ಆಸ್ತಿಗಾಗಿ ಗಂಡನನ್ನೇ ಗೃಹ ಬಂಧನದಲ್ಲಿಟ್ಟ ಪತ್ನಿ! 15 ದಿನಗಳ ಗೃಹ ಬಂಧನದಿಂದ ಬಚಾವಾಗಿದ್ಹೇಗೆ ಗೊತ್ತೇ?
ಅವರಿಬ್ಬರು ಸಪ್ತಪದಿ ತುಳಿದು ಮದುವೆಯಾದವರು. ಹದಿಹರೆಯದ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಆದರೂ ಕೂಡಾ ಆಸ್ತಿಗಾಗಿ ಪತ್ನಿ ಮಾಡಬಾರದ ಕೆಲಸ ಮಾಡಿದ್ದಾಳೆ. ತಾಳಿಕಟ್ಟಿದ ಗಂಡನನ್ನೇ ಗೃಹ ಬಂಧನದಲ್ಲಿಟ್ಟು ಕ್ರೌರ್ಯ ಮೆರೆದಿದ್ದಾಳೆ. ಪತ್ನಿಯ ಕ್ರೂರತೆಗೆ ಪತಿ ಒದ್ದಾಡುವಂತಾಗಿದೆ. ಗದಗ ಬೆಟಗೇರಿ ಬಳಿ ಇಂಥದ್ದೊಂದು ಕೃತ್ಯ ನಡೆದಿದ್ದು, ಕೊನೆಗೂ ಗೃಹಬಂಧನದಿಂದ ಆ ವ್ಯಕ್ತಿ ಬಚಾವಾಗಿದ್ದಾರೆ. ಘಟನೆಯ ಪೂರ್ಣ ವಿವರ ಇಲ್ಲಿದೆ.

ಗದಗ, ನವೆಂಬರ್ 14: ಪತ್ನಿಯಿಂದ ಗೃಹ ಬಂಧನಕ್ಕೆ ಒಳಗಾಗಿ ಮನೆಯ ಕೋಣೆಯಲ್ಲಿ ಒದ್ದಾಡುತ್ತಿರುವ ಪತಿ. ‘ನನಗೆ ಸರಿಯಾಗಿ ಊಟ ಹಾಕಲ್ಲ, ಶಾಲೆಯ ಬಿಸಿಯೂಟ ತಿನ್ನಿಸ್ತಾಳೆ’ ಎಂದು ಆತನ ಗೋಳಾಟ ಬೇ. ‘ನಾವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಇಲ್ಲವೇ’ ಎಂದು ಪತ್ನಿಯ ಅವಾಜ್. ಪೊಲೀಸರು, ಮಾದ್ಯಮಗಳು ಮನೆಗೆ ಬರುತ್ತಿದ್ದಂತೆಯೇ ಪತ್ನಿಯಿಂದ ಹೈಡ್ರಾಮಾ! ಇದೆಲ್ಲಾ ನಡೆದಿದ್ದು, ಗದಗ (Gadag) ನಗರದ ಬೆಟಗೇರಿಯ ಗುಲ್ಬರ್ಗಾ ಓಣಿಯಲ್ಲಿ. ಮನೆಯಲ್ಲಿ ಗೃಹ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯ ಹೆಸರು ಗಜಾನನಸಾ ಬಸವಾ ಎಂಬುದಾಗಿ.
28 ವರ್ಷಗಳ ದಾಂಪತ್ಯ!
ಗಜಾನನಗೆ 28 ವರ್ಷಗಳ ಹಿಂದೆ ಶೋಭಾ ಎನ್ನುವ ಮಹಿಳೆಯೊಂದಿಗೆ ಮದುವೆಯಾಗಿತ್ತು. ಒಬ್ಬ ಮಗ ಇದ್ದು, ಬಾರೊಂದರಲ್ಲಿ ಕೆಲಸ ಮಾಡುತ್ತಾನೆ. ಮಗಳು ಕಾಲೇಜಿಗೆ ಹೋಗುತ್ತಾಳೆ. ಆದರೆ ಗಂಡ ಹೆಂಡತಿ ನಡುವೆ ಆಸ್ತಿಗಾಗಿ ಮನಸ್ತಾಪ ಇತ್ತು. ಹೀಗಾಗಿ ಆಕೆ ಗಂಡನನ್ನು ಬಿಟ್ಟು ಹೋಗಿದ್ದಳು. ಐದು ವರ್ಷಗಳ ಹಿಂದೆ ವಾಪಸ್ ಬಂದಿದ್ದಳು. ಆದರೂ ಗಂಡ ಹಾಗೂ ಹೆಂಡತಿ ನಡುವೆ ಮನಸ್ತಾಪ ಮುಂದುವರದಿತ್ತು.
ಗಜಾನನಸಾ ಬಸವಾಗೆ ಗೃಹ ಬಂಧನ ಇದೇ ಮೊದಲಲ್ಲ!
ಈ ಹಿಂದೆ ಗಜಾನನಸಾ ಬಸವಾ ಸಹೋದರಿಯ ಹೆಸರಿಗೆ ತನ್ನ ಆಸ್ತಿ ನೋಂದಣಿ ಮಾಡಲು ಮುಂದಾಗಿದ್ದನಂತೆ. ಆಗ ಕೂಡಾ ಗದಗನ ಗಂಗಿಮಡಿ ಪ್ರದೇಶದಲ್ಲಿ ಗಜಾನನಸಾನನ್ನು ಕೂಡಿ ಹಾಕಿದ್ದರು. ಆಗ ಗದಗ ಗ್ರಾಮೀಣ ಪೊಲೀಸರು ಬಿಡಿಸಿದ್ದರು. ಆದರೆ, ಇದೀಗ ಪುನಃ ಆಸ್ತಿಗೆ ಸಹಿ ಮಾಡುತ್ತಾನೆ ಎಂದು ಶೋಭಾ ಆತನನ್ನು ಒಂದು ಕೋಣೆಯಲ್ಲಿ ಗೃಹ ಬಂಧನ ಮಾಡಿ ಇಟ್ಟಿದ್ದಾರೆ. ಈ ವಿಷಯ ಅಕ್ಕಪಕ್ಕದ ಜನರಿಗೆ ಗೊತ್ತಾಗಿದೆ. ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ಥಳೀಯರು ಗುರುವಾರ ಮನೆ ಬಳಿ ಹೋದಾಗ ಹೈಡ್ರಾಮಾವೇ ನಡೆದಿದೆ.
ಸ್ಥಳೀಯರಿಗೆ ಅನುಮಾನ ಬಂದಿದ್ಹೇಗೆ?
ಗಜಾನನ ನೇಕಾರಿಕೆ ಕೆಲಸ ಮಾಡುತ್ತಾನೆ. ಹಲವು ತಿಂಗಳು ಹೊರಗಡೆ ಸ್ನಾನ ಮಾಡಿಕೊಂಡು, ಎಲ್ಲೆಂದರಲ್ಲಿ ಊಟ ಮಾಡಿ ಮಲಗುತ್ತಿದ್ದನಂತೆ. ಆದರೆ ಕೆಲವು ದಿನಗಳ ಕಾಲ ನೇಕಾರಿಕೆ ಕೆಲಸಕ್ಕೆ ಕೂಡಾ ಬಂದಿಲ್ಲ. ಹೀಗಾಗಿ ಸ್ಥಳೀಯರಿಗೆ ಸಂಶಯ ಬಂದಿದೆ. ಆಗ ಈತ ಮನೆಯಲ್ಲಿಯೇ ಗೃಹ ಬಂಧನಲ್ಲಿ ಇರುವದು ಗೊತ್ತಾಗಿದ್ದು, ಸ್ಥಳೀಯರು ಮಾಧ್ಯಮದವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗುರುವಾರ ಪರಿಶೀಲನೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ.
ಇದನ್ನೂ ಓದಿ: ನೆಲಮಂಗಲ: ಸಿನೆಮಾ ನಟನ ಹೆಸರು ಬಳಸಿಕೊಂಡು ಸೈಟ್ ಕೊಡಿಸುವುದಾಗಿ ವಂಚನೆ; ದಂಪತಿ ವಿರುದ್ದ ಎಫ್ಐಆರ್ ದಾಖಲು
ಮತ್ತೊಂದೆಡೆ, ಗಜಾನನ ಸ್ವಲ್ಪ ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಆಸ್ತಿಯನ್ನು ಹೆಂಡತಿ ಹಾಗೂ ಮಕ್ಕಳಿಗೆ ನೀಡದೆ, ಸಹೋದರಿಗೆ ನೀಡುತ್ತಾನೆ ಎನ್ನುವ ಕಾರಣಕ್ಕಾಗಿ ಕೂಡಿ ಹಾಕಿದ್ದಾರೆ ಎಂದೂ ಹೇಳಲಾಗಿದೆ. ಗೃಹಬಂಧನಕ್ಕೆ ಒಳಗಾದ ಗಜಾನನಸಾ ಕೂಡ ಪತ್ನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 15 ದಿನಗಳಿಂದ ಕೂಡಿ ಹಾಕಿದ್ದಾರೆ. ಸರಿಯಾಗಿ ಊಟ ನೀಡಿಲ್ಲ. ಶಾಲೆಯ ಬಿಸಿಯೂಟ ಮಾತ್ರ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಗಜಾನನ ಕುಟುಂಬಸ್ಥರ ವಿರುದ್ಧ ಸ್ಥಳೀಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಬೆಟಗೇರಿ ಪೊಲೀಸರು ಗೃಹ ಬಂಧನದಿಂದ ಮುಕ್ತಿ ನೀಡಿ, ತನಿಖೆ ಆರಂಭ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 am, Fri, 14 November 25



