
ಹುಬ್ಬಳ್ಳಿ, ಆಗಸ್ಟ್ 22: ಕ್ಷುಲ್ಲಕ ಕಾರಣಕ್ಕೆ ಮಗ ಚಾಕುವಿನಿಂದ ತಂದೆಗೆ ಇರಿದ ಘಟನೆ ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ. ಗಾಯಾಳು ಯಲ್ಲಪ್ಪ ಸಂಕುದ್ (72) ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ. ಮಹಾಂತೇಶ್ ಚಾಕುವಿನಿಂದ ಆರೋಪಿ.
ಶುಕ್ರವಾರ (ಆ.22) ಮುಂಜಾನೆ 8 ಗಂಟೆ ಸುಮಾರಿಗೆ ಯಲ್ಲಪ್ಪ ಮತ್ತು ಪುತ್ರ ಮಹಾಂತೇಶ್ ನಡುವೆ ಪಾತ್ರೆ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೆ ಏರಿದ್ದು, ಮಹಾಂತೇಶ್ ಚಾಕುವಿನಿಂದ ತಂದೆ ಯಲ್ಲಪ್ಪನಿಗೆ ನಾಲ್ಕು ಕಡೆ ಇರಿದಿದ್ದು, ಚಾಕು ದೇಹದಲ್ಲಿಯೇ ಸಿಲುಕಿತ್ತು. ಚಾಕು ಸಮೇತ ಕುಟುಂಬಸ್ಥರು ಯಲ್ಲಪ್ಪರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಯಲ್ಲಪ್ಪ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಯಲ್ಲಪ್ಪ ಅವರ ಹೊಟ್ಟೆ, ಬೆನ್ನು, ಎದೆ ಸೇರಿದಂತೆ ನಾಲ್ಕು ಕಡೆ ಚಾಕುವಿನಿಂದ ಇರಿಯಲಾಗಿದೆ.
ಯಲ್ಲಪ್ಪ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಆರೋಪಿ ಮಹಾಂತೇಶ್ನೇ ಹಿರಿಯ ಮಗ. ಆದರೆ, ಮಹಾಂತೇಶ್ ತಂದೆಯ ಜೊತೆ ಇಲ್ಲ. ತನ್ನ ಸಹೋದರರು ಮತ್ತು ತಾಯಿ ಜೊತೆ ಬೇರೆ ಮನೆ ಮಾಡಿಕೊಂಡು ಇದ್ದಾನೆ. ಯಲ್ಲಪ್ಪ ತನ್ನ ತಂದೆ-ತಾಯಿ ಜೊತೆ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಹಲವು ದಿನಗಳಿಂದ ಹಣಕಾಸು ವಿಚಾರಕ್ಕೆ ತಂದೆ ಮತ್ತು ಮಕ್ಕಳ ನಡುವೆ ಗಲಾಟೆ ಆಗುತ್ತಿತ್ತು.
ಇದನ್ನೂ ಓದಿ: ಥಿನ್ನರ್ ತಂದ ಆಪತ್ತು; ಮಗ ಸಾವು, ತಂದೆ ಸ್ಥಿತಿ ಚಿಂತಾಜನಕ
ಶುಕ್ರವಾರ ಮುಂಜಾನೆ ಯಲ್ಲಪ್ಪ ಇದ್ದ ಮನೆಗೆ ಬಂದಿದ್ದ ಮಹಾಂತೇಶ್, “ನನ್ನ ತಾಯಿ ತವರು ಮನೆಯಿಂದ ತಂದಿದ್ದ ಪಾತ್ರೆಯನ್ನು ಕೊಡುವಂತೆ ಕೇಳಿದ್ದಾನೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದ್ದು, ಜಗಳಕ್ಕೆ ತಿರುಗಿದೆ. ಗಲಾಟೆ ತಾರಕಕ್ಕೆ ಏರಿದ್ದು, ಮಹಾಂತೇಶ್ ಮನೆಯಿಂದ ತಗೆದುಕೊಂಡು ಬಂದಿದ್ದ ಚಾಕುವಿನಿಂದ ಯಲ್ಲಪ್ಪನಿಗೆ ನಾಲ್ಕು ಕಡೆ ಇರದಿದ್ದಾನೆ. ಬಿಡಿಸಲು ಹೋಗಿದ್ದ ಯಲ್ಲಪ್ಪನ ಹೆತ್ತವರ ಮೇಲೂ ಹಲ್ಲೆ ಮಾಡಿದ್ದಾನೆ.
ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹಾಂತೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಂದೆ ಮಕ್ಕಳ ಜಗಳ ಏನೇ ಇರಲಿ, ಕೂತು ಸಮಾಧಾನದಿಂದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವದನ್ನು ಬಿಟ್ಟು ಹೆತ್ತ ತಂದೆಯೇ ಮೇಲೆ ಮಗನೇ ಕೌರ್ಯ ಮೆರದಿದ್ದು ಮಾತ್ರ ದುರಂತವೇ ಸರಿ.
Published On - 8:00 pm, Fri, 22 August 25