ಇಡಿ ಅಧಿಕಾರಿ ಸೋಗಿನಲ್ಲಿ ಬಂದು 3 ಕೋಟಿ ರೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ

ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ 7.11 ಕೋಟಿ ರೂ ದರೋಡೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲೊಂದು ಘಟನೆ ನಡೆದಿದೆ. ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ಐವರ ಗ್ಯಾಂಗ್​​ ಒಂದು​​​ ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ವಂಚಿಸಿ 3.2 ಕೋಟಿ ರೂ ಮೌಲ್ಯದ ಚಿನ್ನಾಭರಣ ಸೇರಿ ನಗದು ದೋಚಿ ಪರಾರಿ ಆಗಿದ್ದಾರೆ.

ಇಡಿ ಅಧಿಕಾರಿ ಸೋಗಿನಲ್ಲಿ ಬಂದು 3 ಕೋಟಿ ರೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ
ಪ್ರಾತಿನಿಧಿಕ ಚಿತ್ರ
Edited By:

Updated on: Nov 24, 2025 | 5:09 PM

ಹುಬ್ಬಳ್ಳಿ, ನವೆಂಬರ್​ 24: ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿ ಕೊಟ್ಟ ಗ್ಯಾಂಗವೊಂದು ಕೇರಳ ಮೂಲದ ವ್ಯಾಪಾರಿಯನ್ನು ಹೆದರಿಸಿ ಬರೋಬ್ಬರಿ 3 ಕೋಟಿ ರೂ. ಹೆಚ್ಚಿನ ಮೌಲ್ಯದ ಚಿನ್ನಾಭರಣ ದೋಚಿ (gold theft) ಪರಾರಿ ಆಗಿರುವಂತಹ ಘಟನೆ ನಗರದ ಹೃದಯಭಾಗ ಚೆನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ನೀಲಿಜನ್ ರಸ್ತೆಯಲ್ಲಿ ನಡೆದಿದೆ. ಕಳೆದ ಗುರುವಾರದಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ (hubballi) ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿದೆ.

ನಡೆದದ್ದೇನು?

ಕೇರಳದ ವ್ಯಾಪಾರಿ ಸುದೀನ್ ಎಂ.ಆರ್, ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುತ್ತಾರೆ. ಹೀಗಾಗಿ ನ. 15 ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ್​ ಜೊತೆ ಬಂದಿದ್ದರು. ಚೈನ್‌, ಬ್ರಾಸ್ಲೈಟ್, ಉಂಗುರ, ಕಿವಿಯೋಲೆ, ನೆಕ್ಲೆಸ್, ಲಾಕೆಟ್, ಬಳೆ ಸೇರಿ ಬಿಟ್ಟು 3.2 ಕೋಟಿ ರೂ. ಮೌಲ್ಯದ ಆಭರಣಗಳನ್ನು ತಂದಿದ್ದರು.

ಇದನ್ನೂ ಓದಿ: ಬೆಂಗಳೂರು ದರೋಡೆ: ಪಾಳು ಬಿದ್ದ ಮನೆಯಲ್ಲಿ ಕೋಟಿ ಕೋಟಿ ರೂ. ಬಚ್ಚಿಟ್ಟಿದ್ದ ಕ್ರಿಮಿನಲ್​ಗಳು!

ಬೆಳಗಾವಿ, ಧಾರವಾಡ, ಹುಬ್ಬಳ್ಳಿಯಲ್ಲಿರುವ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ ಆರ್ಡರ್‌ಗಳನ್ನು ಪಡೆದಿದ್ದರು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಎದುರಿನ ಹೋಟೆಲ್​​ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಧಾರವಾಡಕ್ಕೆ ಹೋಗಿ ಹೋಟೆಲ್‌ಗೆ ವಾಪಸ್ ತೆರಳುತ್ತಿದ್ದ ವೇಳೆ ನೀಲಿಜನ್​ ರಸ್ತೆಯಲ್ಲಿ ಐವರ ಗ್ಯಾಂಗ್​​ ಅವರನ್ನು ತಡೆದಿದ್ದಾರೆ.

ಇ.ಡಿ ಅಧಿಕಾರಿಗಳು ಎಂದು ಹಿಂದಿಯಲ್ಲಿ ಮಾತನಾಡಿದ ಆರೋಪಿಗಳು, ಗುರುತಿನ ಪತ್ರ ತೋರಿಸಿ ವಿಚಾರಣೆಗೆ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಚಿನ್ನಾಭರಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಸುದೀನ್​​ರನ್ನು ಗ್ಯಾಂಗ್​​ ಬೆದರಿಸಿದೆ.

ಇದನ್ನೂ ಓದಿ: ರಾತ್ರೋರಾತ್ರಿ ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳು ಅಂದರ್

ಮೊಬೈಲ್ ಫೋನ್ ಪಡೆದು ಸಿಮ್​​ ತೆಗೆದಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿದ್ದಾರೆ. ಬೆಳಗಾವಿಯ ಕಿತ್ತೂರು ಸಮೀಪ ಕೆಲಸಗಾರ ವಿವೇಕ್​​ರನ್ನ ದುಷ್ಕರ್ಮಿಗಳು  ಇಳಿಸಿದ್ದಾರೆ. ನಂತರ ಸುದೀನ್​ರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಗೆ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಬಿಟ್ಟಿದ್ದು, ನಗದು ಹಾಗೂ ಚಿನ್ನಾಭರಣದೊಂದಿಗೆ ಗ್ಯಾಂಗ್​ ಎಸ್ಕೇಪ್ ಆಗಿದೆ.

ಡಿಸಿಪಿ ಮಹಾನಿಂಗ್ ನಂದಗಾವಿ ಹೇಳಿದ್ದಿಷ್ಟು 

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಡಿಸಿಪಿ ಮಹಾನಿಂಗ್ ನಂದಗಾವಿ ಪ್ರತಿಕ್ರಿಯಿಸಿದ್ದು, ನ. 22 ರಂದು ಸುದೀನ್ ಎನ್ನುವುರು ದೂರು ನೀಡಿದ್ದಾರೆ. ನ. 19 ರಂದು ಈ ಘಟನೆ ನಡೆದಿದೆ. ಹುಬ್ಬಳ್ಳಿ ನಗರದ ನೀಲಿಜನ್ ರಸ್ತೆಯಲ್ಲಿ ಇಳಿದು ರೇಣುಕಾ ಲಾಡ್ಜ್​​ಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಅವರನ್ನು ಅಡ್ಡಗಟ್ಟಿದ್ದ ಕೆಲವರು ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದಿರಾ ನಿಮ್ಮನ್ನು ವಿಚಾರಣೆ ಮಾಡಬೇಕು ಅಂತ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಉಪನಗರ ಠಾಣೆ ಹಾಗೂ ಸಿಸಿಬಿ ಪೊಲೀಸರಿಂದ ತನಿಖೆ ನಡೆಯುತ್ತಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:06 pm, Mon, 24 November 25