ಧಾರವಾಡ, ಸೆ.12: ಶ್ರಾವಣ ಮಾಸ (Shravana Masa) ಮುಕ್ತಾಯದ ದಿನ ಹತ್ತಿರ ಬರುತ್ತಿದ್ದಂತೆಯೇ ಧಾರವಾಡ ಜಿಲ್ಲೆಯಲ್ಲಿ ಮೇಕೆಗಳ ಕಳ್ಳತನ ಹೆಚ್ಚಾಗತೊಡಗುತ್ತದೆ. ಶ್ರಾವಣ ಮಾಸದ ಕೊನೆಗೂ ಈ ಜಾನುವಾರುಗಳ ಕಳ್ಳತನಕ್ಕೂ ಏನು ಸಂಬಂಧ ಅನ್ನೋ ಪ್ರಶ್ನೆ ಏಳೋದು ಸಹಜ. ಆದರೆ ಅಸಲಿಗೆ ಇವೆರಡಕ್ಕೂ ಸಂಬಂಧ ಇದೆ. ಶ್ರಾವಣ ಮಾಸದಲ್ಲಿ ಬಹುತೇಕ ಹಿಂದೂಗಳು ಮಾಂಸಾಹಾರ ಸೇವಿಸುವುದಿಲ್ಲ. ಒಂದು ತಿಂಗಳಿನಿಂದ ಮಾಂಸದಿಂದ ದೂರ ಉಳಿದವರು ಶ್ರಾವಣ ಮುಗಿಯುತ್ತಲೇ ಮಾಂಸಾಹಾರಕ್ಕೆ ಮುಗಿಬೀಳುತ್ತಾರೆ. ಇದರಿಂದಾಗಿ ಮಾಂಸಕ್ಕೆ ಭಾರೀ ಬೇಡಿಕೆ ಬಂದು ಬಿಡುತ್ತದೆ. ಇದನ್ನೇ ಜಾನುವಾರು ಕಳ್ಳರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
ಧಾರವಾಡ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಸಾಕುವ ಜಾನುವಾರುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿ ಹೊತ್ತೊಯ್ಯುತ್ತಿದ್ದಾರೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ಇಂತಹ ಘಟನೆಯೊಂದು ನಡೆದಿದೆ. ಗ್ರಾಮದ ರೈತ ಮಲ್ಲನಗೌಡ ಪಾಟೀಲ್ ತಮ್ಮ ಎರಡು ಎಕರೆ ಜಮೀನಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇದೇ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಶೆಡ್ವೊಂದನ್ನು ನಿರ್ಮಿಸಿಕೊಂಡು, ಅದರಲ್ಲಿ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸಮಸ್ಯೆಯಾದಾಗ ಮೇಕೆಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಾರೆ.
ಇದನ್ನೂ ಓದಿ: ಮದುವೆಯಾಗಲೆಂದು ಶ್ರಾವಣ ಮಾಸ ಪೂರ್ತಿ ಶಿವಲಿಂಗಕ್ಕೆ ಅಭಿಷೇಕ, ಬೇಡಿಕೆ ಈಡೇರದಿದ್ದಾಗ ಲಿಂಗವನ್ನೇ ಕದ್ದ ಭಕ್ತ
ನಿತ್ಯವೂ ಹೊಲದಲ್ಲಿಯೇ ಕಳೆಯುವ ಮಲ್ಲನಗೌಡ ರಾತ್ರಿ ಹೊತ್ತು ಊಟಕ್ಕೆ ಮನೆಗೆ ಹೋಗಿ ಬರುತ್ತಾರೆ. ಗ್ರಾಮದಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಅವರ ಈ ಶೆಡ್ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಕಳೆದ ರಾತ್ರಿ ಮನೆಗೆ ಹೋದಾಗ ಜಾನುವಾರು ಖದೀಮರು ಬೊಲೆರೋ ವಾಹನದಲ್ಲಿ ಬಂದು 3 ರಿಂದ 4 ಲಕ್ಷ ರೂಪಾಯಿ ಮೌಲ್ಯದ ಒಟ್ಟು 22 ಮೇಕೆಗಳನ್ನು ಕದ್ದೊಯ್ದಿದ್ದಾರೆ. ಶೆಡ್ ಕೀಲಿ ಮುರಿದು ಒಳ ನುಗ್ಗಿದ ಕಳ್ಳರ ತಂಡ ಮೇಕೆಗಳನ್ನು ಬೊಲೆರೋಗೆ ಹಾಕಿ ತೆಗೆದುಕೊಂಡು ಹೋಗಿದೆ.
ಕದ್ದೊಯ್ದ ಮೇಕೆಗಳ ಪೈಕಿ ಅನೇಕ ಮೇಕೆಗಳು ಇತ್ತಿಚಿಗಷ್ಟೇ ಮರಿ ಹಾಕಿವೆ. ಒಂದು ಕಡೆ ಮೇಕೆ ಕಳೆದುಹೋದ ನೋವಿನೊಂದಿಗೆ ಅವುಗಳ ಮರಿಗಳನ್ನು ಆರೈಕೆ ಮಾಡುವ ಜವಾಬ್ದಾರಿ ಇದೀಗ ಮಾಲಿಕ ಮಲ್ಲನಗೌಡ ಪಾಟೀಲ್ ಅವರ ಮೇಲೆ ಬಿದ್ದಿದೆ.
ಕಳ್ಳತನವಾಗಿರುವ ಮೇಕೆಗಳ ಮರಿಗಳಿಗೆ ಇನ್ನೂ ಮೇವು ಅಥವಾ ಹುಲ್ಲು ತಿನ್ನಲು ಆರಂಭಿಸಿಲ್ಲ. ಅವೆಲ್ಲ ತಾಯಿಯ ಹಾಲಿನ ಮೇಲೆಯೇ ಅವಲಂಬಿತವಾಗಿರುವಂಥ ಮರಿಗಳು. ಇದೀಗ ತಾಯಿ ಹಾಲಿಲ್ಲದೆ ಹಾಲಿಗಾಗಿ ಪರಿತಪಿಸುತ್ತಿವೆ. ಹೀಗಾಗಿ ನಿಪ್ಪಲ್ ಮೂಲಕ ಹಾಲನ್ನು ಕುಡಿಸಲಾಗುತ್ತಿದೆ. ಇನ್ನೂ ಒಂದೆರಡು ತಿಂಗಳವರೆಗೆ ಹೀಗೆಯೇ ಹಾಲನ್ನು ಕುಡಿಸಬೇಕಿದೆ. ಆದರೆ ಇದು ಸಾಧಾರಣ ಕೆಲಸವಲ್ಲ. ಶ್ರಮದೊಂದಿಗೆ ಇಷ್ಟೊಂದು ಮರಿಗಳಿಗೆ ಹಾಲುಣಿಸುವುದರಿಂದ ಆರ್ಥಿಕವಾಗಿಯೂ ಅವರಿಗೆ ಸಂಕಷ್ಟ ಎದುರಾಗಲಿದೆ.
ಕಳ್ಳರು ಬೊಲೆರೋ ವಾಹನದ ಮೂಲಕ ಹೋಗುವ ದೃಶ್ಯ ಗ್ರಾಮದಲ್ಲಿನ ಓರ್ವರ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಎಫ್ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಟಿವಿ9 ಡಿಜಿಟಲ್ಗೆ ಪ್ರತಿಕ್ರಿಯಿಸಿದ ಮಾಲಿಕ ಮಲ್ಲನಗೌಡ, ಎರಡು ವರ್ಷಗಳ ಕಾಲ ಕಷ್ಟಪಟ್ಟು ಅವುಗಳನ್ನು ಬೆಳೆಸಿದ್ದೆವು. ಹಗಲು-ರಾತ್ರಿ ಅನ್ನದೇ ಅವುಗಳ ರಕ್ಷಣೆ ಮಾಡಿದ್ದೆವು. ಆದರೆ ಹೀಗೆ ರಾತ್ರೋರಾತ್ರಿ ಹೊತ್ತೊಯ್ದರೆ ನಮ್ಮಂಥ ರೈತರ ಪಾಡೇನು ಅಂತಾ ನೋವಿನಿಂದ ಪ್ರಶ್ನಿಸುತ್ತಾರೆ.
ಅಲ್ಲದೇ ಈ ಚಿಕ್ಕ ಚಿಕ್ಕ ಮರಿಗಳಿಗೆ ಹುಲ್ಲು ತಿನ್ನೋದೇ ಗೊತ್ತಿಲ್ಲ. ಅವುಗಳಿಗೆ ಇದೀಗ ನಿಪ್ಪಲ್ ಮೂಲಕ ಹಾಲನ್ನು ಕುಡಿಸುತ್ತಿದ್ದೇವೆ. ಆದರೆ ಬೇರೆ ಹಾಲನ್ನು ಕುಡಿಯೋ ಈ ಮರಿಗಳು ಅಷ್ಟು ಸದೃಢವಾಗಿ ಬೆಳೆಯುವುದಿಲ್ಲ. ಹೀಗಾಗಿ ನಮಗೆ ಆತಂಕವಾಗಿದೆ. ಪೊಲೀಸರು ಕಳ್ಳರನ್ನು ಹಿಡಿದು, ನಮ್ಮಂಥ ಸಣ್ಣ ರೈತರನ್ನು ಕಾಪಾಡಬೇಕಿದೆ ಎಂದು ಹೇಳಿದ್ದಾರೆ.
ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಗ್ರಾಮದ ಮುಖಂಡ ಈರಯ್ಯ ಬೆಳ್ಳಕ್ಕಿಮಠ, ಶ್ರಾವಣ ಮಾಸ ಮುಗಿಯುತ್ತ ಬರುತ್ತಿದ್ದಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಕಳ್ಳರ ಹಾವಳಿ ಹೆಚ್ಚಾಗಿ ಬಿಡುತ್ತದೆ. ಇಂಥದ್ದೇ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಂಡು, ಕಳ್ಳರಿಂದ ರಕ್ಷಣೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ