ಹುಬ್ಬಳ್ಳಿ, ಮೇ 22: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ (Anjali Ambigera Murder Case) ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ನನ್ನು ಕೊನೆಗೂ ಸಿಐಡಿ ಪೊಲೀಸರು (CID Police) ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ, ಕೊಲೆಯ ರಹಸ್ಯದ ಬಗ್ಗೆ ವಿಶ್ವ ಬಾಯ್ಬಿಟ್ಟಿದ್ದಾನೆ. ಕೊಲೆ ಮಾಡಿ ಪರಾರಿಯಾಗುತ್ತಿದ್ದಾಗ ರೈಲಿನಲ್ಲಿ ಕಿರಿಕ್ ಮಾಡಿ ತಪ್ಪಿಸಲು ಯತ್ನಿಸಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ವಿಶ್ವ ಪೊಲೀಸ್ ಬಲೆಗೆ ಬಿದ್ದಿದ್ದ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ತನಖೆಯ ಹೊಣೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಅದರಂತೆ, ನ್ಯಾಯಾಲಯದ ಅನುಮತಿ ಪಡೆದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆಗಮಿಸಿರುವ ಸಿಐಡಿ ಎಸ್‌ಪಿ ವೆಂಕಟೇಶ್ ನೇತೃತ್ವದ ಅಧಿಕಾರಿಗಳ ತಂಡ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.
ತನಿಖಾಧಿಕಾರಿಗಳ ಬಳಿ ಮಾತನಾಡಿದ ವಿಶ್ವ, ಅಂಜಲಿಯನ್ನು ನಾನು ಮೈಸೂರಿಗೆ ಬಾ ಎಂದು ಕರೆದೆ. ಆಕೆ ಬರಲಿಲ್ಲ. ಹಾಗಾಗಿ ಕೊಲೆ ಮಾಡಿದೆ ಎಂದಿದ್ದಾನೆ.
ಅಂಜಲಿ ಕೊಲೆಯಾಗುವ ಹಿಂದಿನ ದಿನವೇ ಅಂಜಲಿಗೆ ವಿಶ್ವ 1000 ರೂಪಾಯಿ ಫೋನ್ ಪೇ ಮಾಡಿದ್ದ. 1000 ಹಣ ತೆಗೆದುಕೊಂಡು ನಂತರ ಆಕೆ ಆತನನ್ನು ಬ್ಲಾಕ್ ಮಾಡಿದ್ದಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದೇನೆ ಎಂದು ವಿಶ್ವ ಸಿಐಡಿ ಅಧಿಕಾರಿಗಳ ಬಳಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವ ಕಿಮ್ಸ್ ನರ್ಸ್ ಜೊತೆ ಅನುಚಿತ ವರ್ತನೆ
ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮೇ 15ರಂದು ನಸುಕಿನಲ್ಲಿ ಅಂಜಲಿ ಹತ್ಯೆ ಮಾಡಲಾಗಿತ್ತು. ಏಪ್ರಿಲ್ 18ರಂದು ನಡೆದಿದ್ದ ನೇಹಾ ಹಿರೇಮಠ ಹತ್ಯೆ ರೀತಿಯಲ್ಲಿಯೇ ಅಂಜಲಿಯನ್ನು ಕೊಲೆ ಮಾಡಲಾಗಿತ್ತು. ಇದಕ್ಕೂ ಮುನ್ನ ಆರೋಪಿಯು ಅಂಜಲಿಗೆ ನೇಹಾ ಕೊಲೆಯಾದಂತೆಯೇ ನಿನ್ನ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಅಜ್ಜಿಯ ದೂರನ್ನು ಮೂಢನಂಬಿಕೆ ಎಂದು ವಾಪಸ್ ಕಳುಹಿಸಿದ್ದ ಪೊಲೀಸರು; ಹುಬ್ಬಳ್ಳಿಯಲ್ಲಿ ನಡೆಯಿತು ನೇಹಾ ಮಾದರಿಯ ಮತ್ತೊಂದು ಕೊಲೆ
ಆರೋಪಿ ವಿಶ್ವ ಅಂಜಲಿಗೆ ಧಮ್ಕಿ ಹಾಕಿದ್ದ ವಿಚಾರವಾಗಿ ಆಕೆಯ ಅಜ್ಜಿ ಗಂಗಮ್ಮ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ, ಅಜ್ಜಿಯ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡದ ಪೊಲೀಸರು, ಇದೆಲ್ಲ ಮೂಢನಂಬಿಕೆ ಎಂದು ಹೇಳಿ ಕಳುಹಿಸಿದ್ದರು ಎನ್ನಲಾಗಿತ್ತು. ಈ ಕೊಲೆ ರಾಜ್ಯದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದಲ್ಲದೆ, ಕಾನೂನು ಸುವ್ಯವಸ್ಥೆ ವಿಚಾರವಾಗಿ ಸರ್ಕಾರವನ್ನೂ ಮುಜುಗರಕ್ಕೀಡು ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Wed, 22 May 24