ಹಾಸನ: ಪೆಂಡಾಲ್ ಗೌರಿ-ಗಣಪತಿ ಮೂರ್ತಿ ವಿಸರ್ಜನೆ ವಿಚಾರ: ಎಸ್ಪಿಗೆ ಡಿಸಿ ಲತಾ ಕುಮಾರಿ ನೋಟಿಸ್!
ಹಾಸನದ ಐತಿಹಾಸಿಕ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಎಸ್ಪಿ ಸುಭಾನ್ವಿತಾ ನಡುವೆ ಜಟಾಪಟಿ ಶುರುವಾಗಿದೆ. ನಿಷೇಧದ ನಡುವೆಯೂ ವಿಸರ್ಜನೆಗೆ ಅವಕಾಶ ನೀಡಿದ ಹಾಗೂ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಎಸ್ಪಿಗೆ ಡಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಮುಖ್ಯಾಂಶಗಳು
- ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆ ಎಸ್ಪಿಗೆ ಡಿಸಿ ಕಠಿಣ ನೋಟಿಸ್.
- ಕರ್ತವ್ಯ ಲೋಪ ಹಾಗೂ ಉದ್ಧಟತನದ ಆರೋಪ ಹೊರಿಸಿ ವಿವರಣೆ ಕೇಳಿದ ಜಿಲ್ಲಾಧಿಕಾರಿ.
- ದೇವಿಗೆರೆ ಮಲಿನವೆಂದು ಫೇಸ್‌ಬುಕ್‌ನಲ್ಲಿ ಕಾಂತಾರ-2 ಹಾಡಿನೊಂದಿಗೆ ಡಿಸಿ ಆಕ್ರೋಶ ಪೋಸ್ಟ್.
ಹಾಸನ, ಅಕ್ಟೋಬರ್ 05: ನಗರದಲ್ಲಿ 70 ವರ್ಷಗಳ ಇತಿಹಾಸವಿರುವ, ಸರ್ವ ಧರ್ಮೀಯರ ಸೌಹಾರ್ದತೆಯ ಸಂಕೇತವಾದ ಪೆಂಡಾಲ್ ಗೌರಿ-ಗಣಪತಿ ಮೂರ್ತಿ ವಿಸರ್ಜನೆ ವಿಚಾರ ಈಗ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ. ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸುಭಾನ್ವಿತಾ ಅವರ ನಡುವೆ ಬಹಿರಂಗ ಜಟಾಪಟಿ ಶುರುವಾಗಿದ್ದು, ಎಸ್ಪಿಗೆ ಡಿಸಿ ನೋಟಿಸ್ ಜಾರಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಎಸ್ಪಿ ಸುಭಾನ್ವಿತಾ ಅವರ ವಿರುದ್ಧ ಡಿಸಿ ಗರಂ
ಅಕ್ಟೋಬರ್ 3 ರಂದು ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರು ಡೋಲು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದರು. ಆಯೋಜಕರು ಮುಂಚಿತವಾಗಿಯೇ ದೇವಿಗೆರೆಯಲ್ಲಿ ಮೂರ್ತಿ ವಿಸರ್ಜನೆಗೆ ಅನುಮತಿ ಪಡೆದಿದ್ದರು. ಆದರೆ, ದೇವಿಗೆರೆಯಲ್ಲಿ ಮೂರ್ತಿ ವಿಸರ್ಜನೆಗೆ ನಿಷೇಧಾಜ್ಞೆ ಇದ್ದರೂ ಆದೇಶ ಪಾಲಿಸದೆ ಗಣಪತಿ ವಿಸರ್ಜನೆ ಮಾಡಲಾಗಿದೆ ಹಾಗೂ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಎಸ್ಪಿ ಸುಭಾನ್ವಿತಾ ಅವರ ವಿರುದ್ಧ ಡಿಸಿ ಗರಂ ಆಗಿದ್ದಾರೆ.
ಇದನ್ನೂ ಓದಿ ಸರ್ವೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ಹಾಸನ ಡಿಸಿ ಲತಾ ಕುಮಾರಿ !
ಡಿಸಿ ಬರೆದ ಪತ್ರದಲ್ಲೇನಿದೆ?
“ನಿಮ್ಮ ಈ ಬೇಜವಾಬ್ದಾರಿತನವು ಸರ್ಕಾರಿ ನೌಕರರಿಗೆ ತರವಲ್ಲದ್ದಾಗಿದೆ. ವಹಿಸಿದ ಕಾರ್ಯ ನಿರ್ವಹಿಸದೇ ಉದ್ಧಟತನ ತೋರಿದ್ದೀರಿ. ನಿಮ್ಮ ವಿರುದ್ಧ ಶಿಸ್ತುಕ್ರಮಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಏಕೆ ಶಿಫಾರಸು ಮಾಡಬಾರದು?” ಎಂದು ಡಿಸಿ ನೋಟಿಸ್ ನೀಡಿದ್ದು, ಖುದ್ದು ಹಾಜರಾಗಿ ಲಿಖಿತ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೇ ನಾಲ್ಕು ಗಣೇಶ ಮೂರ್ತಿಗಳ ವಿಸರ್ಜನೆಗೆ ಇದೇ ದೇವಿಗೆರೆಯಲ್ಲಿ ಅವಕಾಶ ನೀಡಲಾಗಿತ್ತು. ಹೀಗಿದ್ದರೂ 70 ವರ್ಷಗಳ ಇತಿಹಾಸವಿರುವ ಪೆಂಡಾಲ್ ಗಣಪತಿಗೆ ನಿರ್ಬಂಧ ವಿಧಿಸಿರುವುದಕ್ಕೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




