ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ, ಜಿಲ್ಲಾ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾದರೂ ಸಿಗದ ಉದ್ಘಾಟನಾ ಭಾಗ್ಯ

| Updated By: ಆಯೇಷಾ ಬಾನು

Updated on: Dec 26, 2021 | 2:35 PM

ಹೊಸ ಕಟ್ಟಡದಲ್ಲಿ ಜಾನುವಾರುಗಳ ಚಿಕಿತ್ಸೆಗೆ ಎಲ್ಲ ರೀತಿಯ ಆಧುನಿಕ ವ್ಯವಸ್ಥೆ ಮಾಡಲಾಗಿದೆ. ಈ ಕಟ್ಟಡ ಉದ್ಘಾಟನೆಯಾಗದೇ ಇರುವುದರಿಂದ ಬೇರೆ ಬೇರೆ ಸಮಸ್ಯೆಗಳು ಉದ್ಭವವಾಗಿವೆ. ಹೊಸ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿದ್ದ ಶಸ್ತ್ರ ಚಿಕಿತ್ಸೆ ಕೊಠಡಿಯನ್ನು ನೆಲಸಮ ಮಾಡಲಾಗಿತ್ತು.

ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ, ಜಿಲ್ಲಾ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾದರೂ ಸಿಗದ ಉದ್ಘಾಟನಾ ಭಾಗ್ಯ
ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ, ಜಿಲ್ಲಾ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾದರೂ ಸಿಗದ ಉದ್ಘಾಟನಾ ಭಾಗ್ಯ
Follow us on

ಧಾರವಾಡ: ಸರಕಾರಿ ಕಟ್ಟಡಗಳು ನಿರ್ಮಾಣವಾಗಬೇಕೆಂದರೆ ಅದಕ್ಕೆ ಹತ್ತಾರು ಅನುಮತಿಗಳು ಬೇಕು. ಕಟ್ಟಡದ ಅವಶ್ಯಕತೆಯ ಬಗೆಗಿನ ವರದಿಯಿಂದ ಹಿಡಿದು ಅನುದಾನ ಬಿಡುಗಡೆವರೆಗೆ ದೊಡ್ಡದೊಂದು ಯಾತ್ರೆಯೇ ನಡೆದು ಹೋಗುತ್ತದೆ. ಇಷ್ಟೆಲ್ಲಾ ನಡೆದ ಮೇಲೆ ಟೆಂಡರ್ ಪ್ರಕ್ರಿಯೆ ಮುಗಿದು, ಕೆಲಸ ಶುರುವಾಗೋ ಹೊತ್ತಿಗೆ ವರ್ಷಗಳೇ ಉರುಳಿ ಹೋಗಿರುತ್ತವೆ. ಇನ್ನು ಕಾಮಗಾರಿ ಮುಕ್ತಾಯವಾಯಿತು ಅಂದಕೂಡಲೇ ಕಟ್ಟಡ ಉದ್ಘಾಟನೆ ಕಥೆ ಇದೆಲ್ಲಕ್ಕಿಂತ ಭಿನ್ನ. ಉದ್ಘಾಟನಾ ಭಾಗ್ಯ ಸಿಗಬೇಕೆಂದರೆ ಅಲ್ಲಿ ಎಲ್ಲ ರಾಜಕೀಯ ನಾಯಕರು ಬರಲೇಬೇಕು ಅನ್ನೋ ಷರತ್ತು ಬೇರೆ. ಇದೆಲ್ಲಾ ಕಾರಣಕ್ಕೆ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನಾ ಭಾಗ್ಯ ಮಾತ್ರ ಸಿಗದೇ ಇರೋ ಅನೇಕ ಸರಕಾರಿ ಕಟ್ಟಡಗಳಿವೆ. ಅಂಥದ್ದರಲ್ಲಿ ಧಾರವಾಡದ ಜಿಲ್ಲಾ ಪಶು ಆಸ್ಪತ್ರೆಯ ನೂತನ ಕಟ್ಟಡ.

ಧಾರವಾಡ ನಗರದ ಜಿಲ್ಲಾ ಪಶು ಆಸ್ಪತ್ರೆ (ಪಾಲಿ ಕ್ಲಿನಿಕ್) ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು 5 ತಿಂಗಳಾಗಿದೆ. ಆದರೆ ಈ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ಮಾತ್ರ ಸಿಕ್ಕಿಲ್ಲ. ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಅಂದಾಜು 2.17 ಕೋಟಿ ರೂಪಾಯಿ ಅನುದಾನದಲ್ಲಿ ಕಟ್ಟಡ ಸಿದ್ಧವಾಗಿದೆ. ಆದರೆ, ವಿದ್ಯುತ್ ಪರಿವರ್ತಕ ಅಳವಡಿಕೆ ಕಾರ್ಯ ವಿಳಂಬವಾಗಿರುವುದರಿಂದ ಈ ಕಟ್ಟಡದ ಕಾರ್ಯಾರಂಭಕ್ಕೆ ಹಿನ್ನಡೆಯಾಗಿದೆ. ಪಾಲಿ ಕ್ಲಿನಿಕ್‌ಗೆ ಸುಸಜ್ಜಿತ ಕಟ್ಟಡ, ತಜ್ಞ ವೈದ್ಯರು, ಎಕ್ಸರೇ ಸೇರಿ ಇತರ ಯಂತ್ರಗಳ ಕೊರತೆ ಇತ್ತು. ಹೀಗಾಗಿ 2017 ರಲ್ಲಿ ಪಾಲಿ ಕ್ಲಿನಿಕ್ ಅನ್ನು 100 X 135 ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು 2.17 ಕೋಟಿ ರೂಪಾಯಿ ಅನುದಾನ ಮಂಜೂರಾಗಿತ್ತು. 2018 ರಲ್ಲಿ ಕರ್ನಾಟಕ ಗೃಹ ಮಂಡಳಿಗೆ ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಲಾಗಿತ್ತು. 2019 ರ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದರೂ ಕೆಲ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗಿತ್ತು. ಎಲ್ಲ ಅಡೆತಡೆ ನಿವಾರಿಸಿ ಸುಸಜ್ಜಿತ ಕಟ್ಟಡ ಸಿದ್ಧವಾಗಿದ್ದರೂ ಟಿಸಿ ಅಳವಡಿಕೆ ವಿಳಂಬದಿಂದ ಹಳೇ ಕಟ್ಟಡದಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡುವಂತಾಗಿದೆ.

ಹಳೆಯ ಕಟ್ಟಡದಲ್ಲಿಯೇ ಜಾನುವಾರುಗಳಿಗೆ ಚಿಕಿತ್ಸೆ
ಹೊಸ ಕಟ್ಟಡದಲ್ಲಿ ಜಾನುವಾರುಗಳ ಚಿಕಿತ್ಸೆಗೆ ಎಲ್ಲ ರೀತಿಯ ಆಧುನಿಕ ವ್ಯವಸ್ಥೆ ಮಾಡಲಾಗಿದೆ. ಈ ಕಟ್ಟಡ ಉದ್ಘಾಟನೆಯಾಗದೇ ಇರುವುದರಿಂದ ಬೇರೆ ಬೇರೆ ಸಮಸ್ಯೆಗಳು ಉದ್ಭವವಾಗಿವೆ. ಹೊಸ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿದ್ದ ಶಸ್ತ್ರ ಚಿಕಿತ್ಸೆ ಕೊಠಡಿಯನ್ನು ನೆಲಸಮ ಮಾಡಲಾಗಿತ್ತು. ಹೀಗಾಗಿ ಕ್ಲಿನಿಕ್ ಆವರಣದ ಗಿಡಗಳಿಗೆ ಜಾನುವಾರು ಕಟ್ಟಿ ಚಿಕಿತ್ಸೆ ನೀಡುವ ಸ್ಥಿತಿ ಎದುರಾಗಿದೆ. ಇದಲ್ಲದೆ ಪಾಲಿ ಕ್ಲಿನಿಕ್‌ನ ಮುಖ್ಯ ವೈದ್ಯಾಧಿಕಾರಿ ಹೊರತುಪಡಿಸಿ, ಸಹಾಯಕ ಸಿಬ್ಬಂದಿ ಕೊರತೆಯೂ ಕಾಣುತ್ತಿದೆ. ಹೊಸ ಕಟ್ಟಡದಲ್ಲಿ ಚಿಕ್ಕ ಮತ್ತು ದೊಡ್ಡ ಜಾನುವಾರುಗಳಿಗೆ ಪ್ರತ್ಯೇಕ ಎರಡು ಶಸ್ತ್ರಚಿತ್ಸೆ ಕೊಠಡಿಗಳಿದ್ದು, ಪ್ರಯೋಗಾಲಕ್ಕೆ ಈಗಾಗಲೇ ಎಕ್ಸರೇ ಮತ್ತು ಸ್ಕ್ಯಾನಿಂಗ್ ಯಂತ್ರಗಳೂ ಬಂದಿವೆ. ಹಳೇ ಕಟ್ಟಡದಲ್ಲೇ ಸ್ಕ್ಯಾನಿಂಗ್ ಯಂತ್ರ ಸೇವೆ ನೀಡುತ್ತಿದ್ದು, ಎಕ್ಸರೇ ಸೇವೆ ಆರಂಭಿಸಿಲ್ಲ.

ಪಾಲಿ ಕ್ಲಿನಿಕ್‌ನಲ್ಲಿ ಉಪ ನಿರ್ದೇಶಕರು, ಮುಖ್ಯ ವೈದ್ಯಾಧಿಕಾರಿ, ಪ್ರಥಮ ದರ್ಜೆ ಸಹಾಯಕ, ಎರಡು ಡಿ ಗ್ರುಪ್ ಹುದ್ದೆಗಳಿವೆ. ಈ ಪೈಕಿ 1 ಡಿ ಗ್ರುಪ್ ಹುದ್ದೆ ಖಾಲಿ ಇದ್ದು, ಎಕ್ಸರೇ ಸೇವೆಗೆ ಸಿಬ್ಬಂದಿ ಇಲ್ಲ. ಹೊಸದಾಗಿ ನಿರ್ಮಿಸಿರುವ ಕಟ್ಟಡದಲ್ಲಿ ಪಾಲಿ ಕ್ಲಿನಿಕ್ ಸೇವೆ ನೀಡಲು ಔಷಧ ಶಾಸ್ತ್ರ, ಶಸ್ತ್ರಚಿಕಿತ್ಸೆ ಹಾಗೂ ಬಂಜೆತನ ನಿವಾರಣೆ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದಲ್ಲಿ ತಲಾ ಒಬ್ಬರು ತಜ್ಞರು, ಮೂರು ಜನ ಪಶು ವೈದ್ಯಕೀಯ ಸಹಾಯಕರು, ಪಶು ವೈದ್ಯಕೀಯ ಪರೀಕ್ಷಕರು, ಡಿ ಗ್ರುಪ್ ಸಿಬ್ಬಂದಿ ಬೇಡಿಕೆ ಇದೆ. ಸಿದ್ಧವಾದ ಕಟ್ಟಡದಲ್ಲಿ ಸೇವೆ ಆರಂಭಿಸದೇ ಇದ್ದಲ್ಲಿ, ಇನ್ನು ಕೆಲ ತಿಂಗಳ ಬಳಿಕ ಇಲ್ಲಿ ಹೊಸದಾದ ಕಟ್ಟಡ ಇದೆ ಎಂಬುದನ್ನೇ ಅಧಿಕಾರಿಗಳು ಮರೆಯುವಂತಾಗುತ್ತದೆ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಪರಿಹರಿಸಿ, ಉದ್ಘಾಟನಾ ಭಾಗ್ಯ ಕಲ್ಪಿಸಬೇಕಿದೆ.

ಇನ್ನು ಈ ಬಗ್ಗೆ ಇಲಾಖೆಯ ಉಪನಿರ್ದೇಶಕ ಡಾ . ಜಂಬುನಾಥ ಆರ್. ಗದ್ದಿ ಟಿವಿ-9 ಡಿಜಿಟಲ್ ಗೆ ಪ್ರತಿಕ್ರಿಯೆ ನೀಡಿ, ಪಾಲಿಕ್ಲಿನಿಕ್‌ನ ಹೊಸ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಶೀಘ್ರದಲ್ಲಿ ನಡೆಸಲಾಗುವುದು. ಟಿಸಿ ಅಳವಡಿಕೆಗೆ ಈಗಾಗಲೇ ಹಣ ಭರ್ತಿ ಮಾಡಲಾಗಿದೆ. ಈ ವಾರದಲ್ಲಿ ಟಿಸಿ ಅಳವಡಿಸುತ್ತಾರೆ. ಇನ್ನು ತಜ್ಞರ ನೇಮಕವಾಗಿದ್ದು, ಸಹಾಯಕರು ಹಾಗೂ ಡಿ ಗ್ರುಪ್ ನೌಕರರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಉದ್ಘಾಟನೆಗೂ ಮೊದಲೇ ಎಲ್ಲ ಸಿಬ್ಬಂದಿ ನೇಮಕ ಆಗಲಿದೆ ಅಂತಾ ಹೇಳಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ

ಇದನ್ನೂ ಓದಿ: ಕೃಷಿ ಕಾಯ್ದೆಗಳು ತಿದ್ದುಪಡಿ ರೂಪದಲ್ಲಿ ಮತ್ತೆ ಜಾರಿಯಾಗುತ್ತವಾ? ಕೇಂದ್ರ ಕೃಷಿ ಸಚಿವರು ಕೊಟ್ಟ ಸ್ಪಷ್ಟ ಉತ್ತರ ಹೀಗಿದೆ