ಧಾರವಾಡ: ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್ – DIMHANS)ಗೆ 150ಕ್ಕೂ ಅಧಿಕ ವರ್ಷಗಳ ಇತಿಹಾಸ ಇದೆ. ಆದರೆ ಆರೋಗ್ಯ ಸಂಸ್ಥೆಯ ಬಗ್ಗೆ ಕಾಳಜಿ ತೋರದ ಸರಕಾರ ಅಗತ್ಯ ಸೌಕರ್ಯಗಳನ್ನು ನೀಡುತ್ತಿಲ್ಲ. ಜತೆಗೆ ಕಳೆದ 3 ವರ್ಷದಿಂದ ನಿರ್ದೇಶಕರ ಹುದ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಹೈಕೋರ್ಟ್, ರಾಜ್ಯ ಸರಕಾರಕ್ಕೆ ಭಾರೀ ತಪರಾಕಿ ನೀಡಿದೆ.
ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಆಸ್ಪತ್ರೆ
ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಸ್ಥಾಪನೆಗೊಂಡಿರುವ ಡಿಮ್ಹಾನ್ಸ್, ಐತಿಹಾಸಿಕತೆಯನ್ನು ಹೊಂದಿರುವ ರಾಜ್ಯದ ಪ್ರಮುಖ ಸಂಸ್ಥೆಯಾಗಿದೆ. ಇದು ಉತ್ತರ ಕರ್ನಾಟಕದ ಜನರಿಗೆ, ಬಡವರಿಗೆ ಹೆಚ್ಚು ಉಪಯುಕ್ತವಾಗಿದ್ದು, ಇದರ ಬಲವರ್ಧನೆಗೆ ರಾಜ್ಯ ಸರಕಾರ ಹೆಚ್ಚಿನ ನೆರವು ನೀಡದೇ ಇರುವುದರಿಂದ ಕೆಲ ಸಂದರ್ಭದಲ್ಲಿ ಮಾನಸಿಕ ರೋಗಿಗಳು ಹಲವಾರು ತಪಾಸಣೆಗಳಿಗಾಗಿ ಪರದಾಡುವಂತಾಗಿದೆ. ನಿತ್ಯವೂ ಆಸ್ಪತ್ರೆಗೆ ನೂರಾರು ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಂಡು ಹೋಗುತ್ತಾರೆ. ಅಲ್ಲದೇ ಪಕ್ಕದ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ಇಂಥದ್ದೊಂದು ಸಂಸ್ಥೆಯ ಅಭಿವೃದ್ಧಿಗೆ ರಾಜ್ಯ ಸರಕಾರ ಮಾತ್ರ ಸರಿಯಾಗಿ ಸ್ಪಂದಿಸುತ್ತಿಲ್ಲ.
ಡಿಮ್ಹಾನ್ಸ್‌ಗೆ ಪ್ರಭಾರ ನಿರ್ದೇಶಕರು ಏಕೆ?
ಹುಬ್ಬಳ್ಳಿ ಕಿಮ್ಸ್‌ನ ಡಾ. ಮಹೇಶ ದೇಸಾಯಿ ಅವರು ಸದ್ಯಕ್ಕೆ ಡಿಮ್ಹಾನ್ಸ್‌ನಲ್ಲಿ ಪ್ರಸ್ತುತ ಪ್ರಭಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಹುದ್ದೆಗೆ ಪ್ರಭಾರಿಯಾಗಿ ನೇಮಕಗೊಂಡು 2021 ಡಿಸೆಂಬರ್‌ಗೆ ಮೂರು ವರ್ಷಗಳು ಆಗಲಿವೆ. ಆದರೆ, ಸರಕಾರ ಈ ನಿರ್ದೇಶಕ ಹುದ್ದೆಗೆ ಇದ್ದವರನ್ನೇ ಪೂರ್ಣ ಪ್ರಮಾಣದಲ್ಲಿ ನೇಮಕವೂ ಮಾಡುತ್ತಿಲ್ಲ, ಇನ್ನೊಬ್ಬರನ್ನೂ ನೇಮಿಸುತ್ತಿಲ್ಲ. ಇದೇ ವಿಚಾರ ಹೈಕೋರ್ಟ್ ನ್ಯಾಯಮೂರ್ತಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಸಂಸ್ಥೆಗೆ ಸರಕಾರ ಮೆಡಿಕಲ್ ಸೂಪರಿಂಟೆಂಡೆಂಟ್ ಕೂಡ ನೇಮಕ ಮಾಡಿಲ್ಲ. ಈ ಹುದ್ದೆ ಅತಿ ಅವಶ್ಯಕವಿದ್ದರೂ ಸರಕಾರ ತನ್ನ ನಿರ್ಲಕ್ಷ ಧೋರಣೆಯನ್ನು ಮುಂದುವರಿಸಿದ್ದರಿಂದ ಬೆಂಗಳೂರು ಹೈಕೋರ್ಟ್ ಸರಿಯಾಗಿ ಎಚ್ಚರಿಕೆ ನೀಡಿದೆ.
ಡಿಮ್ಹಾನ್ಸ್ ಉತ್ತರ ಕರ್ನಾಟಕ ಭಾಗದ 15 ಕ್ಕೂ ಹೆಚ್ಚು ಜಿಲ್ಲೆಗಳ ಜನರ ಮಾನಸಿಕ ಆರೋಗ್ಯದ ಆರೈಕೆ ಮಾಡುವ ಕೇಂದ್ರವಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ವೈದ್ಯರು ತುಂಬಾನೇ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ವೈದ್ಯ ನಿತ್ಯವೂ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಇದೀಗ ಸಂಸ್ಥೆಗೆ ಎಂ.ಆರ್.ಐ. ಯಂತ್ರ ಅವಶ್ಯಕತೆ ಇದೆ. ಆದರೆ ಸರಕಾರ ಮಾತ್ರ ಇದರ ಬಗ್ಗೆ ಕೊಂಚವೂ ಆಸಕ್ತಿ ತೋರುತ್ತಿಲ್ಲ. ಈ ಮಧ್ಯೆ ಸಂಸ್ಥೆಯಲ್ಲಿ ಅಧಿಕಾರಕ್ಕಾಗಿ ಕೆಲವು ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಅದರಲ್ಲಿ ಕೆಲವರಂತೂ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಲಕ್ಷ ಲಕ್ಷ ರೂಪಾಯಿ ಸಂಬಳ ಪಡೆದು, ಸಂಸ್ಥೆಯ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಇಂಥವರು ರೋಗಿಗಳಿಗೆ ಚಿಕಿತ್ಸೆ ಕೊಡುವುದಕ್ಕಿಂತ ಹೆಚ್ಚಾಗಿ ರಾಜಕಾರಣಿಗಳನ್ನು ಹಿಡಿದು, ಅವರ ಮೂಲಕ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇಂಥವರಿಂದಲೇ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ ಎನ್ನುವುದು ಇಲ್ಲಿನ ಕೆಲ ಸಿಬ್ಬಂದಿಯ ಮಾತು.
ಎಂಆರ್‌ಐ ಯಂತ್ರದ ಅವಶ್ಯಕತೆಯಿದೆ
ಕಳೆದ ಕೆಲವು ವರ್ಷಗಳ ಹಿಂದೆ ಭಾರತೀಯ ವೈದ್ಯಕೀಯ ಕೌನ್ಸಿಲ್ ಮಂಡಳಿ ಡಿಮಾನ್ಸ್‌ಗೆ ಭೇಟಿ ನೀಡಿದಾಗ ಕೆಲವೊಂದು ಸೌಕರ್ಯಗಳನ್ನು ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಅವುಗಳನ್ನು ಪೂರೈಸುವಲ್ಲಿ ಸರಕಾರ ವಿಳಂಬ ಮಾಡಿತ್ತು. ಇತ್ತೀಚಿಗಷ್ಟೇ ಸಿಟಿ ಸ್ಕ್ಯಾನ್ ಯಂತ್ರವನ್ನು ಅಳವಡಿಸಲಾಗಿದ್ದು, ರೋಗಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ. ಆದರೆ ಸಂಸ್ಥೆಗೆ ಇದೀಗ ಎಂಆರ್‌ಐ ಯಂತ್ರ ಒದಗಿಸದೇ ಇರೋದಕ್ಕೆ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ನೇಮಕ ಮಾಡುವಲ್ಲಿ ತೋರಿದ ನಿರ್ಲಕ್ಷ್ಯದ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು ಹೈಕೋರ್ಟ್ ಖಡಕ್ ಆದೇಶ
ನೂರಾರು ವರ್ಷಗಳ ಇತಿಹಾಸ ಇರುವ ಸಂಸ್ಥೆಗೆ ಸೌಕರ್ಯ ಕಲ್ಪಿಸಬೇಕು ಎಂದು ಹೇಳಲು ಕೊನೆಗೂ ನ್ಯಾಯಾಲಯವೇ ಬರಬೇಕಾಯಿತು. ಡಿಮ್ಹಾನ್ಸ್‌ಗೆ ಹಣಕಾಸಿನ ಕೊರತೆ ಸೇರಿದಂತೆ ಮತ್ತಿತರ ನೆಪ ಹೇಳದೇ ಸರಕಾರ ಘೋಷಿಸಿರುವಂತೆ 2022 ಮಾರ್ಚ್ 1ರೊಳಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ ಮೇಲ್ದರ್ಜೆಗೇರಿಸಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಕೆಲಸ ಆಗಲೇಬೇಕು. ಸರಕಾರ ಬೇರೆಯದಕ್ಕೆಲ್ಲ ಹಣ ಖರ್ಚು ಮಾಡುತ್ತದೆ. ಆದರೆ, ಇದಕ್ಕೇಕೆ ಆಗುವುದಿಲ್ಲ? ಎಂದು ಪ್ರಶ್ನಿಸಿ ಇತ್ತೀಚೆಗೆ ಹೈಕೋರ್ಟ್ ಖಡಕ್ ಆದೇಶ ಮಾಡಿದೆ. ಸರಕಾರ ಮಾತ್ರ ನ್ಯಾಯಾಲಯದ ಆದೇಶವನ್ನು ಯಾವ ರೀತಿ ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಡಿಮ್ಹಾನ್ಸ್ ಸಂಸ್ಥೆಗೆ ಕಳೆದ ಹಲವು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರು ಹಾಗೂ ವೈದ್ಯಕೀಯ ಅಧೀಕ್ಷಕರನ್ನೂ ನೇಮಕ ಮಾಡದೆ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ನಿರ್ಲಕ್ಷ್ಯ ತೋರುತ್ತಿದೆ. ನೂರಾರು ವರ್ಷಗಳ ಇತಿಹಾಸ ಇರುವ ಸಂಸ್ಥೆಗೆ ಅಧಿಕಾರಕ್ಕೆ ಬರುವ ಸರಕಾರಗಳು ಪಕ್ಷಾತೀತವಾಗಿ ನೇರವು ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು. ಆ ಮೂಲಕ ರೋಗಿಗಳ ಸಮಸ್ಯೆಗೆ ಸ್ಪಂದಿಸಬೇಕು ಎಂದು ನ್ಯಾಯವಾದಿ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ತಿಳಿಸಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ:
ಕರ್ನಾಟಕ ಹೈಕೋರ್ಟ್ ಆದೇಶದಂತೆ ಕ್ರೈಂ ಸರಣಿಯಲ್ಲಿ ಮೊದಲ ಕಂತು ತೆಗೆದು ಹಾಕಿದ ನೆಟ್ಫ್ಲಿಕ್ಸ್
Published On - 9:27 am, Tue, 16 November 21