ವೋಟರ್ ಐಡಿ ಹಗರಣ: ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿಯೂ ಅಕ್ರಮ ಪತ್ತೆ; ಚಿಲುಮೆ ಮೇಲೆ ದೂರು ಕೊಟ್ಟ ಸಮನ್ವಯ ಟ್ರಸ್ಟ್ಗೆ ನೊಟೀಸ್
ಎಸ್ಸಿ, ಎಸ್ಟಿ, ಒಬಿಸಿ ಮತಗಳನ್ನು ಟಾರ್ಗೆಟ್ ಮಾಡಿ ಬಿಜೆಪಿಯವರು ಆಟ ಆಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ (Voter List) ನೆಪದಲ್ಲಿ ಹಲವು ಅಕ್ರಮಗಳನ್ನು ಎಸಗಿರುವ ‘ಚಿಲುಮೆ’ ಸಂಸ್ಥೆಯ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆ ಚುರುಕುಗೊಳಿಸಿದ್ದಾರೆ. ಚಿಲುಮೆಯ ಮುಖ್ಯಸ್ಥರಾದ ಕೆಂಪೇಗೌಡ, ರವಿಕುಮಾರ್, ನಿರ್ದೇಶಕ ರೇಣುಕಾ ಪ್ರಸಾದ್, ಮ್ಯಾನೇಜರ್ ಎಚ್.ಆರ್.ಧರ್ಮೇಶ್, ಮೇಲ್ವಿಚಾರಕರಾದ ಪ್ರಜ್ವಲ್ ಬಂಧಿತರು. ಹಲವು ಆಯಾಮದಲ್ಲಿ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು ಇಂದಿನಿಂದ (ನ 21) ಬಿಬಿಎಂಪಿಯ ಕಂದಾಯ ಅಧಿಕಾರಿಗಳ ವಿಚಾರಣೆ ಚುರುಕುಗೊಳಿಸಿದ್ದಾರೆ.
ಈ ಕುರಿತು ನೀಡಿರುವ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ. ಕೆಂಪೇಗೌಡ ಎನ್ನುವಾತ ಌಪ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ರವಿಕುಮಾರ್‌ಗೆ ನೀಡುತ್ತಿದ್ದ. ಈ ಮಾಹಿತಿಯನ್ನು ಬೇರೆ ರೀತಿಯಲ್ಲಿ ಬಳಸುತ್ತಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವಿಚಾರಣೆ ವೇಳೆ ಆರೋಪಿ ಕೆಂಪೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ಸಂಬಂಧ ಈವರೆಗೆ ಮೂವರನ್ನು ಬಂಧಿಸಿ, 15 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಡಿಜಿಟಲ್ ಌಪ್ ಡೆವಲಪ್ ಮಾಡಿದವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಆ್ಯಪ್ಗೆ ಸಂಬಂಧಿಸಿದ ಸರ್ವರ್ ಡೌನ್ ಮಾಡಿರುವುದರಿಂದ ಪೂರ್ಣ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ ಆರೋಪಿ ಕೆಂಪೇಗೌಡ ಸಂಗ್ರಹಿಸಿದ ದತ್ತಾಂಶಗಳ ಬಗ್ಗೆ ಕೆಲ ಮಾಹಿತಿ ನೀಡಿದ್ದಾನೆ. ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಜಾತಿ, ಉಪಜಾತಿ, ಲಿಂಗ ಸೇರಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಸಾಕ್ಷ್ಯಾಧಾರ ಸಲ್ಲಿಸಲು ಸೂಚನೆ
ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ‘ಚಿಲುಮೆ’ ಸಂಸ್ಥೆಯಿಂದ ಅಕ್ರಮ ನಡೆದಿದೆ ಎಂದು ದೂರು ದಾಖಲಿಸಿದ್ದ ಸಮನ್ವಯ ಟ್ರಸ್ಟ್ಗೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನೊಟೀಸ್ ಜಾರಿ ಮಾಡಲಾಗಿದೆ. ಬುಧವಾರ ವಿಚಾರಣೆಗೆ ಖುದ್ದು ಹಾಜರಾಗಿ, ಸಂಗ್ರಹಿಸಿರುವ ಸಾಕ್ಷ್ಯಾಧಾರ ನೀಡಬೇಕು ಎಂದು ಸೂಚಿಸಲಾಗಿದೆ.
ಹುಬ್ಬಳ್ಳಿಯಲ್ಲಿಯೂ ಮತದಾರರ ಮಾಹಿತಿ ಸಂಗ್ರಹ
ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮದಂಥದ್ದೇ ಮಾದರಿಯ ಅವ್ಯವಹಾರ ಹುಬ್ಬಳ್ಳಿಯಲ್ಲಿಯೂ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಮೂಲದ ಐಐಎಂಟಿ ಸಂಸ್ಥೆಯು ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 6 ತಿಂಗಳ ಹಿಂದೆಯೇ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತು ಕಾಂಗ್ರೆಸ್ ಮಹಾನಗರ ಪಾಲಿಕೆ ಸದಸ್ಯರ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೇ ಮತದಾರರ ಮಾಹಿತಿ ಸಂಗ್ರಹ ಮಾಡಲಾಗಿದೆ. ‘ಸ್ಮಾರ್ಟ್ ಸಿಟಿ’ ವಿಭಾಗದಿಂದ ಸರ್ವೆಗೆ ಬಂದಿರುವುದಾಗಿ ತಂಡದ ಸದಸ್ಯರು ಹೇಳಿಕೊಂಡಿದ್ದರು. ಗಾರ್ಡನ್ ರೀಸರ್ಚ್ ಸೊಸೈಟಿ ಕೇಳಿದ್ದ ಪಾಲಿಕೆ ಅನುಮತಿ ಪತ್ರಕ್ಕೆ ಆಯುಕ್ತರು ಕೇವಲ ಸ್ವೀಕೃತಿ ಪತ್ರ ಮಾತ್ರ ನೀಡಿದ್ದರು. ಅನುಮತಿ ಪತ್ರ ನೀಡಿರಲಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.
ಕನಕಗಿರಿ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಕುಸಿತ
ಕನಕಗಿರಿ ಕ್ಷೇತ್ರದಲ್ಲಿಯೂ ಸುಮಾರು 9 ಸಾವಿರ ಮತದಾರರ ಸಂಖ್ಯೆ ಕಡಿಮೆ ಆಗಿದೆ. ಬಿಜೆಪಿಯವರು ಸೋಲಿನ ಭೀತಿಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ನಾವು ನಮ್ಮ ಕಾರ್ಯಕರ್ತರ ಮೂಲಕ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಿದ್ದೇವೆ. ಎಸ್ಸಿ, ಎಸ್ಟಿ, ಒಬಿಸಿ ಮತಗಳನ್ನು ಟಾರ್ಗೆಟ್ ಮಾಡಿ ಬಿಜೆಪಿಯವರು ಆಟ ಆಡುತ್ತಿದ್ದಾರೆ. ಮತದಾರರ ಹಕ್ಕು ಕಸಿದುಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ತಿಳಿಸಿದರು.
ದಾವಣಗೆರೆಯಲ್ಲಿಯೂ ಅವ್ಯವಹಾರ
ಬೆಂಗಳೂರಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ತಿಳಿದ ನಂತರ ದಾವಣಗೆರೆಯ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ 1,718 ಸಾವಿರಾರು ಮಂದಿಯ ಹೆಸರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಯಾವುದೇ ವ್ಯಕ್ತಿಯು ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ಫಾರ್ಮ್ ನಂಬರ್ 7 ಭರ್ತಿ ಮಾಡಬೇಕು. ಆದರೆ ಈ ಪ್ರಕ್ರಿಯೆಯೇ ನಡೆಯದೇ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕರಾದ ಎ.ನಾಗರಾಜ್ ಹೇಳಿದ್ದಾರೆ.
ದಾವಣಗೆರೆಯ ಮೆಹಬೂಬ್ ನಗರ, ಆಜಾದ್ ನಗರ, ಕೆಟಿಜೆ ನಗರದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಕೂಲಿ ಕಾರ್ಮಿಕರು, ದಲಿತರು ಹಾಗೂ ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಪ್ರದೇಶದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ. ದಾವಣಗೆರೆ ಅಕ್ರಮದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
Published On - 10:43 am, Mon, 21 November 22