ಹುಬ್ಬಳ್ಳಿ ಗಲಭೆ: ಒಂದೇ ಘಟನೆಗೆ ಹಲವು ಎಫ್​​ಐಆರ್​ ರದ್ದು ಕೋರಿ ಸುಪ್ರಿಂ ಕೋರ್ಟ್​​ಗೆ ಅರ್ಜಿ

| Updated By: ವಿವೇಕ ಬಿರಾದಾರ

Updated on: Dec 02, 2022 | 8:29 PM

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದ ಗಲಾಟೆ ಆರೋಪಿಗಳ ವಿರುದ್ಧ ದಾಖಲಾದ ಹಲವು ಎಫ್​​ಐಆರ್ ರದ್ದು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿದೆ.

ಹುಬ್ಬಳ್ಳಿ ಗಲಭೆ: ಒಂದೇ ಘಟನೆಗೆ ಹಲವು ಎಫ್​​ಐಆರ್​ ರದ್ದು ಕೋರಿ ಸುಪ್ರಿಂ ಕೋರ್ಟ್​​ಗೆ ಅರ್ಜಿ
ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ
Follow us on

ಹುಬ್ಬಳ್ಳಿ/ದೆಹಲಿ: ಏ.16ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ (Old Hubli Police Station) ಎದುರು ಗಲಾಟೆ ಮಾಡಿದ ಆರೋಪಿಗಳ ವಿರುದ್ಧ ಪೊಲೀಸರು ಹಲವು ಸೆಕ್ಷನ್​​ಗಳಲ್ಲಿ ಎಫ್​​ಐಆರ್​ (FIR) ದಾಖಲಿಸಿದ್ದಾರೆ. ಒಂದೇ ಘಟನೆಗೆ ಹಲವು ಎಫ್​​ಐಆರ್​ ದಾಖಲಿಸಿದ್ದನ್ನು ಪ್ರಶ್ನಿಸಿ ಬಂಧಿತ ಆರೋಪಿಗಳು ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೇ ಈ  ಎಫ್‌ಐಆರ್​​ನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.  ನ್ಯಾ.ಆರ್.ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಇಂದು (ಡಿ. 2) ಅರ್ಜಿ ವಿಚಾರಣೆ ನಡೆಸಿದ್ದು, ಪ್ರಕರಣದಲ್ಲಿ ಅಭಿಪ್ರಾಯ ಕೇಳಿ‌ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ.

ಏನಿದು ಪ್ರಕರಣ

ಏ.16ರಂದು ಪ್ರವಾದಿ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಹಳೇ ಹುಬ್ಬಳ್ಳಿ ಠಾಣೆ ಎದುರು ಹೇಳಿಕೆ ನೀಡಿದ್ದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆ, ದೇವಸ್ಥಾನ, ಮನೆಗಳ‌ ಮೇಲೆ ದೊಡ್ಡ ದೊಡ್ಡ ಕಲ್ಲು ಎಸೆದಿದ್ದರು. ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸೇರಿ ಎಂಟು ಸಿಬ್ಬಂದಿ ಗಾಯಗೊಂಡಿದ್ದರು. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.

ಆಡಿಯೊ ವೈರಲ್

ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದ ಆಡಿಯೊ ಒಂದು ವೈರಲ್ ಆಗಿತ್ತು. ಕಲ್ಲು ತೂರಾಟದ ಬಗ್ಗೆ ನಿಮ್ಮ ಮೊಬೈಲ್​ಗಳಲ್ಲಿ ಇರಬಹುದಾದ ದೃಶ್ಯಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಲಾಗಿತ್ತು. ಈ ಆಡಿಯೊ ಮುಸ್ಲಿಂ ಸಮಾಜದ ವಾಟ್ಸ್ಯಾಪ್​ ಗ್ರೂಪ್​ಗಳಲ್ಲಿ ವೈರಲ್ ಆಗಿತ್ತು. ಕಲ್ಲು ತೂರಾಟ ವಿಷ್ಯುವಲ್ ಹಂಚಿಕೊಳ್ಳುವುದರಿಂದ ಪೊಲೀಸರು ನಮ್ಮನ್ನು ಗುರುತಿಸುತ್ತಾರೆ. ಜೈಲಿಗೂ ಕಳಿಸಬಹುದು. ಘಟನೆ ಏನೆಲ್ಲಾ ಆಗಿದೆಯೋ ಅದಕ್ಕೆ ಅಲ್ಲಾಹ್​ನ ಸೂಚನೆ ಕಾರಣ. ಕಲ್ಲು ತೂರಾಟ ನಡೆಸಿದವರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ ಎಂಬ ಆಡಿಯೊ ಸಂದೇಶ ವೈರಲ್ ಆಗಿತ್ತು.

ಎಂಟು ತಂಡ ರಚನೆ

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ನಡೆದ ಪ್ರಕರಣದ ತನಿಖೆ ನಡೆಸಲು 8 ಮಂದಿಯ ಪ್ರತ್ಯೇಕ ತಂಡವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಲಾಭುರಾಮ್ ರಚಿಸಿದ್ದರು. ಸರ್ಕಾರಿ ಆಸ್ತಿಪಾಸ್ತಿ ಹಾನಿ, ಪೊಲೀಸ್ ವಾಹನ ಜಖಂ ಹಾಗೂ ಕರ್ತವ್ಯಕ್ಕೆ ಅಡ್ಡಿ ಹಿನ್ನೆಲೆಯಲ್ಲಿ 6 ಎಫ್​​ಐಆರ್​​ ದಾಖಲಾಗಿದ್ದವು.

150ಕ್ಕೂ ಹೆಚ್ಚು ಜನರ ಬಂಧನ

ಪ್ರಕರಣದ ವಿಚಾರಣೆಯನ್ನು ನಡೆಸಿದ ಪೊಲೀಸರು 150ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಎಫ್‌ಐಆರ್ ದಾಖಲಾದ ಬಳಿಕ ಎನ್‌ಐಎ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Fri, 2 December 22