ಹುಬ್ಬಳ್ಳಿ, ಜನವರಿ 05: ಹುಬ್ಬಳ್ಳಿಯಲ್ಲಿ (Hubballi) ನಡೆದಿದ್ದ ಗಲಭೆ ಪ್ರಕರಣವನ್ನು ಪೊಲೀಸರು ರೀ ಓಪನ್ ಮಾಡಿದ್ದು, ಇದಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. 1992ರಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ (Dharwad) ನ್ಯಾಯಲಯದಲ್ಲಿ ಮತ್ತು ಹುಬ್ಬಳ್ಳಿ ಪೊಲೀಸರ ಹತ್ತಿರ ಕಂಪ್ಲೆಂಟ್ ಮತ್ತು ಎಫ್ಐಆರ್ ಕಾಫಿಯೇ ಇಲ್ಲ. ಇದು ಇಲ್ಲದೆ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಏಕೆ ಬಂಧನ ಮಾಡಿದರು ಎಂದು ಶ್ರೀಕಾಂತ್ ಪೂಜಾರಿ ಪರ ವಕೀಲ ಸಂಜೀವ್ ಎಂ ಬಡಸ್ಕರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು ಈ ಪ್ರಕರಣ ಖಂಡಿತವಾಗಿ ಬಿದ್ದು ಹೋಗುತ್ತದೆ. ಶ್ರೀಕಾಂತ್ ಪೂಜಾರಿಗೆ ಪ್ರಕರಣದಲ್ಲಿ ಖಂಡಿತವಾಗಿ ಜಾಮೀನು ಸಿಗುತ್ತದೆ ಎಂದರು.
ಶ್ರೀಕಾಂತ್ ಪೂಜಾರಿ 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಯಾಗಿದ್ದಾರೆ. ಗಲಭೆ ವೇಳೆ ಶ್ರೀಕಾಂತ್ ಪೂಜಾರಿ ಅಡಕೆ ಮಾರಾಟ ಮಳಿಗೆಗೆ ಬೆಂಕಿ ಹಚ್ಚಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಶ್ರೀಕಾಂತ್ ಪೂಜಾರಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಲಯ ಶ್ರೀಕಾಂತ್ ಪೂಜಾರಿ ವಿರುದ್ಧ ವಾರಂಟ್ ಹೊರಡಿಸಿತ್ತು. ಹೀಗಾಗಿ 31 ವರ್ಷಗಳ ನಂತರ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಬಂಧನ ಕೇಸ್: ಆರ್ ಅಶೋಕ್ ಸೇರಿ ಬಿಜೆಪಿಯ 43 ಮುಖಂಡರ ವಿರುದ್ಧ ದೂರು
ಪೊಲೀಸರು ಶ್ರೀಕಾಂತ ಪೂಜಾರಿ 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಶ್ರೀಕಾಂತ ಪೂಜಾರಿ ಅವರನ್ನು ಇಡಲಾಗಿದೆ. ಶ್ರೀಕಾಂತ್ ಪೂಜಾರಿ ಅವರ ಬಿಡುಗಡೆಗಾಗಿ ಬಿಜೆಪಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿತ್ತು. ಬಿಜೆಪಿ ನಾಯಕರು ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಲು ಯತ್ನಿಸಿದ್ದರು.
ಶ್ರೀಕಾಂತ್ ಪೂಜಾರಿ ಪರ ವಕೀಲರು ಐದನೇಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಹುಬ್ಬಳ್ಳಿ ಶಹರ ಪೋಲಿಸರಿಂದ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ತುರ್ತು ಪ್ರಕರಣ ಎಂದು ಪರಿಗಣಿಸಿ ನ್ಯಾಯಾಲಯ ಗುರುವಾರ (ಜ.05) ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಂಡಿತ್ತು.
ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡುವಂತೆ ವಕೀಲ ಸಂಜೀವ್ ಬಡಸ್ಕರ್ ವಾದ ಮಂಡಿಸಿದ್ದರು. ಪ್ರತಿವಾದಿಯಾಗಿ ಸರ್ಕಾರಿ ವಕೀಲರು 31 ವರ್ಷದಿಂದ ತಲೆಮರೆಸಿಕೊಂಡಿದ್ದು, ಜಾಮೀನು ನೀಡದಂತೆ ವಾದ ಮಂಡಿಸಿದ್ದರು. ಇದಕ್ಕೆ ಶ್ರೀಕಾಂತ್ ಪರ ವಕೀಲರು, ಶ್ರೀಕಾಂತ್ ಪೂಜಾರಿ ಎಲ್ಲಿಯೂ ಹೋಗಿಲ್ಲ, ಕಳೆದ 40 ವರ್ಷದಿಂದ ಒಂದೇ ವಿಳಾಸದಲ್ಲಿದ್ದಾರೆ. ಈಗಾಗಲೇ ಆತನ ವಿವಿಧ ಪ್ರಕರಣ ದಾಖಲಿಸಿದಾಗಲೂ ಕೋರ್ಟ್ಗೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ವಿಚಾರಣೆಗೆ ಕರೆದಾಗ ಪೊಲೀಸರ ಮುಂದೆಯೂ ಹಾಜರಾಗಿದ್ದಾರೆ. ಹೀಗಾಗಿ ಶ್ರೀಕಾಂತ್ ಪೂಜಾರಿ ಅವರಿಗೆ ಜಾಮೀನು ನೀಡುವಂತೆ ವಾದ ಮಂಡಿಸಿದ್ದಾರೆ. ಎರಡೂ ಕಡೆಯ ವಾದ – ಪ್ರತಿವಾದವನ್ನು ಆಲಿಸಿರುವ ನ್ಯಾಯಾಧೀಶರು ಇಂದು ತೀರ್ಪು ನೀಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ