ಧಾರವಾಡ: ಸದ್ಯ ರಾಜ್ಯದಲ್ಲಿ ಎಲೆಕ್ಷನ್ ಹವಾ ಜೋರಾಗಿದೆ. ಒಂದಷ್ಟು ಜನ ಅಭ್ಯರ್ಥಿಗಳಾಗಿ ಬಲಾಬಲಕ್ಕೆ ಮುಂದಾಗಿದ್ದರೆ, ಇನ್ನೂ ಎಷ್ಟೋ ಕಡೆ ಯಾರು ಅಭ್ಯರ್ಥಿ ಎನ್ನುವುದೇ ಫೈನಲ್ ಆಗಿಲ್ಲ. ಆದರೂ ಆಕಾಂಕ್ಷಿಗಳಂತೂ ಜಿದ್ದಿಗೆ ಬಿದ್ದು ಮತದಾರರನ್ನು ಸೆಳೆಯಲು ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಧಾರವಾಡದಲ್ಲೀಗ ಬೇರೆಯದ್ದೇ ಸ್ವರೂಪದ ಉಡುಗೊರೆಯ ಹವಾ ಶುರುವಾಗಿದೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿ ದೀಪಕ್ ಚಿಂಚೋರೆ ಕ್ಷೇತ್ರದ ಮತದಾರರಿಗೆ ಪ್ರವಾಸ ಭಾಗ್ಯ ಒದಗಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹತ್ತಾರು ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಇವರೂ ಒಬ್ಬರು ಎಐಸಿಸಿ ಸದಸ್ಯನೂ ಆಗಿರೋ ದೀಪಕ್ ಟಿಕೆಟ್ ಪಡೆಯಲು ಎಲ್ಲ ಬಗೆಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇದೀಗ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ನೂರಾರು ಜನರನ್ನು ಒಂದು ದಿನದ ಪ್ರವಾಸಕ್ಕೆ ಕಳುಹಿಸುವ ಮೂಲಕ ತಮ್ಮ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ತಂತ್ರ ಮಾಡಿದ್ದಾರೆ. ಜನರು ಸಹ ವಿವಿಧ ಮಹಿಳಾ ಮಂಡಳಿಗಳ ಅಡಿಯಲ್ಲಿ ಈ ಒಂದು ದಿನದ ಪ್ರವಾಸಕ್ಕೆ ಹೋಗಿ ಬರುತ್ತಿದ್ದು, ಬಸ್ ವ್ಯವಸ್ಥೆಯ ಜೊತೆಗೆ ಹೋಗಿ ಬರುವರೆಗೂ ಊಟೋಪಚಾರವನ್ನು ಸಹ ನೋಡಿಕೊಳ್ಳುತ್ತಿದ್ದಾರೆ.
ದೀಪಕ್ ಈ ರೀತಿ ಪ್ರವಾಸಕ್ಕೆ ಕಳಿಸಿರೋದು ಇದೇ ಮೊದಲೇನೂ ಅಲ್ಲವಂತೆ. ಈಗಾಗಲೇ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ದೀಪಕ್ ಚಿಂಚೋರೆ ಬಾದಾಮಿ ಬನಶಂಕರಿ ದೇವಿ ದರ್ಶನ, ಸಿಂಗದೂರು ಚೌಡೇಶ್ವರ, ಪಂಢರಪುರ ವಿಠ್ಠಲ-ರುಕ್ಮಿಣಿ ದರ್ಶನಕ್ಕೆ ಕಳುಹಿಸಿದ್ದಾರೆ. ಈ ಪ್ರವಾಸವನ್ನು ಸಮರ್ಥಿಸಿಕೊಂಡಿರೋ ಚಿಂಚೋರೆ, ಹೀಗೆ ಕಳುಹಿಸುತ್ತಿರೋದರ ಹಿಂದೆ ಯಾವುದೇ ರಾಜಕೀಯ ಲಾಭ ಇಲ್ಲ ಅಂತಾನೇ ಹೇಳುತ್ತಿದ್ದಾರೆ. ತಮ್ಮ ದಿವಗಂತ ಪುತ್ರನ ಹೆಸರಿನಲ್ಲಿ ಸೇವಾ ಟ್ರಸ್ಟ್ ಇದೆ. ಅದರ ಮೂಲಕ ಈಗಾಗಲೇ ನೂರಾರು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದ್ದೇವೆ. ತರಬೇತಿ ಮುಗಿದ ಮೇಲೆ ಅದೇ ಟ್ರಸ್ಟ್ ಮೂಲಕ ಒಂದು ದಿನದ ಪ್ರವಾಸಕ್ಕೆ ಕಳುಹಿಸಿದ್ದೇನೆ. ಅಲ್ಲದೇ ಎಷ್ಟೋ ಜನರಿಗೆ ಕುಕ್ಕರ್ ಸಹ ನಾನು ಈಗಾಗಲೇ ಹಂಚಿದ್ದೇನೆ. ಆರು ತಿಂಗಳ ಹಿಂದಿನಿಂದಲೇ ಮಾಡುತ್ತಿದ್ದು, ಇದೊಂದು ಸೇವಾ ಕಾರ್ಯ. ಇದರಲ್ಲಿ ರಾಜಕೀಯ ಇಲ್ಲ ಎಂದು ಹೇಳುತ್ತಿದ್ದಾರೆ.
ಸದ್ಯ ದೀಪಕ್ ಚಿಂಚೋರೆ ತಮ್ಮ ಮೃತ ಪುತ್ರನ ಸ್ಮರಣಾರ್ಥವಾಗಿ ಇದೆಲ್ಲ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರಾದರೂ, ಹೀಗೆ ಪ್ರವಾಸಕ್ಕೆ ಹೋಗಿರುವ ಪ್ರತಿಯೊಂದು ಬಸ್ ಮೇಲೆಯೂ ಹು-ಧಾ ಪಶ್ಚಿಮ ಕ್ಷೇತ್ರದ ಸೇವಾಕಾಂಕ್ಷಿ ಅಂತಾ ಇವರದ್ದೇ ಫೋಟೋ ಇರೋ ಪೋಸ್ಟರ್ ಗಳು ಎದ್ದು ಕಾಣುತ್ತಿವೆ. ಅಲ್ಲದೇ ಈ ಕೇತ್ರವನ್ನೇ ಮುಖ್ಯವಾಗಿಟ್ಟುಕೊಂಡು ಈ ಎಲ್ಲ ಸೇವಾ ಕಾರ್ಯಗಳು ನಡೆಯುತ್ತಿದ್ದು, ಚಿಂಚೋರೆ ಈಗಿನಿಂದಲೇ ತಮ್ಮ ಕ್ಷೇತ್ರವನ್ನು ಗಟ್ಟಿಮಾಡಿಕೊಳ್ಳುತ್ತಿರುವುದಂತೂ ಗುಟ್ಟಾಗಿ ಉಳಿದಿಲ್ಲ.
ವರದಿ-ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 am, Mon, 13 February 23