ಹುಬ್ಬಳ್ಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಮರಗಳ ಮಾರಣ ಹೋಮ; ಪರಿಸರ ಪ್ರೇಮಿಗಳಿಂದ ಆಕ್ರೋಶ

|

Updated on: Mar 07, 2023 | 11:04 AM

ಅದು ಐತಿಹಾಸಿಕ ಬೆಟ್ಟ, ಆ ಬೆಟ್ಟಕ್ಕೆ ನಿತ್ಯ ವಾಯು ವಿಹಾರಕ್ಕೆ ನೂರಾರು‌ ಜನ‌ ಬೆಟ್ಟಕ್ಕೆ ಬಂದು ಹೋಗ್ತಾರೆ. ಆದರೆ ಇದೀಗ ಆ ಬೆಟ್ಟದಲ್ಲಿ ಸದ್ದಿಲ್ಲದೆ ಮರಗಳ ಮಾರಣ ಹೋಮ ನಡೆಯುತ್ತಿದೆ. ಒಂದು ತಂಡ ಮರಗಳನ್ನ ಉಳಿಸುತ್ತಿದ್ರೆ, ಅರಣ್ಯ ಇಲಾಖೆ ಸಿಬ್ಬಂದಿ ಯಡವಟ್ಟಿಗೆ ಅಲ್ಲಿನ ಮರಗಳ ಸುಟ್ಟು ಹೋಗ್ತಿವೆ. ಅಷ್ಟಕ್ಕೂ ಅದು ಯಾವ ಬೆಟ್ಟ ಅಲ್ಲಿ ಏನಾಗುತ್ತಿದೆ. ಈ ಸ್ಟೋರಿ ನೋಡಿ

ಹುಬ್ಬಳ್ಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಮರಗಳ ಮಾರಣ ಹೋಮ; ಪರಿಸರ ಪ್ರೇಮಿಗಳಿಂದ ಆಕ್ರೋಶ
ಹುಬ್ಬಳ್ಳಿ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಮರಗಳ ಮಾರಣ ಹೋಮ
Follow us on

ಹುಬ್ಬಳ್ಳಿ: ಒಂದು ಕಡೆ ಮರಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಮರಗಳು ಒಣಗಿರುವ ದೃಶ್ಯ. ಮತ್ತೊಂದು ಕಡೆ ಹಚ್ಚಿದ ಸಸಿಗಳ ಉಳಿಸಲು ಪಣ ತೊಟ್ಟ ಗ್ರೀನ್ ಕರ್ನಾಟಕ ತಂಡ. ಬೆಂಕಿಯ‌ ಕೆನ್ನಾಲಿಗೆಗೆ ಎಲೆಗಳು ಹಾಳಾಗಿರೋ ದೃಶ್ಯ. ಇವೆಲ್ಲ ದೃಶ್ಯಗಳು‌ ಕಂಡು ಬಂದಿದ್ದು ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ. ಹೌದು ನೃಪತುಂಗ ಬೆಟ್ಟದಲ್ಲಿ(Nrupatunga hill) ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮರಗಳ ಮಾರಣ ಹೋಮವಾಗುತ್ತಿದೆ. ನಗರಗಳು ಬೆಳೆದಂತೆ ಜನರಿಗೆ ಶುದ್ಧ ಗಾಳಿ ಸಿಗುತ್ತಿಲ್ಲ. ಮರಗಳನ್ನು ಕಡಿದು ಕಾಂಕ್ರಿಟ್ ಕಾಡುಗಳನ್ನು ನಿರ್ಮಿಸಲಾಗುತ್ತಿದೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ವೇಗವಾಗಿ ಬೆಳೆಯುತ್ತಿವೆ‌. ಇಲ್ಲಿನ ಪರಿಸರ ರಕ್ಷಣೆ, ಮರಗಳನ್ನು ಬೆಳೆಸಲು ಹಲವು ಸಂಘ ಸಂಸ್ಥೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಸುಂದರವಾದ ಬೆಟ್ಟವೊಂದಿದೆ. ನೃಪತುಂಗ ಬೆಟ್ಟ ಎಂದು ಕರೆಯಲ್ಪಡುವ ಈ ಬೆಟ್ಟದಲ್ಲಿ ಪ್ರಾಕೃತಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧದ ಮರಗಳು ಬೆಳೆಯುತ್ತವೆ. ಹಲವು ಬಗೆಯ ಗಿಡಮರಗಳಿಂದ ಬೆಟ್ಟ ಕಂಗೊಳಿಸುತ್ತೆ. ಆದರೆ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸಸಿಗಳು ಒಣಗುವುದರಿಂದ ಬೆಟ್ಟವನ್ನು ಹಸಿರಾಗಿ ಇಡಲು ಪರಿಸರ ಪ್ರೇಮಿಗಳು ಶತಪ್ರಯತ್ನ ಮಾಡುತ್ತಿದ್ದಾರೆ.

ಸುಮಾರು 200 ಜನ ವಾಯುವಿಹಾರಿಗಳು ಸೇರಿಕೊಂಡು ಪ್ರಾಕೃತಿಕ ಸೌಂದರ್ಯದ ಬೆಟ್ಟವನ್ನು ಹಸಿರುಮಯ ಮಾಡಲು ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ. ನೃಪತುಂಗ ಬೆಟ್ಟದ ವಾಕರ್ಸ್ ಅಸೋಸಿಯೇಶನ್, ಗ್ರೀನ್ ಕರ್ನಾಟಕ ಟೀಮ್‌ನ ಸದಸ್ಯರ ಪ್ರಯತ್ನದಿಂದ ಬೆಟ್ಟ ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತಿದೆ. ಅಶ್ವತ್ಥ, ಆಲ, ಹುಲಗಲ, ಗೋಣಿ, ಬೇವು, ಮಾಗನಿ ಸಸಿಗಳನ್ನು ನೆಟ್ಟು ನೀರುಣಿಸಿ ಸಲಹುತ್ತಿದ್ದರೆ. ಸ್ವಂತ ಖರ್ಚಿನಲ್ಲಿ ಸಸಿ ತಂದು ಹೊಂಡ ತಗಿಸಿ ಸಸಿ ನಡುವುದಲ್ಲದೆ ಟ್ರ್ಯಾಕ್ಟರ್ ಖರೀದಿಸಿ ಅದರಿಂದ ನೀರು ಪೂರೈಸುತ್ತಿದ್ದಾರೆ.

ಇದನ್ನೂ ಓದಿ:ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ: ಅರಣ್ಯ ಸಿಬ್ಬಂದಿ, ಪೊಲೀಸರ ದೌಡು

ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡು ಬೆಟ್ಟದಲ್ಲಿ ಬೋರ್‌ವೆಲ್ ಕೊರೆಸಲಾಗಿದೆ. ಡಾ ತಪಶೆಟ್ಟಿ, ಚೆನ್ನು ಹೊಸಮನಿ, ಗೋಪಾಲಪ್ಪ, ವಿಠ್ಠಲ್ ರೋಣದ ತಂಡದಲ್ಲಿ ನಗರದ ಖ್ಯಾತ ವೈದ್ಯರು, ಉದ್ಯಮಿಗಳು, ವ್ಯಾಪಾರಿಗಳು, ನಿವೃತ್ತ ಅಧಿಕಾರಿಗಳು ಸೇರಿಕೊಂಡು ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಬೆಟ್ಟದ ನಿರ್ವಹಣೆಯನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಇತ್ತೀಚೆಗೆ ಒಂದು ತಿಂಗಳ ಅವಧಿಯಲ್ಲಿ ಐದು ಬಾರಿ ಬೆಟ್ಟಕ್ಕೆ ಬೆಂಕಿ ತಗುಲಿದೆ. ಅಗ್ನಿಯ ಕೆನ್ನಾಲಿಗೆಗೆ ಸಾವಿರಾರು ಮರಗಳು ಸುಟ್ಟುಹೋಗಿವೆ. ಇದು ಗ್ರೀನ್ ಕರ್ನಾಟಕ ತಂಡದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಪದೇ ಪದೇ ಬೆಟ್ಟದಲ್ಲಿ ಬೆಂಕಿ ಹತ್ತಲು ಅರಣ್ಯ ಇಲಾಖೆಯ ಅವೈಜ್ಞಾನಿಕ ಕ್ರಮಗಳು ಕಾರಣ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಿದ್ದಾರೆ. ಒಣ ಹುಲ್ಲು ಹಾಗೂ ಕಸವನ್ನು ಸುಡುವ ನೆಪದಲ್ಲಿ ನೆಟ್ಟ ಸಸಿಗಳನ್ನೆಲ್ಲಾ ಸುಟ್ಟು ಹಾಕಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮರಗಳ ಮಾರಣ‌ ಹೋಮವಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸ್ಥಳೀಯ ಶಾಸಕ ಜಗದೀಶ್ ಶೆಟ್ಟರ್‌ಗೆ ದೂರು ನೀಡಿದಾಗ ಡಿಎಫ್‌ಓ ಮತ್ತು ಆರ್‌ಎಫ್‌ಓ ತೆಗ್ಗಿನಮನಿ ಅವರನ್ನು ಕರೆಸಿ ಸಭೆ ನಡೆಸಿ ಬೆಂಕಿ ಹಚ್ಚದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಸಭೆ ನಡೆದು ಎರಡೇ ದಿನದಲ್ಲಿ ಮತ್ತೆ ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಬೆಟ್ಟದಲ್ಲಿ ಗಿಡಮರಗಳನ್ನು ಬೆಳೆಸಿ ಸಲಹುತ್ತಿರುವ ನಾಗರಿಕರಿಗೆ ತೀವ್ರ ನೋವಾಗಿದೆ.

ಇದನ್ನೂ ಓದಿ:ಗೊಟ್ಟಿಪುರ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಹೊತ್ತಿ ಉರಿದ ನೂರಾರು ಎಕರೆ ಅರಣ್ಯ ಪ್ರದೇಶ

ಒಟ್ಟಿನಲ್ಲಿ ನೃಪತುಂಗ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮರಗಳು ಸುಟ್ಟು ಹೋಗುತ್ತಿವೆ. ಒಂದು ಕಡೆ ಕರ್ನಾಟಕ ಗ್ರೀನ್ ತಂಡದ ಸದಸ್ಯರು ಮರಗಳ ಉಳುವಿಗೆ ಮುಂದಾಗಿರೋದು ನಿಜಕ್ಕೂ ಮಾದರಿಯ ಕೆಲಸವಾಗಿದೆ.

ಶಿವಕುಮಾರ್​ ಪತ್ತಾರ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ