್ಲೆಗೆ ಬರಲಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಮಣ್ಣಿನಲ್ಲಿಯೇ ತಯಾರಾದ ಕಲಾಕೃತಿಯನ್ನೇಕೆ ಅವರಿಗೆ ಯುವ ಜನೋತ್ಸವದ ವೇಳೆ ಕೊಡಬಾರದು ಅನ್ನೋ ಯೋಚನೆ ಬಂತು. ಜಿಲ್ಲಾಡಳಿತ ಅವಕಾಶ ಒದಗಿಸಿಕೊಟ್ಟರೆ ಅದು ನನ್ನ ಪಾಲಿನ ಮರೆಯಲಾಗದ ಕ್ಷಣವಾಗಲಿದೆ ಅಂತಾ ಹೇಳಿದ್ದಾನೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ

Published On - 3:21 pm, Mon, 9 January 23