ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ: 3 ಕೊಲೆಗಳ ಹೊಣೆಯನ್ನು ಸಿಎಂ, ಗೃಹ ಸಚಿವರು ಹೊರಬೇಕು -ಸಿದ್ದರಾಮಯ್ಯ
ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಕೂಡಾ ಫೇಲ್ ಆಗಿದ್ದಾರೆ ಅಂತಾನೇ ಅರ್ಥ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಯುವಕರ ಹತ್ಯೆಯಾಗಿದೆ.
ಹುಬ್ಬಳ್ಳಿ: ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರ 75ನೇ ಹುಟ್ಟುಹಬ್ಬ ಆಚರಣೆಗೆ ದಾವಣಗೆರೆ ಸಜ್ಜಾಗಿದೆ. ನಾಳೆ (ಆಗಸ್ಟ್ 3, ಬುಧವಾರ) ನಡೆಯಲಿರುವ ಸಿದ್ದರಾಮೋತ್ಸವಕ್ಕಾಗಿ ನಗರದ ಎಲ್ಲೆಡೆ ಕಾಂಗ್ರೆಸ್ ಧ್ವಜ, ಬ್ಯಾನರ್, ಕಟೌಟ್ಗಳು ರಾರಾಜಿಸುತ್ತಿವೆ. ಸದ್ಯ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಸಿದ್ದರಾಮಯ್ಯ ಆಗಮಿಸಿದ್ದಾರೆ.
ಈ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಕೂಡಾ ಫೇಲ್ ಆಗಿದ್ದಾರೆ ಅಂತಾನೇ ಅರ್ಥ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಯುವಕರ ಹತ್ಯೆಯಾಗಿದೆ. 3 ಕೊಲೆಗಳ ಹೊಣೆಯನ್ನು ಸಿಎಂ, ಗೃಹ ಸಚಿವರು ಹೊರಬೇಕು. ಸರ್ಕಾರದ ವಿರುದ್ಧ ಸಂಘಪರಿವಾರದವರೇ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರಿಗೆ ರಕ್ಷಣೆ ಇಲ್ಲಾ ಅಂದರೆ? ಈ ಸರ್ಕಾರ ಬೇರೆ ಜನರಿಗೆ ಹೇಗೆ ರಕ್ಷಣೆ ಕೊಡಲು ಸಾಧ್ಯವಿದೆ ಎಂದರು.
ಇನ್ನು ಪಿಎಫ್ಐ, ಎಸ್ಡಿಪಿಐ ವಿರುದ್ಧ ಸಾಕ್ಷಿಯಿದ್ದರೆ ಬ್ಯಾನ್ ಮಾಡಲಿ ಎಂದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಯಾವುದೇ ಸಂಘಟನೆ ಪ್ರಚೋಚನೆ ಮಾಡಿದರೆ ಬ್ಯಾನ್ ಮಾಡಲಿ. ‘ಎಸ್ಡಿಪಿಐ, ಪಿಎಫ್ಐನವರನ್ನು ಸಾಕುತ್ತಿರುವುದೇ ಬಿಜೆಪಿ’ ಬಸವರಾಜ ಬೊಮ್ಮಾಯಿ ಒಂದು ಧರ್ಮದ ಮುಖ್ಯಮಂತ್ರಿ ಅಲ್ಲ. ಹತ್ಯೆಯಾಗಿರುವ ಪ್ರವೀಣ್ ಮನೆಗೆ ಸಿಎಂ ಹೋಗಿದ್ದು ಸಂತಸ. ಅದೇ ರೀತಿ ಮಸೂದ್, ಫಾಜಿಲ್ ಮನೆಗೂ ಸಿಎಂ ಹೋಗಬೇಕಿತ್ತು. ಅವರ ಕುಟುಂಬದ ಸದಸ್ಯರಿಗೂ ಸಿಎಂ ಸಾಂತ್ವನ ಹೇಳಬೇಕಾಗಿತ್ತು. ಹತ್ಯೆಯಾದವರ ಕುಟುಂಬಗಳಿಗೆ ಬಿಜೆಪಿ ಅವಧಿಯಲ್ಲೇ ಪರಿಹಾರ ನೀಡುವ ಪದ್ಧತಿ ಶುರುಮಾಡಿದ್ರು. ಪರಿಹಾರ ನೀಡುವ ವಿಚಾರದಲ್ಲಿ ಸಿಎಂ ತಾರತಮ್ಯ ಮಾಡಬಾರದು. ಸರ್ವರನ್ನೂ ಸಿಎಂ ಸಮಾನತೆಯಿಂದ ಕಾಣುವುದೇ ರಾಜಧರ್ಮ. ಸಿಎಂ ಬೊಮ್ಮಾಯಿ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು ಎಂದರು.
ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಕಾಂಗ್ರೆಸ್ ಬಲಿಷ್ಠವಾಗುತ್ತೆ
ರಾಜ್ಯದಲ್ಲಿ ಯಾವಾಗ ಚುನಾವಣೆ ಬರುತ್ತೆ ಎಂದು ಜನ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಕಾಂಗ್ರೆಸ್ ಬಲಿಷ್ಠವಾಗುತ್ತೆ ಎಂದು ಸಿದ್ದರಾಮಯ್ಯನವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.