
ಹುಬ್ಬಳ್ಳಿ, ಜುಲೈ 14: ರಾಜ್ಯದಲ್ಲಿ ಹವಾಮಾನ ವೈಪರೀತ್ಯಕ್ಕೆ ಇತ್ತೀಚೆಗೆ ಹಲವು ರೋಗಗಳು ಬರುತ್ತಿವೆ. ಮಲೆನಾಡು, ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟವಿದ್ದರೆ, ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳು ಮಳೆ-ಬೆಳೆ ಇಲ್ಲದೆ ತತ್ತರಿಸುತ್ತಿವೆ. ಇದರ ಪರಿಣಾಮವಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಪ್ರಮುಖವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರವಾಗಿ ಹರಡುತ್ತಿರುವಕೈ, ಕಾಲು ಮತ್ತು ಬಾಯಿ ರೋಗ (HFMD) ಈಗ ಪಾಲಕರಲ್ಲಿ ಭೀತಿ ಮೂಡಿಸಿದೆ.
ಸಾಮಾನ್ಯವಾಗಿ ಈ ಹಿಂದೆ ಮಕ್ಕಳಲ್ಲಿ ಮೈ ತುಂಬಾ ಗುಳ್ಳೆಗಳು ಏಳುವ ಚಿಕನ್ ಪಾಕ್ಸ್ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಈ ಹೊಸ ಸೋಂಕಿನಲ್ಲಿ ಮಕ್ಕಳ ಕೈ, ಕಾಲು ಹಾಗೂ ಬಾಯಿಯ ಸುತ್ತ ನೋವು ಭರಿತ ಗುಳ್ಳೆಗಳು ಏಳುತ್ತಿದೆ ಮತ್ತು ಜ್ವರ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಈ ರೋಗವನ್ನು ಪಾಲಕರು ಚಿಕನ್ ಪಾಕ್ಸ್ ಎಂದೇ ಭಾವಿಸುತ್ತಿದ್ದರು. ಆದರೆ ವೈದ್ಯರ ಹೇಳುವಂತೆ ಇದು ಅಪಾಯಕಾರಿಯಲ್ಲದ ಆದರೆ ವೇಗವಾಗಿ ಹರಡುವ ಚರ್ಮದ ವೈರಲ್ ಸೋಂಕಾಗಿದೆ.
ಅವಳಿ ನಗರ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಸೋಂಕು ತೀವ್ರವಾಗಿ ಹರಡುತ್ತಿದ್ದು, ಪ್ರತಿನಿತ್ಯ ನೂರಾರು ಮಕ್ಕಳು ಇದರಿಂದ ನರಳುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆ ಸೇರಿದಂತೆ ಪ್ರಮುಖ ಮಕ್ಕಳ ಕ್ಲಿನಿಕ್‌ಗಳಿಗೆ ಪಾಲಕರು ಚಿಕಿತ್ಸೆಗಾಗಿ ಧಾವಿಸುತ್ತಿದ್ದಾರೆ. ಜ್ವರದ ತೀವ್ರತೆ ಹೆಚ್ಚಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಹುಬ್ಬಳ್ಳಿ ಕಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿನೋದ್ ರಟ್ಟಿಗೇರಿ, ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಲ್ಯಾಬ್ ಟೆಸ್ಟ್ ಅಥವಾ ಪ್ರತ್ಯೇಕ ಚಿಕಿತ್ಸೆ ಇಲ್ಲ. ಮಕ್ಕಳ ಲಕ್ಷಣಗಳನ್ನು ನೋಡಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದ ಐದು ದಿನ ತೀವ್ರ ನೋವಿರುತ್ತದೆಯಾದರೂ, ಇದು ಪ್ರಾಣಾಪಾಯ ತರುವ ವೈರಸ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ ವೈರಲ್ ಫೀವರ್ ಜೊತೆಗೆ ಮಕ್ಕಳನ್ನು ಕಾಡುತ್ತಿದೆ ಕಾಲು ಬಾಯಿ ರೋಗ!
ಈ ವೈರಸ್ ಸಾಂಕ್ರಾಮಿಕವಾಗಿರುವುದರಿಂದ ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳ ಮೂಲಕ ಅತ್ಯಂತ ವೇಗವಾಗಿ ಹರಡುತ್ತದೆ. ಇದನ್ನು ನಿಯಂತ್ರಿಸಲು ವೈದ್ಯರು ಕೆಲವು ಮುನ್ನೆಚ್ಚರಿಕೆಗಳನ್ನು ಸೂಚಿಸಿದ್ದಾರೆ:
ಸೋಂಕು ವೇಗವಾಗಿ ಹರಡುತ್ತಿದ್ದರೂ ಪಾಲಕರು ಗಾಬರಿಪಡುವ ಅಗತ್ಯವಿಲ್ಲ. ಸೂಕ್ತ ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳ ಮೂಲಕ ಮಕ್ಕಳನ್ನು ಸುಲಭವಾಗಿ ಈ ಸೋಂಕಿನಿಂದ ರಕ್ಷಿಸಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ