
ಹುಬ್ಬಳ್ಳಿ, ಅಕ್ಟೋಬರ್ 05: ಹುಬ್ಬಳ್ಳಿಯ ನವನಗರದಲ್ಲಿ ಭಾನುವಾರ ಅದ್ಧೂರಿ ಮೆರವಣಿಗೆ ಮೂಲಕ 21ನೇ ದಿನದ ಗಣೇಶ ವಿಸರ್ಜನೆ ಮಾಡಲಾಗಿದೆ. ಆದರೆ ಮೆರವಣಿಗೆ ವೇಳೆ ಮಹಾರಾಷ್ಟ್ರ ಮೂಲದ ಯುವತಿ ನೃತ್ಯ ಮಾಡಿರುವುದು ಸದ್ಯ ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಸನಾತನ ಗಣೇಶ ಮಹಾಮಂಡಳಿ ವಿರುದ್ಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆಯೋಜಕರು ಸೇರಿದಂತೆ ನೃತ್ಯಗಾರ್ತಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ ಕೇಳಿಬಂದಿದೆ.
ಹುಬ್ಬಳ್ಳಿಯ ನವನಗರದಲ್ಲಿ ನಿನ್ನೆ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಯುವತಿಯೊಬ್ಬರಿಂದ ನೃತ್ಯ ಮಾಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯ ಸನಾತನ ಗಣೇಶ ಮಹಾಮಂಡಳಿಯು ನಿಶಾ ಮುಂಬೈಕರ್ ಎಂಬ ಯುವತಿಯನ್ನು ಕರೆಸಿ ಮೆರವಣಿಗೆಯಲ್ಲಿ ನೃತ್ಯ ಪ್ರದರ್ಶನ ಆಯೋಜಿಸಿತ್ತು.
ಇದನ್ನೂ ಓದಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ನಿಶಾ ಮುಂಬೈಕರ್ ಡ್ಯಾನ್ಸ್ಗೆ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದರು. ಅಷ್ಟೇ ಅಲ್ಲದೆ ಯುವತಿಯ ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ಆದರೆ ಗಣೇಶೋತ್ಸವದ ಧಾರ್ಮಿಕ ಮೆರವಣಿಗೆಯಲ್ಲಿ ಇಂತಹ ನೃತ್ಯ ಆಯೋಜಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೆರವಣಿಗೆಯಲ್ಲಿ ಯುವತಿಯ ನೃತ್ಯ ಪ್ರದರ್ಶನವನ್ನು ವಿರೋಧಿಸಿ ಧರ್ಮಚೇತನಾ ಸಮಿತಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸನಾತನ ಗಣೇಶ ಮಹಾಮಂಡಳಿಯ ಈ ನಡೆಯನ್ನು ಖಂಡಿಸಿರುವ ಕಾರ್ಯಕರ್ತರು, ನವನಗರ ಪೊಲೀಸ್ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ಪೆಂಡಾಲ್ ಗೌರಿ-ಗಣಪತಿ ಮೂರ್ತಿ ವಿಸರ್ಜನೆ ವಿಚಾರ: ಎಸ್ಪಿಗೆ ಡಿಸಿ ಲತಾ ಕುಮಾರಿ ನೋಟಿಸ್!
ಇನ್ನು ಧಾರ್ಮಿಕ ಕಾರ್ಯಕ್ರಮದಲ್ಲಿ ಈ ರೀತಿಯ ನೃತ್ಯ ಪ್ರದರ್ಶನ ಆಯೋಜಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ಸನಾತನ ಧರ್ಮಕ್ಕೆ ಅಪಮಾನ ಎಸಗಿರುವ ಕಾರ್ಯಕ್ರಮದ ಆಯೋಜಕರು ಹಾಗೂ ನೃತ್ಯ ಪ್ರದರ್ಶಿಸಿದ ಯುವತಿಯ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.