ಒಂದೇ ಹುಡುಗಿ ಮೇಲೆ ಇಬ್ಬರಿಗೆ ಲವ್​: ಹುಬ್ಬಳ್ಳಿಯಲ್ಲಿ ಹರಿದಿದ್ದು ನೆತ್ತರ ಕೋಡಿ

ಒಂದೇ ಯುವತಿಯನ್ನು ಪ್ರೀತಿಸಿದ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಗ್ಲೋಬಲ್ ಕಾಲೇಜು ಬಳಿ ನಡೆದಿದೆ. ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸೇರಿ 7 ಜನರನ್ನು ಬಂಧಿಸಿದ್ದಾರೆ. ನಗರದಲ್ಲಿ ಸಂಚಲನ ಮೂಡಿಸಿದ ಈ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದೇ ಹುಡುಗಿ ಮೇಲೆ ಇಬ್ಬರಿಗೆ ಲವ್​: ಹುಬ್ಬಳ್ಳಿಯಲ್ಲಿ ಹರಿದಿದ್ದು ನೆತ್ತರ ಕೋಡಿ
ಸಾಂದರ್ಭಿಕ ಚಿತ್ರ
Updated By: ಪ್ರಸನ್ನ ಹೆಗಡೆ

Updated on: Nov 14, 2025 | 11:44 AM

ಹುಬ್ಬಳ್ಳಿ, ನವೆಂಬರ್​ 14: ಒಂದೇ ಯುವತಿಯನ್ನು ಇಬ್ಬರು ಪ್ರೀತಿಸಿದ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಯುವಕರಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿ ನಗರದ ಗ್ಲೋಬಲ್ ಕಾಲೇಜು ಮುಂಭಾಗ ನಡೆದಿದೆ. ಗಾಯಾಳು ಯುವಕರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಸಂಬಂಧ ಪ್ರಮುಖ ಆರೋಪಿ ಸೇರಿ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಏನು?

ಮಣಿಕಂಠ ಮತ್ತು ಪವನ್ ಎಂಬ ವಿದ್ಯಾರ್ಥಿಗಳು ಗ್ಲೋಬಲ್ ಕಾಲೇಜ್​ನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದು, ಇಬ್ಬರೂ ಒಂದೇ ಹುಡುಗಿಯನ್ನ ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ತಿಂಗಳ ಹಿಂದೆ ಇವರ ನಡುವೆ ಗಲಾಟೆಯೂ ನಡೆದಿತ್ತು. ಆದರೆ, ತನ್ನ ಹುಟ್ಟು ಹಬ್ಬದ ಪಾರ್ಟಿ ಇದೆ. ಆಗಿರೋ ಸಮಸ್ಯೆಯನ್ನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಪವನ್​​ನನ್ನು ಮಣಿಕಂಠ ಕರೆದಿದ್ದ. ಹೀಗಾಗಿ ಪಾರ್ಟಿಗೆ ಹೋಗಲು ನಿರ್ಧರಿಸಿದ್ದ ಪವನ್​​, ಈ ವೇಳೆ ಸ್ನೇಹಿತರಾದ ಹುಬ್ಬಳ್ಳಿ ನಗರದ ದೇಶಪಾಂಡೆ ನಗರದ ನಿವಾಸಿಗಳಾದ ಅಭಿಷೇಕ್ ಬಂಡಿವಂಡರ್ ಮತ್ತು ಮಾರುತಿ ಬಂಡಿವಂಡರ್ ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ. ಆದರೆ, ಬರ್ತ್​​ ಡೇ ಪಾರ್ಟಿ ಆರಂಭಕ್ಕು ಮುನ್ನವೇ  ಪವನ್​ ಮತ್ತು ಆತನ ಸ್ನೇಹಿತರ ಜೊತೆ ಮಣಿಕಂಠ ಜಗಳ ಆರಂಭಿಸಿದ್ದಾನೆ. ಈ ವೇಲೆ ಗಲಾಟೆ ವಿಕೋಪಕ್ಕೆ ಹೋಗಿದ್ದು, ಮಣಿಕಂಠ ಮತ್ತು ಆತನ ಸ್ನೇಹಿತರು ಅಭಿಷೇಕ್​ ಮತ್ತು ಮಾರುತಿಗೆ ಚಾಕು ಇರಿದಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಬಂದ ಕಾರಣ ಆರೋಪಿಗಳು ಎಸ್ಕೇಪ್​ ಆಗಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಗಂಡನನ್ನೇ ಗೃಹ ಬಂಧನದಲ್ಲಿಟ್ಟ ಪತ್ನಿ! 15 ದಿನಗಳ ಗೃಹ ಬಂಧನದಿಂದ ಬಚಾವಾಗಿದ್ಹೇಗೆ ಗೊತ್ತೇ?

ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತರ ಭೇಟಿ

ಗಲಾಟೆ ವೇಳೆ ಪವನ್​​ ಪಾರಾಗಿದ್ದರೆ ಆತನ ಸ್ನೇಹಿತರಾದ ಅಭಿಷೇಕ್​ ಮತ್ತು ಮಾರುತಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಇವರಿಬ್ಬರು ಸ್ನೇಹಿತನ ಜೊತೆ ಪಾರ್ಟಿಗೆ ಹೋಗಿ ಈಗ ಆಸ್ಪತ್ರೆಯ ಬೆಡ್​​ ಮೇಲೆ ಮಲಗುವ ಸ್ಥಿತಿ ತಲುಪಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕಿಮ್ಸ್​​ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಚಾಕು ಇರಿತ ಪ್ರಕರಣ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ಈಗಾಗಲೇ ಬಂಧಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.