ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಎನ್​​ ರವಿಕುಮಾರ್

ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್​, ಹುಬ್ಬಳ್ಳಿಯ ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಸರ್ಕಾರ 48 ಗಂಟೆಗಳಲ್ಲಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದಂತ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತೆ ಕಾಂಗ್ರೆಸ್​​ ಆಡಳಿತ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಎನ್​​ ರವಿಕುಮಾರ್
ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Jan 04, 2024 | 3:41 PM

ಮಂಗಳೂರು, ಜನವರಿ 04: ಹುಬ್ಬಳ್ಳಿಯ ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿ (Srikanth Poojary) ಯನ್ನು ಸರ್ಕಾರ 48 ಗಂಟೆಗಳಲ್ಲಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದಂತ ಪ್ರತಿಭಟಿಸುತ್ತೇವೆ ಎಂದು ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್​ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಡದ್ರೋಹಿ, ದೇಶದ್ರೋಹಿ ಸರ್ಕಾರವಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತೆ ಕಾಂಗ್ರೆಸ್​​ ಆಡಳಿತ ನಡೆಸುತ್ತಿದೆ. 31 ವರ್ಷದ ಹಿಂದಿನ ಘಟನೆಯ ಆಧಾರದಲ್ಲಿ ಬಂಧಿಸಲಾಗಿದೆ. ಶ್ರೀಕಾಂತ್ ಪೂಜಾರಿ ಬಂಧನವನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತೆ ಎಂದು ಹೇಳಿದ್ದಾರೆ.

ಹೆಚ್​.ಆಂಜನೇಯ ತಮ್ಮ ಹೆಸರು ಬದಲಿಸಿಕೊಳ್ಳುವುದು ಒಳ್ಳೆಯದು

ಸಿಎಂ ಸಿದ್ದರಾಮಯ್ಯರೇ ನಮಗೆ ರಾಮ ಎಂದು ಮಾಜಿ ಸಚಿವ ಆಂಜನೇಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಸಚಿವ ಆಂಜನೇಯ ತಮ್ಮ ಹೆಸರಿಗೆ ತಕ್ಕಂತೆ ಮಾತನಾಡಿಲ್ಲ. ಹೆಚ್​.ಆಂಜನೇಯ ತಮ್ಮ ಹೆಸರು ಬದಲಿಸಿಕೊಳ್ಳುವುದು ಒಳ್ಳೆಯದು. ಆಂಜನೇಯ ಹೆಸರು ನಿಮಗೆ ಲಾಯಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

ಮಾಜಿ ಶಾಸಕ ಯತೀಂದ್ರ ವಿರುದ್ಧ ಕಿಡಿ

ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ಸಿದ್ದರಾಮಯ್ಯ ಒಮ್ಮೆ ಭಾರತವನ್ನು ಪ್ರವಾಸ ಮಾಡಲಿ. ಭಾರತ ಹಿಂದೂ ರಾಷ್ಟ್ರ ಅಂತಾ ಕರೆಯುವವರು ಎಷ್ಟು ಜನ ಇದ್ದಾರೆ ಎಂದು ತಿಳಿದುಕೊಳ್ಳಲಿ. ನಮ್ಮ ದೇಶದಲ್ಲಿ ಶೇಕಡಾ 80 ಗಿಂತ ಹೆಚ್ಚು ಹಿಂದೂಗಳಿದ್ದಾರೆ. ಈ ರಾಷ್ಟ್ರ ಹಿಂದೂ ರಾಷ್ಟ್ರ ಅಲ್ವಾ. ಈ ದೇಶದಲ್ಲಿ 20% ಹಿಂದೂಗಳು ಅಲ್ಲದವರು ಬಹಳ ಶಾಂತಿಯಿಂದ ಬದುಕುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ: ವಿಪಕ್ಷ ನಾಯಕ ಆರ್​. ಅಶೋಕ್​ ಕಿಡಿ

ಪಾಕಿಸ್ತಾನದ ರೀತಿ ಏನಾದರೂ ಅಪಾಯ, ತೊಂದ್ರೆ ಆಗಿದೆಯಾ. 90% ಮುಸ್ಲಿಂ ಇರುವ ದೇಶದಲ್ಲಿರುವ ಹಿಂದೂಗಳ ಪರಿಸ್ಥಿತಿ ಏನಿದೆ ಎಂದು ಮಿಸ್ಟರ್ ಯತೀಂದ್ರ ಅಧ್ಯಯನ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಸ್ವಲ್ಪ ಅಧ್ಯಯನ ಮಾಡಿ ಹೇಳಿಕೆ ಕೊಡಬೇಕು. ಬಾಯಿಗೆ ಬಂತು ಎಂದು ಹೇಳಿಬಿಡೋದಲ್ಲ ಎಂದು ಕಿಡಿಕಾರಿದ್ದಾರೆ.

ಈ ಘಟನೆ ಆಗಬೇಕು ಅಂತಿದ್ರೆ ನೀವು ದೇಶದ್ರೋಹಿ ಆಗ್ತೀರಾ

ಮತ್ತೊಂದು ಗೋಧ್ರಾ ಮಾದರಿ ಕೃತ್ಯ ನಡೆಯಲಿದೆ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿ.ಕೆ ಹರಿಪ್ರಸಾದ್​ಗೆ ಓದುವ ಅಭ್ಯಾಸ ಇದ್ದರೆ ಗೋಧ್ರಾ ಘಟನೆ ಬಗ್ಗೆ ತಿಳಿದುಕೊಳ್ಳಲಿ. ಅಲ್ಪಸಂಖ್ಯಾತರು, ಟೆರರಿಸ್ಟ್​ಗಳು ಅವತ್ತು ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದರು. ಆದರೆ ನಂತರದ ಇತಿಹಾಸ ದೇಶಕ್ಕೆ, ಜಗತ್ತಿಗೆ ಗೊತ್ತಿದೆ.

ಇದನ್ನೂ ಓದಿ: ಮತ್ತೊಂದು ಕುಣಿಕೆ ಸಿದ್ದಗೊಳಿಸಿದ ಸಿದ್ದರಾಮಯ್ಯ ಸರ್ಕಾರ: ಗೋರಿ ಅಗೆದವರ ವಿರುದ್ಧದ ಕೇಸ್ ರೀಓಪನ್​ ಆಯ್ತು

ಅದೇ ತರಹದ ಘಟನೆ ಆಗುವ ಬಗ್ಗೆ ಬಲ್ಲ ಮೂಲಗಳಿಂದ ಗೊತ್ತಾಗಿದೆ ಎಂದಿದ್ದಾರೆ. ಘಟನೆ ಆಗುತ್ತೆ ಅಂತಾ ಗೊತ್ತಾದ್ರು‌ ಸುಮ್ಮನೆ ಯಾಕೆ ಕೂತಿದ್ದಾರೆ. ಯಾರಿಗೆ ತಿಳಿಸಬೇಕು ಅವರಿಗೆ ತಿಳಿಸಲಿ. ಕೇಂದ್ರದಲ್ಲಿ ಪ್ರಧಾನಿ, ಗೃಹಸಚಿವರಿಗೆ ತಿಳಿಸ್ತೀರಾ, ರಾಜ್ಯದಲ್ಲಿ ಸಿಎಂ, ಗೃಹಸಚಿವರಿಗೆ ತಿಳಿಸಿ. ತಿಳಿಸದೆ ಹೋದ್ರೆ ತಪ್ಪಾಗುತ್ತೆ. ಘಟನೆ ಆಗೋದನ್ನು ತಡೆಯಬೇಕಾಗಿರುವುದು ನಿಮ್ಮ ನೈತಿಕ ಕರ್ತವ್ಯ.

ಇಲ್ಲ ಈ ಘಟನೆ ಆಗಬೇಕು ಅಂತಿದ್ರೆ ನೀವು ದೇಶದ್ರೋಹಿ ಆಗ್ತೀರಾ. ಇಂತಹ ಘಟನೆ ಆದರೆ ದೇಶದ್ರೋಹಿಗಳೆ ಮಾಡುವುದಕ್ಕೆ ಸಾಧ್ಯ. ದೇಶವನ್ನು ಪ್ರೀತಿ ಮಾಡದೆ ಇರೋರೆ ಮಾಡೋಕೆ ಸಾಧ್ಯ ಎಂದು ಹರಿಹಾಯ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.