ಕಲಘಟಗಿಯಲ್ಲಿ ಸಿದ್ದು ಆಪ್ತ ಸಂತೋಷ್ ಲಾಡ್ ಮತ್ತು ಡಿಕೆಶಿ ಆಪ್ತ ನಾಗರಾಜ್ ಛಬ್ಬಿ ನಡುವೆ ಟಿಕೆಟ್ ಫೈಟ್

ಕಲಘಟಗಿಯಲ್ಲಿ ಕೈ ಪಾಳಯದಲ್ಲೆ ಟಿಕೇಟ್ ದಂಗಲ್ ಶುರುವಾಗಿದೆ. ಸಿದ್ದರಾಮಯ್ಯ ಆಪ್ತ ಸಂತೋಷ ಲಾಡ್ ಮತ್ತು ಡಿಕೆಶಿ ಆಪ್ತ ನಾಗರಾಜ್ ಛಬ್ಬಿ ನಡುವೆ ತ್ಯಾಗ ವಾದ ಪ್ರತಿವಾದ‌ ಆರಂಭವಾಗಿದೆ.

ಕಲಘಟಗಿಯಲ್ಲಿ ಸಿದ್ದು ಆಪ್ತ ಸಂತೋಷ್ ಲಾಡ್ ಮತ್ತು ಡಿಕೆಶಿ ಆಪ್ತ ನಾಗರಾಜ್ ಛಬ್ಬಿ ನಡುವೆ ಟಿಕೆಟ್ ಫೈಟ್
ಸಂತೋಷ್ ಲಾಡ್ ಮತ್ತು ನಾಗರಾಜ್ ಛಬ್ಬಿ
Follow us
TV9 Web
| Updated By: Rakesh Nayak Manchi

Updated on: Nov 20, 2022 | 11:50 AM

ಕಲಘಟಗಿ: ರಾಜ್ಯ ವಿಧಾನ ಸಭಾ ಚುನಾವಣೆ ಇನ್ನೂ ಆರು ತಿಂಗಳು ಇರುವಾಗಲೇ ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಬಲು ಜೋರಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷಗಳ ನಡುವೆ ತಿಕ್ಕಾಟ ಇರುವುದು ಸಾಮಾನ್ಯ. ಆದರೆ ಕಲಘಟಗಿಯಲ್ಲಿ ಕೈ ಪಾಳಯದಲ್ಲೆ ಟಿಕೇಟ್​ಗಾಗಿ ತಿಕ್ಕಾಟ ಆರಂಭವಾಗಿದೆ. ಚುನಾವಣೆ ಪ್ರಚಾರದಲ್ಲಿ ಚಾಲ್ತಿಗೆ ಬರುವ ಮಾತಿನ ಸಮರ ಈಗಿನಂದಲೇ ಶುರುವಾಗಿದ್ದು. ಸಂತೋಷ ಲಾಡ್ (Santhosh Lad) ಮತ್ತು ನಾಗರಾಜ್ ಛಬ್ಬಿ (Nagaraj Chabbi) ನಡುವೆ ತ್ಯಾಗ ವಾದ ಪ್ರತಿವಾದ‌ ಆರಂಭವಾಗಿದೆ. ಮಾಜಿ ಸಚಿವ ಸಂತೋಷ ಲಾಡ್ ಸಿದ್ದರಾಮಯ್ಯ (Siddaramaiha) ಅವರ ಆಪ್ತರಾಗಿದ್ದು, ಛಬ್ಬಿ ಡಿ.ಕೆ.ಶಿವಕುಮಾರ್ (D.K.Shivakumar) ಬಣಕ್ಕೆ ಸೇರಿದವರಾಗಿದ್ದಾರೆ. ಸಿದ್ದು-ಡಿಕೆಶಿ ಬಣ ಪಡಿದಾಟ ಇದೀಗ ಕಲಘಟಗಿ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಇಬ್ಬರು ನಾಯಕರ ಆಪ್ತರು ನಮಗೆ ಟಿಕೆಟ್ ಎನ್ನುತ್ತಿದ್ದಾರೆ.

ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಮತಭೇಟೆಗೆ ಭರ್ಜರಿ ತಯಾರಿ ನಡೆಸಿವೆ. ಆದರೆ ಕಲಘಟಗಿ ರಾಜಕೀಯ ಮಾತ್ರ ಒಂದು ಹಂತ ಮುಂದೆ ಹೋಗಿದೆ. ಕಾಂಗ್ರೆಸ್ ಟಿಕೆಟ್​ಗಾಗಿ ಮಾಜಿ ಸಚಿವ ಸಂತೋಷ ಲಾಡ್ ಮತ್ತು ಮಾಜಿ ಎಂಎಲ್​ಸಿ ನಾಗರಾಜ್ ಛಬ್ಬಿ ಬಹಿರಂಗ ಮಾತಿನ ಸಮರಕ್ಕೆ ಮುನ್ನುಡಿ ಬರೆದಿದ್ದಾರೆ. ಇಡೀ ಕ್ಷೇತ್ರ ಮನೆಗಳಿಗೆ ಕುಕ್ಕರ್ ಹಂಚುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದ ನಾಗರಾಜ್ ಛಬ್ಬಿ ಈಗ ಕ್ಷೇತ್ರ ತ್ಯಾಗ ಟ್ರಂಪ್ ಕಾರ್ಡ್ ಬಳಸಿ ಎಮೋಷನಲ್ ಅನುಸರಿಸಿದ್ದಾರೆ.‌ ಇದಕ್ಕೆ ಪ್ರತ್ಯುತ್ತರವಾಗಿ ಸಂತೋಷ ಲಾಡ್ ಸಹ ತಾವು ಮಾಡಿದ ಸಹಾಯವನ್ನು ನೆನಪಿಸಿದ್ದು, ಈ ಇಬ್ಬರ ನಡುವೆ ತ್ಯಾಗದ ಚರ್ಚೆ ಎಚ್ಚಾಗುತ್ತಿದೆ. ಮೆಲ್ನೋಟಕ್ಕೆ ಇದು ಛಬ್ಬಿ ಲಾಡ್ ನಡುವಿನ ಸ್ಪರ್ಧೆ ಅಂತಾ ಕಂಡು ಬಂದರೂ ಇಲ್ಲಿ ಡಿಕೆಶಿ ಬಣ ಮತ್ತು ಸಿದ್ದು ಬಣಗಳ ಬಡಿದಾಟ ಆರಂಬವಾಗಿದೆ.

ಇದನ್ನೂ ಓದಿ: ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಿದೆ ಕಾಂಗ್ರೆಸ್ ಸ್ಥಿತಿ: ಟ್ವೀಟ್ ಮೂಲಕ ಹರಿಹಾಯ್ದ ಸಚಿವ ಸುಧಾಕರ

2008ರಲ್ಲಿ ಎಲ್ಲೋ ಬಳ್ಳಾರಿಯಿಂದ ಕಲಘಟಗಿಯಿಂದ ಬಂದ ಸಂತೋಷ ಲಾಡ್, ಕೇವಲ ಎರಡು ತಿಂಗಳಲ್ಲಿ ಪ್ರಚಾರ ಮಾಡಿ ಚುನಾವಣೆ ಗೆದ್ದಿದ್ದರು. ಆದರೆ ಚುನಾವಣೆಯನ್ನು ಹೇಗೆ ಗೆದ್ದರು ಎಂಬುದನ್ನು ಅವರು ಮರೆತ್ತಿದ್ದಾರೆ. ನಾನು ಆಗ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆ, ನಮ್ಮ ಪಕ್ಷದ ಹೈಕಮಾಂಡ್ ಹೇಳಿತು ಅಂತ ನಾನು ಕ್ಷೇತ್ರ ಬಿಟ್ಟು ಕೊಟ್ಟೆ. ಅಷ್ಟೇ ಅಲ್ಲದೆ, ನಾನೇ ಮುಂದೆ ನಿಂತು ಸಂತೋಷ ಲಾಡ್ ಗೆಲ್ಲಿಸಿಕೊಂಡು ಬಂದೆ. ನನ್ನ ತ್ಯಾಗ ಮತ್ತು ಸಹಾಯವನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ಛಬ್ಬಿ ಹೇಳಿದ್ದಾರೆ.

ಲಾಡ್ 2018ರ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರಕ್ಕೆ ಬರುವುದನ್ನು ಕಡಿಮೆ ಮಾಡಿದರು.‌ ಹೀಗಾಗಿ ನಾನು ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ದೃಷ್ಟಿಯಿಂದ ಕೆಲಸ ಆರಂಭಿಸಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಶಿ ನಾಗರಾಜ್ ಛಬ್ಬಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನನಗೆ ಟಿಕೆಟ್ ಸಿಗುತ್ತದೆ. ನಾನು ಕುಕ್ಕರ್ ಹಂಚಿರುವುದು ಚುನಾವಣೆಗೆ ಅಲ್ಲ ಎಂದು ಛಬ್ಬಿ ಹೇಳುತ್ತಿದ್ದಾರೆ. ಹೈಕಮಾಂಡ್ ನನಗೆ ಹೇಳಿದ ಹಿನ್ನೆಲೆ ನಾನು ಕೆಲಸ ಮಾಡುತ್ತಿದ್ದೇನೆ, ಟಿಕೆಟ್ ನನಗೆ ನೂರಕ್ಕೆ ನೂರರಷ್ಟು ಸಿಗತ್ತದೆ ಎಂಬುದು ಛಬ್ಬಿ ಅವರ ವಾದವಾಗಿದೆ.

ಇನ್ನೂ ಛಬ್ಬಿ ಹೇಳಿಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂತೋಷ ಲಾಡ್, ನಾನು ಯಾರ ತ್ಯಾಗದಿಂದ ಕಲಘಟಗಿಯಲ್ಲಿ ಗೆದ್ದಿಲ್ಲ. ನಾನು ಎಂಪಿ ಪ್ರಕಾಶ್ ಅವರ ಜೊತೆ ಜೆಡಿಎಸ್ ಬಿಟ್ಟು ಬಂದೆ. ಹೀಗಾಗಿ ನನಗೆ ಕಾಂಗ್ರೆಸ್​ನಲ್ಲಿ ಜಾಗ ಸಿಕ್ಕತು. ಬಳಿಕ ಕ್ಷೇತ್ರ ಪುನರ್ವಿಂಗಡನೆಯಾಗಿ ಕಲಘಟಗಿಗೆ ಬಂದೆ. ನಮ್ಮ ಪಕ್ಷ ನಾಯಕರ, ಕಾರ್ಯಕರ್ತರ ಶ್ರಮ ಮತ್ತು ಜನರ ಆರ್ಶಿವಾದದಿಂದ ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ. ಅದು ಬಿಟ್ಟರೆ ನನಗಾಗಿ ಯಾರು ತ್ಯಾಗ ಮಾಡಿಲ್ಲ ಎಂದಿದ್ದಾರೆ. ಅಲ್ಲದೆ, ನಾಗರಾಜ್ ಛಬ್ಬಿ ನನ್ನ ಸ್ನೇಹಿತ, ನಾನೆ ಎಂಎಲ್​ಸಿ ಚುನಾವಣೆ ಅವರ ಹೆಸರು ಪ್ರಸ್ತಾಪ ಮಾಡಿ ಬೆಂಬಲ‌ ನೀಡಿದೆ. ನಾನು ಸೋತ ಬಳಿಕ ಕ್ಷೇತ್ರವನ್ನು ಬಿಟ್ಟಿಲ್ಲ, ಕೋವಿಡ್ ಸಮಯದಲ್ಲಿ ಏನು ಮಾಡಿದ್ದೇನೆ ಅಂತ ಜನರಿಗೆ ಗೊತ್ತು. ಅದನ್ನು ಛಬ್ಬಿಗೆ ತಿಳಿಸುವ ಅವಶ್ಯಕತೆ ಇಲ್ಲ ಎಂದು ಲಾಡ್ ಟಾಂಗ್ ನೀಡಿದ್ದಾರೆ.

ಇದಲ್ಲದೆ, ಒಂದು ವಾರದ ಮಟ್ಟಿಗೆ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಲಾಡ್, ಕಲಘಟಗಿ ಅಭ್ಯರ್ಥಿ ನಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದೇ ಪಕ್ಷದಿಂದ ಒಂದೇ ಕ್ಷೇತ್ರದ ಟಿಕೆಟ್​ಗಾಗಿ ಇಬ್ಬರು ನಾಯಕರು ಪೈಪೋಟಿ ಆರಂಭಿಸಿದ್ದಾರೆ. ಒಬ್ಬರ ಹಿಂದೆ ಸಿದ್ದು ನಾಮಬಲವಿದ್ದರೆ ಮತ್ತೊಬ್ಬರ ಹಿಂದೆ ಕನಕಪುರದ ಬಂಡೆ ಇದೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗತ್ತದೆ ಎನ್ನುವುದು ಮಾತ್ರ ನಿಗೂಢವಾಗಿದೆ. ಆದರೆ ಇಬ್ಬರಲ್ಲಿ ಯಾರಿಗೆ ಟಿಕೆಟ್ ಮಿಸ್ ಆದರೂ ಪಕ್ಷಾಂತರವಾಗುವುದು ಪಕ್ಕ ಎನ್ನುವಂತಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬಗೆಹರಿಯದ ನಾಯಕತ್ವ ಬಿಕ್ಕಟ್ಟು: ಕಾಂಗ್ರೆಸ್​ಗೆ​ ದುಸ್ವಪ್ನವಾಗಿ ಕಾಡುತ್ತಿರುವ ಪಂಜಾಬ್ ವೈಫಲ್ಯದ ನೆನಪು

“ಛಬ್ಬಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಲಾಡ್ ಬಳ್ಳಾರಿಗೆ ಹೋಗುತ್ತಾರೆ, ನಾನು ಕಲಘಟಗಿಯಲ್ಲಿ ಸ್ಪರ್ಧಿಸುತ್ತೇನೆ ಎಂದು ಛಬ್ಬಿ ಹೇಳಿದ್ದಾರಂತೆ, ಈ ಬಗ್ಗೆ ಸಿದ್ದರಾಮಯ್ಯರನ್ನು ಭೇಟಿಯಾದಾಗ ತಿಳಿಯಿತು. ಕಲಘಟಗಿ ರಾಜಕೀಯದಲ್ಲಿ ನಾನು ಗೊಂದಲದಲ್ಲೇ ಇದ್ದೀನಿ. ಛಬ್ಬಿ ಅವರು ದಿಢೀರ್ ಆಗಿ ಮೂರು ಹಳ್ಳಿಗಳಲ್ಲಿ ಕುಕ್ಕರ್​ ಹಂಚಿದ್ದಾರೆ. ಇದರ ಹಾಗೂ ಟಿಕೆಟ್ ಸ್ಪರ್ಧೆ ಬಗ್ಗೆ ನನ್ನ ಅಭ್ಯಂತರವಿಲ್ಲ. ಆದರೆ ಹೈಕಮಾಂಡ್ ಇದನ್ನು ಅರ್ಥಮಾಡಿಕೊಂಡು ಸರಿಪಡಿಸದಿದ್ದರೆ ಪಕ್ಷಕ್ಕೆ ಅನಾನುಕೂಲವಾಗಬಹುದು” – ಸಂತೋಷ ಲಾಡ್, ಮಾಜಿ ಸಚಿವ ಮತ್ತು ಟಿಕೆಟ್ ಆಕಾಂಕ್ಷಿ

“ಕುಕ್ಕರ್ ವಿತರಣೆ ಹಾಗೂ ಚುನಾವಣೆಗೆ ಸಂಬಂಧವಿಲ್ಲ. ಟಿಕೆಟ್ ನನಗೆ ಸಿಗಲಿದೆ, ಹೈಕಮಾಂಡ್ ನನಗೆ ಕ್ಷೇತ್ರದಲ್ಲಿ ಕೆಲಸ ಮಾಡು ಎಂದು ಹೇಳಿದ್ದಕ್ಕೆ ಮಾಡುತ್ತಿದ್ದೇನೆ. 2004ರಿಂದಲೇ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದೇನೆ. ಲಾಡ್ ಶಾಸಕರಾದ ನಂತರ ನಾನು ಬೇರೆ ಕ್ಷೇತ್ರಕ್ಕೆ ಹೋಗಿದ್ದೆ. ಅವರ ಸೋಲಿನ ನಂತರ ನಾನು ಅದೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ” – ನಾಗರಾಜ್ ಛಬ್ಬಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

ಒಟ್ಟಿನಲ್ಲಿ ಚುನಾವಣೆಗೂ ಮುನ್ನವೇ ಕಲಘಟಗಿಯಲ್ಲಿ ಕೈ ನಾಯಕರ ಕಿತ್ತಾಟ ಶುರುವಾಗಿದೆ.‌ ಒಂದೇ ಪಕ್ಷದ‌ ಇಬ್ಬರು ನಾಯಕರು ಈ ರೀತಿಯಾಗಿ ಬೀದಿಯಲ್ಲಿ ಕಿತ್ತಾಡುತ್ತಿರುವುದು ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು ನಾಯಕರ ನಡುವಿನ ಕಿತ್ತಾಟ ತಮ್ಮ ತಮ್ಮ ಬೆಂಬಲಿಗರವರೆಗೂ ಬಂದು ನಿಂತಿದೆ. ಆದರೆ ಹೈಕಮಾಂಡ್ ಯಾರಿಗೆ ಜೈ ಎನ್ನುತ್ತಾರೆ ಎಂಬುದನ್ನಷ್ಟೇ ನೋಡಬೇಕಿದೆ.

ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ