ರಾಜ್ಯದಲ್ಲಿ ಬರ ತಾಂಡವ: ಕುಡಿಯುವ ನೀರಿಗೆ ಈಗಲೇ ಹಾಹಾಕಾರ, ಕೆಸರು ನೀರೇ ಆಸರೆ!

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರದ ಬವಣೆ ತೀವ್ರಗೊಂಡಿದ್ದು, ಧಾರವಾಡ ಮತ್ತು ದಾವಣಗೆರೆ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಕೆಲವೆಡೆ ಕೆಸರು ನೀರೇ ಆಸರೆಯಾಗಿದ್ದು, ಜನರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಟ್ಯಾಂಕರ್ ನೀರಿಗಾಗಿ ಜನರು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಬರ ತಾಂಡವ: ಕುಡಿಯುವ ನೀರಿಗೆ ಈಗಲೇ ಹಾಹಾಕಾರ, ಕೆಸರು ನೀರೇ ಆಸರೆ!
ಕೆಸರು ಮಿಶ್ರಿತ ನೀರನ್ನೇ ಬಿಂದಿಗೆಗಳಲ್ಲಿ ತುಂಬಿಕೊಳ್ಳುತ್ತಿರುವುದು
Edited By:

Updated on: Nov 11, 2026 | 8:08 AM

ಮುಖ್ಯಾಂಶಗಳು

  • ಕೆಸರು ಮಿಶ್ರಿತ ನೀರೇ ಗ್ರಾಮಸ್ಥರಿಗೆ ಆಸರೆ
  • ಟ್ಯಾಂಕರ್ ನೀರಿಗಾಗಿ ಖಾಲಿ ಬಿಂದಿಗೆ ಹಿಡಿದು ಕ್ಯೂ
  • ಕೆರೆ, ಕಟ್ಟೆ, ಬೋರ್‌ವೆಲ್‌ಗಳು ಬತ್ತಿ ಜನರ ಪರದಾಟ

ಬೆಂಗಳೂರು, ನವೆಂಬರ್ 11: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರದ ಬವಣೆ ತೀವ್ರಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಈಗಲೇ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದು, ಕೆಲವೆಡೆ ಕೆಸರು ಮಿಶ್ರಿತ ನೀರನ್ನೇ ಜನರು ಬಳಸುವ ಅನಿವಾರ್ಯತೆ ಉಂಟಾಗಿದೆ. ಮತ್ತೊಂದೆಡೆ ಟ್ಯಾಂಕರ್ ನೀರಿಗಾಗಿ ಮಕ್ಕಳು ಮತ್ತು ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಗಂಟೆಗಟ್ಟಲೆ ಕಾಯುವ ದುಸ್ಥಿತಿ ಎದುರಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ, ಅಣ್ಣಿಗೇರಿ ಮತ್ತು ನವಲಗುಂದ ಸೇರಿದಂತೆ ಹಲವು ತಾಲೂಕುಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕೆರೆಗಳು ಬರಿದಾಗಿದ್ದು, ಉಳಿದಿರುವ ಅಲ್ಪಸ್ವಲ್ಪ ನೀರೇ ಕೆಲವು ಗ್ರಾಮಗಳ ಜನರಿಗೆ ಆಸರೆಯಾಗಿದೆ. ಕೆಸರು ಮಿಶ್ರಿತ ನೀರನ್ನೇ ಬಿಂದಿಗೆಗಳಲ್ಲಿ ತುಂಬಿಕೊಂಡು ಬಳಕೆ ಮಾಡುತ್ತಿರುವ ದೃಶ್ಯಗಳು ಜನರ ಸಂಕಷ್ಟವನ್ನು ಬಿಂಬಿಸುತ್ತಿವೆ.

ಕುಂದಗೋಳ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ನೀರು ಪೂರೈಸುವ ಯೋಜನೆ ಜಾರಿಯಲ್ಲಿದೆ. ಆದರೆ, ಕೆಲವೆಡೆ ನೀರು ಪೂರೈಕೆಯಾಗುತ್ತಿದ್ದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ನೀರು ಮರೀಚಿಕೆಯಾಗಿರುವ ಆರೋಪ ಕೇಳಿಬಂದಿದೆ.

Loading...

ದಾವಣಗೆರೆಯಲ್ಲೂ ಕುಡಿಯುವ ನೀರಿನ ಸಮಸ್ಯೆ

ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ ದಾವಣಗೆರೆ ಜಿಲ್ಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಕೆರೆ ಮತ್ತು ಕಟ್ಟೆಗಳು ಬತ್ತಿ ಹೋಗಿದ್ದು, ಬೋರ್‌ವೆಲ್‌ಗಳೂ ಬರಿದಾಗಿವೆ.

ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದರೂ, ಸಾವಿರಾರು ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಅದು ಸಾಕಾಗುತ್ತಿಲ್ಲ ಎನ್ನಲಾಗಿದೆ. ಪರಿಣಾಮ ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳು ಮತ್ತು ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಟ್ಯಾಂಕರ್ ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೂ ನೀರಿನ ಕೊರತೆ ಕಾಡುತ್ತಿದ್ದು, ಗ್ರಾಮಸ್ಥರು ಕೂಡಲೇ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಧಾರವಾಡ ರೈತ ಕುಟುಂಬದ ಕೆರೆ ಕ್ರಾಂತಿ: ಭೀಕರ ಬರದ ನಡುವೆಯೂ ಹಚ್ಚ ಹಸಿರಿನ ಬೆಳೆ ಬೆಳೆದ ಅನ್ನದಾತ

ರಾಜ್ಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ರೈತರು ಬೆಳೆ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದ್ದು, ಇದೀಗ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಆತಂಕ ಮೂಡಿಸಿದೆ. ಬರದ ಬವಣೆಯಿಂದ ಕಂಗೆಟ್ಟಿರುವ ಜನರ ನೀರಿನ ಸಮಸ್ಯೆಯನ್ನು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us