ಕಿತ್ತೂರು ಚೆನ್ನಮ್ಮ ವೀರಗಾಥೆಯ ನಾಟಕ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಧಾರವಾಡದ ರಂಗಾಯಣ: ಪ್ರಧಾನಿ ಮೋದಿಯಿಂದ ಉದ್ಘಾಟನೆ ಸಾಧ್ಯತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 20, 2022 | 3:39 PM

ಧಾರವಾಡದ ರಂಗಾಯಣವು ಸದ್ದಿಲ್ಲದೆ ಕಿತ್ತೂರು ಚೆನ್ನಮ್ಮರ ಯಶೋಗಾಥೆಯನ್ನು ರಂಗದ ಮೇಲೆ ತರಲು ಸಿದ್ಧತೆ ನಡೆಸಿದೆ.

ಕಿತ್ತೂರು ಚೆನ್ನಮ್ಮ ವೀರಗಾಥೆಯ ನಾಟಕ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಧಾರವಾಡದ ರಂಗಾಯಣ: ಪ್ರಧಾನಿ ಮೋದಿಯಿಂದ ಉದ್ಘಾಟನೆ ಸಾಧ್ಯತೆ
ರಂಗಾಯಣ ಧಾರವಾಡ
Follow us on

ಧಾರವಾಡ: ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಕಿತ್ತೂರು ಚೆನ್ನಮ್ಮರ ವೀರಗಾಥೆಯನ್ನು ಮನೆ ಮನೆಗೂ ತಲುಪಿಸಲು ಧಾರವಾಡದ ರಂಗಾಯಣ ಮುಂದಾಗಿದೆ. ರಂಗಾಯಣ (Rangayana) ದೊಡ್ಡ ಸಾಹಸಕ್ಕೆ ಕೈ ಹಾಕಿದೆ. 150 ಜನರು ಚೆನ್ನಮ್ಮನ ನಾಟಕಕ್ಕೆ ಕಳೆದ ಒಂದು ತಿಂಗಳಿನಿಂದ ಹಗಲುರಾತ್ರಿ ತಾಲೀಮು ನಡೆಸಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಾಟಕದ ತಾಲೀಮು ಜೋರಾಗಿ ನಡೆದಿದೆ. ಈಗಾಗಲೇ ಶೇ. 80 ರಷ್ಟು ತಯಾರಿ ಮುಕ್ತಾಯವಾಗಿದ್ದು, ಧ್ವನಿ ಮತ್ತು ಬೆಳಕಿನ ಆರ್ಭಟಕ್ಕೆ ಪೂರಕ ತಂತ್ರಜ್ಞಾನ ಅಳವಡಿಸಿ ಸಜ್ಜುಗೊಳಿಸಲಾಗುತ್ತಿದೆ. ರಂಗ ಪರಿಕರಿಗಳು, ವಸ್ತ್ರವಿನ್ಯಾಸ, ನೆರಳುಬೆಳಕಿನ ಕಾರ್ಯ ಮುಗಿಯುವ ಹಂತದಲ್ಲಿವೆ. ಚೆನ್ನಮ್ಮನ ಪಾತ್ರಕ್ಕೆ ಜೀವ ತುಂಬಲು ಬಯಲಾಟ, ಯಕ್ಷಗಾನ, ಕಥಕ್ಕಳಿ ಸೇರಿದಂತೆ ಎಲ್ಲ ಪರಂಪರೆಯ ಕಲಾಪ್ರಕಾರಗಳನ್ನು ಅಳವಡಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ್, ನಾಟಕದಲ್ಲಿ ಚೆನ್ನಮ್ಮನ ಬಾಲ್ಯ, ಯೌವನ ಮತ್ತು ರಾಣಿ ಆದಾಗಿನ ಹಂತಗಳ ನಟನೆಗೆ ಪ್ರತ್ಯೇಕ ನಟಿಯರು ನಟಿಸುತ್ತಿದ್ದಾರೆ. ಮುಂಚೆ ಈ ಪಾತ್ರಗಳಿಗೆ ಜನಪ್ರಿಯ ನಟಿಯರನ್ನು ಕರೆತರಲು ಯೋಚಿಸಲಾಗಿತ್ತು. ಆದರೆ ಅವರ ಕಾಲ್ ಶೀಟ್ ಸಿಗದೇ ಇರುವುದರಿಂದ ಹಾಗೂ ಆರ್ಥಿಕ ಹೊರೆ ಹೆಚ್ಚಾಗುವ ಕಾರಣಕ್ಕೆ ಕೈಬಿಡಲಾಯಿತು. ಇದೀಗ ರಂಗಭೂಮಿಯಲ್ಲಿ ಉತ್ತಮ ಹೆಸರು ಗಳಿಸಿದವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು ಧ್ವನಿ ಡಬ್ಬಿಂಗ್​ಗೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಹಾಗೂ ಸುಚೇಂದ್ರ ಪ್ರಸಾದ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದೆಲ್ಲದಕ್ಕಿಂತ ವಿಶೇಷ ಅಂದರೆ ಈ ನಾಟಕದಲ್ಲಿ ಎರಡು ಆನೆ ಹಾಗೂ ಹತ್ತು ಕುದುರೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಾಟಕ ನೋಡುವಾಗ ಐತಿಹಾಸಿಕ ಕಾಲಕ್ಕೆ ಜಾರುವಂತೆ ನಾಟಕವನ್ನು ಹೆಣೆಯಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ತಿಂಗಳಲ್ಲಿ ಈ ನಾಟಕವು ತೆರೆಯ ಮೇಲೆ ಬರಲಿದೆ. ಅದೇ ವೇಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಭೇಟಿ ನೀಡುವ ನಿರೀಕ್ಷೆಯಿದ್ದು, ನಾಟಕವನ್ನು ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವ ಯೋಚನೆಯೂ ಇದೆ. ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಹೆದರಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ನಾಟಕ ನೋಡಲು ಇದೀಗ ಎಲ್ಲರೂ ತವಕದಿಂದ ಕಾಯುತ್ತಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ

ಇದನ್ನೂ ಓದಿ: ವಿದ್ಯಾಕಾಶಿ ಧಾರವಾಡದಲ್ಲಿ ವಿದ್ಯಾರ್ಥಿಗಳಿಗಿಲ್ಲ ಹಾಸ್ಟೆಲ್: ಪರದಾಡುತ್ತಿರುವ ವಿದ್ಯಾರ್ಥಿಗಳು

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ