ಧಾರವಾಡ, ಸೆ.20: ಕೆಲ ವರ್ಷಗಳ ಹಿಂದಷ್ಟೇ ಧಾರವಾಡ(Dharwad) ನಗರದಲ್ಲಿ ಸೂಪರ್ ಮಾರ್ಕೆಟ್ನ್ನು ಅಭಿವೃದ್ಧಿಪಡಿಸಲಾಗಿದೆ. ಈ ವೇಳೆ ಸುಮಾರು 8 ಗುಂಟೆ ಜಾಗವನ್ನು ಪಾರ್ಕಿಂಗ್ ಸಲುವಾಗಿ ಬಿಡಲಾಗಿದೆ. ಆ ಜಾಗದಲ್ಲಿ ಇರುವ ಒಂದು ಮರದ ಕೆಳಗಡೆ ಆಂಜನೇಯ ಸೇರಿದಂತೆ ಹಲವಾರು ದೇವರ ಹಳೆಯ ವಿಗ್ರಹಗಳನ್ನು ಇಡಲಾಗಿತ್ತು. ನಿತ್ಯವೂ ಅಲ್ಲಿನ ಹಿಂದೂ ಸಮುದಾಯದ ಸಣ್ಣ ವ್ಯಾಪಾರಿಗಳು ಆ ವಿಗ್ರಹಗಳಿಗೆ ಪೂಜೆ ಮಾಡಿ, ಭಕ್ತಿ ಮೆರೆಯುತ್ತಿದ್ದರು. ಇದೇ ವೇಳೆ ಅದೇ ಜಾಗದಲ್ಲಿ ಮತ್ತೊಂದು ಮರದ ಕೆಳಗಡೆ ಮುಸ್ಲಿಂ ಸಮುದಾಯದವರು ಮೆಹಬೂಬ ಸುಭಾನಿ ದರ್ಗಾ ಎಂದು ನಾಮಫಲಕವನ್ನು ಇಟ್ಟಿದ್ದರು. ಈ ವಿಚಾರ ಇಂದು ಒಮ್ಮೆಲೇ ಭುಗಿಲೆದ್ದಿತು. ಹಿಂದೂಪರ ಸಂಘಟನೆಗಳ ಯುವಕರು ಆ ನಾಮಫಲಕವನ್ನು ತೆರೆವುಗೊಳಿಸುವಂತೆ ಆಗ್ರಹಿಸಿದರು. ಇದೇ ವೇಳೆ ಹಿಂದೂ ದೇವರ ವಿಗ್ರಹಗಳನ್ನು ತೆರವುಗೊಳಿಸಿ ಎಂದು ಮುಸ್ಲಿಮರು ಕೂಡ ಆಗ್ರಹಿಸಿದರು.
ಈ ವೇಳೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಎರಡೂ ಕೋಮಿನ ಮುಖಂಡರನ್ನು ಕರೆದು ಮಾತನಾಡಿಸಿದರು. ಆದರೆ, ಮೊದಲಿಗೆ ಎರಡೂ ಕಡೆಯವರು ಒಪ್ಪಲಿಲ್ಲ. ಹಿಂದೂಗಳು ಈ ದೇವರು ಹಲವಾರು ವರ್ಷಗಳಿಂದ ಇಲ್ಲಿಯೇ ಇವೆ. ಮುಸ್ಲಿಮರು ಇತ್ತೀಚಿಗಷ್ಟೇ ಇಲ್ಲಿ ದರ್ಗಾ ನಿರ್ಮಿಸಲು ಸಂಚು ರೂಪಿಸಿ, ನಾಮಫಲಕ ಅಳವಡಿಸಿದ್ದಾರೆ. ಹೀಗಾಗಿ ಅವರ ನಾಮಫಲಕವನ್ನು ತೆರವುಗೊಳಿಸುವಂತೆ ಪಟ್ಟು ಹಿಡಿದರು. ಇದೇ ವೇಳೆ ವಿಗ್ರಹಗಳನ್ನು ಈ ಸ್ಥಳದಿಂದ ತೆರವುಗೊಳಿಸಿದರೆ ನಾವೂ ನಾಮಫಲಕವನ್ನು ತೆಗೆಯೋದಾಗಿ ಮುಸ್ಲಿಂ ಮುಖಂಡರು ಹೇಳಿದರು.
ಇದನ್ನೂ ಓದಿ:ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಕೊನೆಗೆ ಎರಡೂ ಕೋಮಿನ ಮುಖಂಡರೊಂದಿಗೆ ನಗರ ಠಾಣೆ ಪೊಲೀಸರು ಮಾತುಕತೆ ನಡೆಸಿ, ಇಬ್ಬರ ಮನವೊಲಿಸುವಲ್ಲಿ ಯಶಸ್ವಿಯಾದರು. ಎರಡೂ ಕೋಮಿನ ಜನರು ಪರಸ್ಪರ ಒಪ್ಪಿಗೆ ಸೂಚಿಸಿ, ಈ ಸಮಸ್ಯೆಯನ್ನು ಭಾವೈಕ್ಯತೆಯಿಂದ ಮುಕ್ತಾಯಗೊಳಿಸಲು ನಿರ್ಧರಿಸಿದರು. ಹಿಂದೂಗಳು ವಿಗ್ರಹಗಳಿಗೆ ಪೂಜೆ ಸಲ್ಲಿಸಿ ತೆರವುಗೊಳಿಸಿದರೆ, ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ನಾಮಫಲಕ ತೆರವುಗೊಳಿಸಿದರು. ಆ ಮೂಲಕ ನಾಡಿಗೇ ಭಾವೈಕ್ಯತೆಯ ಪಾಠ ಹೇಳಿದರು.
ಕೆಲ ವರ್ಷಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಯಾಗಿ ಅನೇಕ ರಾದ್ಧಾಂತಗಳು ಜರುಗಿದ್ದವು. ಹುಬ್ಬಳ್ಳಿಯಂತೆ ಧಾರವಾಡವೂ ಸೂಕ್ಷ್ಮ ನಗರವಾಗಿರೋದ್ರಿಂದ ಈ ಪ್ರಕರಣ ಅಷ್ಟು ಸುಲಭವಾಗಿ ಮುಗಿಯೋದಿಲ್ಲ ಅಂದುಕೊಳ್ಳಲಾಗಿತ್ತು. ಆದರೆ, ಪೊಲೀಸರ ಕಾರ್ಯಕ್ಷಮತೆ ಹಾಗೂ ಎರಡೂ ಕೋಮಿನ ಜನರ ಗಟ್ಟಿ ನಿರ್ಧಾರದಿಂದಾಗಿ ಈ ಸಮಸ್ಯೆ ಇದೀಗ ಸುಖಾಂತ್ಯ ಕಂಡಿದೆ. ಒಟ್ಟಿನಲ್ಲಿ ಕೋಮು ಗಲಭೆಗಳಾಗದಂತೆ ತಡೆಯಬೇಕೆಂದರೆ ಎರಡೂ ಕೋಮಿನ ಜನರು ಪರಸ್ಪರ ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎನ್ನುವುದು ಈ ಪ್ರಕರಣದಿಂದ ತಿಳಿದು ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ