ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸ್ಯಾಪ್ ಸ್ಟೇಟಸ್ ಮೂಲಕ ಹುಬ್ಬಳ್ಳಿಯಲ್ಲಿ ಗಲಭೆಗೆ ಮೂಲ ಕಾರಣನಾಗಿದ್ದ ವಿದ್ಯಾರ್ಥಿ ಅಭಿಷೇಕ್ ಹಿರೇಮಠನನ್ನು ಪರೀಕ್ಷೆ ಬರೆಸಲು ಪೊಲೀಸರು ಹುಬ್ಬಳ್ಳಿ ಉಪ ಕಾರಾಗೃಹದಿಂದ ಪ್ರಿಯದರ್ಶಿನಿ ಬಡಾವಣೆಯ ಮಹೇಶ್ ಪಿಯುಸಿ ಕಾಲೇಜಿಗೆ ಕರೆತಂದರು. ಪರೀಕ್ಷೆ ಬರೆಯಲು ಅಭಿಷೇಕ್ಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10.15 ಪಿಯುಸಿ ಪರೀಕ್ಷೆ ಆರಂಭವಾಗಿದೆ. ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಪರೀಕ್ಷಾ ಕೇಂದ್ರ
ಮತ್ತೊಬ್ಬ ಪೊಲೀಸ್ ವಶಕ್ಕೆ
ಹುಬ್ಬಳ್ಳಿ ಗಲಭೆ ಪ್ರಕರಣದ ಮುಖ್ಯ ಆರೋಪಿ ಅಭಿಷೇಕ್ ಹಿರೇಮಠಗೆ ವಿಡಿಯೊ ಕಳಿಸಿದ್ದ ಮತ್ತೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿವಾದಿತ ಪೋಸ್ಟ್ ಮೂಲ ರೂವಾರಿ ಇವನೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ಬರೆಯಲಿಲ್ಲ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು
ಉಡುಪಿ: ರಾಜ್ಯಾದ್ಯಂತ ಇಂದಿನಿಂದ (ಏ್ರಪ್ರಿಲ್ 22) ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ವಿವಾದದ ಕೇಂದ್ರವಾಗಿದ್ದ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನತ್ತ ಎಲ್ಲರ ಗಮನ ನೆಟ್ಟಿದೆ. ವಿದ್ಯಾರ್ಥಿನಿಯರು ಬುರ್ಖಾ ತೊಟ್ಟು ಕಾಲೇಜಿಗೆ ಬರುತ್ತಿದ್ದಾರೆ. ಹಿಜಾಬ್, ಬುರ್ಖಾ ತೆಗೆದಿಡಲು ಕಾಲೇಜು ಆಡಳಿತ ಮಂಡಳಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದೆ. ಉಡುಪಿ ನಗರ ಠಾಣಾ ಪೊಲೀಸರು ಪಿಯು ಕಾಲೇಜಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದು, ಪ್ರಾಂಶುಪಾಲರ ಜೊತೆ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದರು. ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಹೋರಾಟಗಾರ್ತಿ ರೇಷಂ ಆಗಮಿಸಿದರು. ಇತರ ವಿದ್ಯಾರ್ಥಿನಿಯರಂತೆ ಪರೀಕ್ಷೆ ಬರೆಯಲು ಕಾಲೇಜು ಒಳಗೆ ಹೋದರು. ಹಿಜಾಬ್ ಹೋರಾಟದ ಮುಂಚೂಣಿಯಲ್ಲಿದ್ದ ಆಲಿಯಾ ಅಸಾದಿ ಸಹ ಹಾಲ್ ಟಿಕೆಟ್ ಪಡೆದುಕೊಂಡರು. ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಕೋರಿ, ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ಆರು ವಿದ್ಯಾರ್ಥಿನಿಯರ ಪೈಕಿ ಇಬ್ಬರಿಗೆ ಇಂದು ಪರೀಕ್ಷೆ ಇತ್ತು. ಇವರಿಬ್ಬರೂ ಹಾಲ್ ಟಿಕೆಟ್ ಪಡೆದು, ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದಾರೆ. ಪರೀಕ್ಷೆ ಆರಂಭವಾಗುವ ಮೊದಲು ರಾಜ್ಯ ಸರ್ಕಾರದ ಸುತ್ತೋಲೆಯನ್ನು ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಗೋಡೆಗೆ ಅಂಟಿಸಿದರು. ಈ ಸಂಬಂಧ ಒಟ್ಟು 11 ಅಂಶಗಳಿರುವ ಸುತ್ತೋಲೆಯನ್ನು ಸರ್ಕಾರ ಪ್ರಕಟಿಸಿತ್ತು.
ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಮತ್ತು ರೇಷಂ ಮನವಿ ಮಾಡಿದರು. ಪರೀಕ್ಷೆ ಆರಂಭವಾದರೂ ಇವರಿಬ್ಬರೂ ಪ್ರಾಚಾರ್ಯರ ಕಚೇರಿಯಲ್ಲಿಯೇ ಕುಳಿತಿದ್ದು ಚರ್ಚೆ ಮುಂದುವರಿಸಿದರು. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಲು ಸಾಧ್ಯವೇ ಇಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ ನಂತರ ಇವರಿಬ್ಬರೂ ಪರೀಕ್ಷೆ ಬರೆಯದೆ ವಿದ್ಯೋದಯ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಮನೆಗೆ ಮರಳಿದರು. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿ, ಅಟೋ ಹತ್ತಿ ಮನೆಯ ಕಡೆಗೆ ಹೋದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೋಮುಗಲಭೆ ಪ್ರಕರಣ; ಗಲಾಟೆಗೆ ಕಾರಣ ಇಲ್ಲಿದೆ
ಇದನ್ನೂ ಓದಿ: ವಿವಾದಿತ ಪೋಸ್ಟ್ನಿಂದ ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ; 100ಕ್ಕೂ ಹೆಚ್ಚು ಜನ ವಶ, ಕೋರ್ಟ್‌ಗೆ ಹಾಜರುಪಡಿಸಲಿರುವ ಪೊಲೀಸರು
Published On - 11:30 am, Fri, 22 April 22