ನೇಹಾ ಕೊಲೆ ಪ್ರಕರಣ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಆಕ್ರೋಶ, ಆರೋಪಿಯನ್ನು ಎನ್​ಕೌಂಟರ್ ಮಾಡುವಂತೆ ಒತ್ತಾಯ

| Updated By: ರಮೇಶ್ ಬಿ. ಜವಳಗೇರಾ

Updated on: Apr 18, 2024 | 9:54 PM

ಪ್ರೀತಿಸಲು‌ ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಜಲ್ ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್‌ವೊಬ್ಬರ ಮಗಳನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಬರೋಬ್ಬರಿ 10 ಬಾರಿ ಇರಿದು ಕೊಂದಿದ್ದಾನೆ. ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜಕೀಯ ತಿರುವು ಪಡೆದುಕೊಳ್ಳುವ ಲಕ್ಷ್ಮಣಗಳು ಕಾಣಿಸುತ್ತಿವೆ.

ನೇಹಾ ಕೊಲೆ ಪ್ರಕರಣ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಆಕ್ರೋಶ, ಆರೋಪಿಯನ್ನು ಎನ್​ಕೌಂಟರ್ ಮಾಡುವಂತೆ ಒತ್ತಾಯ
ನೇಹಾ, ಫಯಾಜ್
Follow us on

ಹುಬ್ಬಳ್ಳಿ, (ಏಪ್ರಿಲ್ 18): ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರೀತಿಸಲು‌ ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್, ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ನೇಹಾಳನ್ನು ಚಾಕುವಿನಿಂದ ಬರೋಬ್ಬರಿ 10 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ‌ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಪ್ರಕರಣವನ್ನು ಖಂಡಿಸಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಬಿಜೆಪಿ, ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದೀಗ ಈ ಪ್ರಕರಣ ರಾಜಕೀಯ ಮಾತ್ರವಲ್ಲದೇ ಹಿಂದೂ-ಮುಸ್ಲಿಂ ತಿರುವು ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಪೂರಕವೆಂಬತೆ ಎಬಿವಿಪಿ, ಹಿಂದೂ ಸಂಘಟನೆ ಪ್ರತಿಭಟನೆಗಿಳಿದಿದ್ದು, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿವೆ.

ಹಿಂದೂ, ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಮುಂಭಾಗ ಎಬಿವಿಪಿ ಕಾರ್ಯಕರ್ತರು ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲದೇ ನೇಹಾ ಕೊಂದ ಆರೋಪಿ ಫಯಾಜ್​ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು. ಇನ್ನೊಂದೆಡೆ ಎನ್‌ಎಸ್‌ಯುಐ ಕಾರ್ಯಕರ್ತರು ಸಹ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮುಂಭಾಗ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಆರೋಪಿ ಫಯಾಜ್​ನನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದೆ.

ಇದನ್ನೂ ಓದಿ:  ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಪೊರೇಟರ್​ ಪುತ್ರಿ ಕೊಲೆ, ಪ್ರೀತಿ ನಿರಾಕರಿಸಿದ್ದಕ್ಕೆ ಬರ್ಬರ ಹತ್ಯೆ

ಇನ್ನು ಪ್ರಕರಣ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ವಿದ್ಯಾನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದು, ಆರೋಪಿ ಮನೆಗೆ ಬೆಂಕಿ ಹಚ್ಚಬೇಕೆಂದು ಆಕ್ರೋಶ ಹೊರಹಾಕಿದರು. ಅಲ್ಲದೇ ಆರೋಪಿ ಪರ ಯಾವ ವಕೀಲರು ಜಾಮೀನು ಹಾಕಬಾರದು ಅಲ್ಲದೇ ಆರೋಪಿಯನ್ನು ಎನ್ ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಬಿಜೆಪಿ ಆಕ್ರೋಶ

ಇನ್ನು ಈ ಘಟನೆಯನ್ನು ಬಿಜೆಪಿ ಸಹ ಖಂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ,
ಅರಾಜಕತೆಯೇ ಆಡಳಿತದ ಧ್ಯೇಯ – ಕಾನೂನು ಸುವ್ಯವಸ್ಥೆ ಮಂಗಮಾಯ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರ. ಸಿಎಂ ಸಿದ್ದರಾಮಯ್ಯನವರೇ ಇದು ಅರಾಜಕತೆಯ ಹಾಗೂ ಓಲೈಕೆ ಆಡಳಿತದ ಪ್ರತಿಫಲವಾಗಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಹಾಡುಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಮೇಲೆ ಫಯಾಜ್ ಚಾಕು ಇರಿದು ಸಾಯಿಸಿದ್ದಾನೆ. ನಿಮ್ಮ ತುಷ್ಟೀಕರಣದ ಆಡಳಿತಕ್ಕೆ ಇನ್ನೆಷ್ಟು ಅಮಾಯಕ ಹಿಂದೂಗಳನ್ನು ಬಲಿ ಹಾಕುತ್ತೀರಿ ಎಂಬುದಕ್ಕೆ ಉತ್ತರ ನೀಡಿ ಪ್ರಶ್ನಿಸಿದೆ.

ಘಟನೆ ಬಗ್ಗೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಹೇಳಿದ್ದಿಷ್ಟು

ಇನ್ನು ಈ ಪ್ರಕರಣದ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಪ್ರತಿಕ್ರಿಯಿಸಿದ್ದು, ಘಟನೆ ನಡೆದ ಒಂದು ಗಂಟೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ. ಇಂದು 4.45 ಕ್ಕೆ ಬಿವಿಬಿ ಕಾಲೇಜ್ ಗೆ ನುಗ್ಗಿ ಚಾಕು ಇರದಿದ್ದಾನೆ. ಫಯಾಜ್ ನಾಲ್ಕೈದು ಬಾರಿ ನೇಹಾಗೆ ಚಾಕು ಇರದಿದ್ದಾನೆ. ಚಾಕು ಇರಿದು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ.ಆದ್ರೆ, ಒಂದು ಗಂಟೆಯಲ್ಲಿ ಆತನನ್ನ ಅರೆಸ್ಟ್ ಮಾಡಲಾಗಿದೆ. ಇನ್ನು ನೇಹಾಳನ್ನ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಆದ್ರೆ ನೇಹಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದರು.

ಆರೋಪಿ ಫಯಾಜ್ ಪ್ರಕಾರ ನೇಹಾ ಇತ್ತೀಚಿಗೆ ಫಯಾಜ್ ನನ್ನ ಅವೈಡ್ ಮಾಡಿದ್ದಳು. ಮೊದಲು ಇಬ್ಬರು ಪರಿಚಯದಿಂದಲೇ ಇದ್ದರು. ಇತ್ತೀಚೆಗೆ ಅವೈಡ್ ಮಾಡಿರುವ ಕಾರಣಕ್ಕೆ ಕೊಲೆ ಮಾಡಿದ್ದಾನೆ. ಇದು ಆರೋಪಿ ವರ್ಷನ್ ಅಗಿದೆ. ನಾವು ತಂದೆ ತಾಯಿ ಬಳಿಯೂ ಮಾಹಿತಿ ಪಡೆಯುತ್ತೇವೆ ಎಂದು ಹೇಳಿದರು.

ಇನ್ನು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು, ನಾವು ಒಂದು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಪ್ರತಿಭಟನೆ ಮಾಡಲಿ. ನಾವು ಎಲ್ಲದಕ್ಕೂ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ