ಧಾರವಾಡ: ಕೆಲವೊಮ್ಮೆ ಮನುಷ್ಯನ ವರ್ತನೆಗಳೇ ವಿಚಿತ್ರ ಅನ್ನಿಸಿಬಿಡುತ್ತವೆ. ವೈಯಕ್ತಿಕ ದ್ವೇಷಕ್ಕೋ ಅಥವಾ ಇನ್ನೊಬ್ಬರಿಗೆ ಲಾಭವಾಗಬಾರದು ಅನ್ನೋ ಕಾರಣಕ್ಕೋ ಏನೋ ವಿಕೃತಿ ಮೆರೆದುಬಿಡುತ್ತಾನೆ. ಧಾರವಾಡದಲ್ಲಿಯೂ ಇಂಥದ್ದೊಂದು ಘಟನೆ ನಡೆದಿದೆ.
ತಾಲೂಕಿನ ಹಳ್ಳಿಗೇರಿ ಗ್ರಾಮದ ಬಸವರಾಜ ಸೋನಪ್ಪನವರ್ ಅನ್ನೋ ರೈತ ತಮ್ಮ ಎರಡು ಎಕರೆ ಜಮೀನಿನಲ್ಲಿ ಹೀರೇಕಾಯಿ ಬೆಳೆದಿದ್ದರು. ಬಳ್ಳಿ ಅದಾಗಲೇ ಕಾಯಿ ಬಿಟ್ಟು ಇನ್ನೇನು ನಿತ್ಯವೂ ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಬೇಕು ಅನ್ನುವಷ್ಟರಲ್ಲಿ ಯಾರೋ ದುಷ್ಕರ್ಮಿಗಳು ಬೆಳೆಯನ್ನೇ ನಾಶ ಮಾಡುವ ಮಟ್ಟಕ್ಕೆ ವಿಕೃತಿ ಮೆರೆದಿದ್ದಾರೆ. ಕಳೆದ ರಾತ್ರಿ ಬೆಳೆಗೆ ಕಳೆನಾಶಕ ಸಿಂಪಡಿಸಿ ಹೋಗಿದ್ದಾರೆ. ಇದರಿಂದಾಗಿ ಹೀರೇಕಾಯಿ ಬಳ್ಳಿ ನಿಧಾನವಾಗಿ ಒಣಗಲು ಶುರುವಾಗಿದೆ.
ಕಳೆನಾಶಕವನ್ನು ಒಂದು ಬಾರಿ ಸಿಂಪಡಿಸಿದರೆ ಕನಿಷ್ಠ ಆರು ತಿಂಗಳವರೆಗೆ ಅಲ್ಲಿ ಯಾವುದೇ ಗಿಡ ಬೆಳೆಯೋದಿಲ್ಲ. ಅಂಥದ್ದರಲ್ಲಿ ಇದೀಗ ಬೆಳೆದು ನಿಂತ ಬಳ್ಳಿಗಳಿಗೆ ಕಳೆನಾಶಕ ಸಿಂಪಡಿಸಿ ಹೋಗಿದ್ದಾರೆ.
ಬಾಡಿ ಹೋದ ಹೀರೇಕಾಯಿ ಬಳ್ಳಿ
ಎಂದಿನಂತೆ ಬೆಳಗ್ಗೆ ಹೊಲಕ್ಕೆ ಬಂದ ಬಸವರಾಜ ಅವರಿಗೆ ಶಾಕ್ ಕಾದಿತ್ತು. ಬೆಳ್ಳಂಬೆಳಗ್ಗೆ ಹಸಿರಿನಿಂದ ನಳನಳಿಸಬೇಕಿದ್ದ ಹೀರೇಕಾಯಿ ಬಳ್ಳಿಗಳು ಬಾಡಿ ಹೋಗಿದ್ದವು. ಸಮೀಪಕ್ಕೆ ಹೋಗಿ ನೋಡಿದಾಗ ರಾಸಾಯನಿಕ ಸಿಂಪಡಿಸಿದ್ದು ಗಮನಕ್ಕೆ ಬಂತು. ಹೊಲದ ತುಂಬೆಲ್ಲಾ ಹುಡುಕಾಡಿದಾಗ ಕಳೆನಾಶಕದ ಬಾಟಲ್ಗಳು ಸಿಕ್ಕವು. ಇದರಿಂದಾಗಿ ಕಳೆ ನಾಶಪಡಿಸೋ ರಾಸಾಯನಿಕವನ್ನು ಸಿಂಪಡಿಸಿದ್ದಕ್ಕೆ ತಮ್ಮ ಬೆಳೆ ಈ ರೀತಿಯಾಗಿರೋದು ಖಚಿತವಾಯಿತು.
ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಹೊಲಕ್ಕೆ ದೌಡಾಯಿಸಿದರು. ಇಷ್ಟೆತ್ತರ ಬೆಳೆದು ನಿಂತಿದ್ದ ಬಳ್ಳಿಗಳು ನಿಧಾನವಾಗಿ ಒಣಗುತ್ತಿರೋದನ್ನು ನೋಡಿ ಅವರ ಗೋಳಿಟ್ಟರು. ಇನ್ನು ಬಸವರಾಜ ಅವರ ಕುಟುಂಬದವಂತೂ ಅಳುತ್ತಾ, ಈ ಕೃತ್ಯವನ್ನೆಸಗಿದವರಿಗೆ ಹಿಡಿ ಶಾಪ ಹಾಕುತ್ತಿದ್ದರು. ಮೊದಲೇ ಕೃಷಿ ಅನ್ನೋದು ತುಂಬಾನೇ ಕಷ್ಟಕರ ಅನ್ನುವ ಹಂತಕ್ಕೆ ಬಂದಿದೆ. ಅಂಥದ್ದರಲ್ಲಿ ಕೆಲವು ರೈತರು ಎಷ್ಟೇ ಕಷ್ಟವಾದರೂ ಸಾಲ ಮಾಡಿಯಾದರೂ ಕೃಷಿಯನ್ನು ಮಾಡುತ್ತಲೇ ಇದ್ದಾರೆ. ಅಂಥವರಿಗೆ ಈ ರೀತಿ ಹೊಡೆತ ಬಿದ್ದರೆ ಕೃಷಿಯ ಗತಿ ಏನು ಅನ್ನೋದು ಇದೀಗ ಕೇಳಿ ಬರುತ್ತಿರುವ ಪ್ರಶ್ನೆ.
ಇದೀಗ ಬಸವರಾಜ ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಾಮಾಣಿಕ ಪ್ರಯತ್ನ ಮಾಡಿ, ಈ ವಿಕೃತಿ ಮೆರೆದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಇಂಥ ಘಟನೆಗಳು ನಿಲ್ಲಲು ಸಾಧ್ಯ.