ಹುಬ್ಬಳ್ಳಿ: ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಲ್ಲಿ ಗಸ್ತು ವಾಹನಗಳನ್ನು ಬಳಕೆ ಮಾಡುವುದು ಗೊತ್ತೇ ಇದೆ. ಹೊಯ್ಸಳ, ಚಾಲುಕ್ಯ, ಪುಲಕೇಶಿ, ಕದಂಬ, ಇನ್ನಿತರ ಐತಿಹಾಸಿಕ ಹೆಸರಿನೊಂದಿಗೆ ಪೊಲೀಸ್ ಗಸ್ತು ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೇ ಮಾದರಿಯಲ್ಲಿ ಸಾರ್ವಜನಿಕರಿಂದ ದಂಡ ವಸೂಲಿ ಮಾಡಲು ನಾಲ್ಕು ವಾಹನಗಳನ್ನು ಬಳಕೆ ಮಾಡಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi-Dharwad Municipal Corporation) ಮುಂದಾಗಿದೆ. ಆದರೆ ಈ ವಾಹನಗಳಿಗೆ ಯಾವ ಹೆಸರಿಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ವಾಹನಗಳ ಖರೀದಿಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಹಂತದಲ್ಲಿದ್ದು, ಸರ್ಕಾರದಿಂದ ಒಪ್ಪಿಗೆ ದೊರೆತ ಮೇಲೆ ಪಾಲಿಕೆಯು ಟೆಂಡರ್ ಕರೆಯಲಿದೆ.
ನಗರ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ಸ್ವರೂಪದ ದಂಡ ವಸೂಲಿಗಾಗಿಯೇ 4 ವಾಹನಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 3 ವಾಹನಗಳು ಹುಬ್ಬಳ್ಳಿ ಹಾಗೂ 1 ವಾಹನ ಧಾರವಾಡದಲ್ಲಿ ಕಾರ್ಯಾಚರಿಸಲಿದೆ. ಕೆಲವೊಂದಿಷ್ಟು ವಿಶೇಷ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲು ಅವಕಾಶವಿದೆ. ಈ ವಾಹನವು ಅತ್ಯಾಧುನಿಕ ಕ್ಯಾಮರಾ, ಜಿಪಿಎಸ್ ಸೌಲಭ್ಯ ಹೊಂದಿರಲಿದ್ದು, ಪಾಲಿಕೆಯ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿರಲಿದೆ. ಘನತ್ಯಾಜ್ಯ ನಿರ್ವಹಣೆ-ಬೈಲಾ ಉಲ್ಲಂಘನೆಯಡಿ ದಂಡ ವಸೂಲಿ ಮಾಡಲು ಈ ವಾಹನ ಬಳಕೆಯಾಗಲಿದೆ.
ಗಸ್ತು ತಿರುಗುವ ವಾಹನವು ಸ್ಥಳದಲ್ಲಿಯೇ ದಂಡ ವಸೂಲಿ ಮಾಡಲಿದೆ. ಎಲ್ಲೆಂದರಲ್ಲಿ ಕಸ ಎಸೆಯುವ, ಮೂತ್ರ ವಿಸರ್ಜನೆ, ಬಯಲು ಶೌಚ, ಸಾರ್ವಜನಿಕ ಸ್ಥಳದಲ್ಲಿ ಉಗುಳುವ ಪ್ರಕರಣಗಳಲ್ಲಿ, ಮನೆ ಮನೆಗೆ ಬರುವ ಕಸ ಸಂಗ್ರಹಿಸುವ ವಾಹನಗಳಿಗೆ ಹಸಿ ಕಸ ಒಣ ಕಸವನ್ನು ಪ್ರತ್ಯೇಕಿಸಿ ನೀಡದಿದ್ದರೆ ದಂಡ ವಿಧಿಸಲಾಗುತ್ತದೆ. ಕಟ್ಟಡ ನಿರ್ಮಾಣದ ತ್ಯಾಜ್ಯ ನೆಲಸಮಗೊಳಿಸಿದ ಕಟ್ಟಡದ ಅವಶೇಷಗಳನ್ನು ರಸ್ತೆ ಬದಿ, ಖಾಲಿ ಜಾಗದಲ್ಲಿ ಎಸೆಯುವ ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಕವಾಗಿದೆ. ಅವಳಿ ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ, ಸಾಗಾಟ, ಬಳಕೆಯು ಸಂಪೂರ್ಣವಾಗಿ ನಿಂತಿಲ್ಲ. ಈ ಕುರಿತು ನಿಗಾ ವಹಿಸಿ ದಂಡ ವಸೂಲಿ ಮಾಡಲು ವಾಹನಗಳು ಬಳಕೆಯಾಗಲಿದೆ.
ಅವಳಿ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಬೈಲಾ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ನಗರ ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳಿವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ನ್ಯಾ. ಸುಭಾಶ ಅಡಿ ಅವರು ಸಾರ್ವಜನಿಕರಿಗೆ ಭಾರಿ ದಂಡ ವಿಧಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಮಹಾನಗರ ಪಾಲಿಕೆ ಏಕಾಏಕಿಯಾಗಿ ಬಾರಿ ದಂಡ ವಿಧಿಸಲು ಪಾಲಿಕೆಗೆ ಅಧಿಕಾರವಿಲ್ಲ. ಘನತ್ಯಾಜ್ಯ ನಿರ್ವಹಣಿ ಬೈಲಾನಲ್ಲಿ ನಿರ್ದಿಷ್ಟ ಪ್ರಕರಣಗಳಿಗೆ ನಿಗದಿ ಮಾಡಿರುವ ಪ್ರಮಾಣದಲ್ಲಿ ದಂಡವನ್ನು ವಸೂಲಿ ಮಾಡಬೇಕು. ಹಾಗಾಗಿ ದಂಡ ವಸೂಲಿ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡುವುದಷ್ಟೇ ಪಾಲಿಕೆ ಬಳಿ ಉಳಿದಿರುವ ಮಾರ್ಗ. ಈ ಕಾರಣಕ್ಕಾಗಿ ಬಾಲಿಕೆಯು ವಾಹನ ಖರೀದಿಗೆ ಮುಂದಾಗಿದೆ. ಈ ಹೊಸ ಐಡಿಯಾ ರಾಜ್ಯದಲ್ಲಿ ವಿನೂತನವಾಗಿದ್ದು, ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ರಹಮತ್ ಕಂಚಗಾರ್, ಟಿವಿ9 ಹುಬ್ಬಳ್ಳಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Mon, 16 January 23