
ಧಾರವಾಡ: ಕೊರೊನಾ ಲಾಕ್‌ಡೌನ್‌ದಿಂದ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ರೈತರಿಗೆ ಮತ್ತೊಂದು ಶಾಕ್ ಕಾದಿದೆ. ಏಕೆಂದರೆ ಇಂಥ ಸಮಯದಲ್ಲೂ ಅವರೆಲ್ಲಾ ಕೃಷಿ ಚಟುವಟಿಕೆಯನ್ನು ಶುರು ಮಾಡಿದ್ದರು. ಈ ಮುಂಗಾರಿನಲ್ಲಾದರೂ ಒಂದಷ್ಟು ಬೆಳೆ ತೆಗೆದುಕೊಳ್ಳೋಣ ಅನ್ನೋ ಲೆಕ್ಕಾಚಾರದಲ್ಲಿದ್ದಾಗಲೇ ಮುಂಗಾರು ಮಳೆಯೂ ಸಹ ಈಗ ವಿಳಂಬವಾಗಿ ಬರಲಿದೆ ಅನ್ನೋ ಅಂಶ ತಿಳಿದು ಬಂದಿದೆ.
ಇದರಿಂದಾಗಿ ಅನ್ನದಾತರು ಆತಂಕಗೊಂಡಿದ್ದಾರೆ. ರೈತರು ಈಗಾಗಲೇ ಹೊಲಗಳನ್ನು ಸಿದ್ಧವಾಗಿಸಿಟ್ಟುಕೊಂಡು ಮುಂಗಾರು ಬಿತ್ತನೆಗೆ ಕಾದು ಕುಳಿತಿದ್ದಾರೆ. ಆದರೆ ಈ ಬಾರಿ ಮುಂಗಾರು ವಿಳಂಬವಾಗಿ ಉತ್ತರ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ ಅಂತಾ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಸದ್ಯದ ಹವಾಮಾನ ಅಧ್ಯಯನದ ಪ್ರಕಾರ ನಾಲ್ಕೈದು ದಿನ ಮುಂಗಾರು ವಿಳಂಬ ಆಗಬಹುದು ಎನ್ನಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸುರಿಸಬೇಕಿದ್ದ ಮಳೆ ಮಾರುತಗಳ ತೇವಾಂಶವನ್ನೆಲ್ಲ ಈ ಅಂಫಾನ್ ಸಂಪೂರ್ಣವಾಗಿ ಹೀರಿಕೊಂಡು ಹೋಗಿದೆ. ಇದರಿಂದ ಈ ಭಾಗದಲ್ಲಿ ಆವಿಯಾಗಿ ಮೋಡ ಸೇರಿದ್ದ ನೀರಿನ ಒಂದಂಶದಷ್ಟು ಮಳೆಯೂ ಈಗ ಸಿಗದಂತಾಗಿದೆ.
ಮತ್ತೊಂದೆಡೆ ಅರಬ್ ತೀರದ ವಾಯು ಭಾರ ಕುಸಿತದಿಂದ ಮಳೆ ಬರಲಿದ್ದ ಮಾರುತಗಳು ಸಹ ಇದೀಗ ಪಶ್ಚಿಮ ದಿಕ್ಕಿನತ್ತ ಚಲನೆ ಆರಂಭಿಸಿವೆಯಂತೆ. ಇದರಿಂದಾಗಿ ಜೂನ್ 1 ರ ಹೊತ್ತಿಗೆ ಮುಂಗಾರು ಮಳೆ ಕೇರಳ ಪ್ರವೇಶಿಸಿದರೂ ಅದು ಉತ್ತರ ಕರ್ನಾಟಕ ಭಾಗಕ್ಕೆ ಬರಲು ಕನಿಷ್ಠ ಒಂದು ವಾರ ಬೇಕಾಗಬಹುದು ಅನ್ನುತ್ತಾರೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ಎಚ್. ಪಾಟೀಲ್. ಕೊರೊನಾದ ಸಂಕಟದ ನಡುವೆಯೂ ಕೃಷಿಯಿಂದಾಗಿ ಒಂದಷ್ಟು ಆದಾಯ ಪಡೆಯಲೇಬೇಕು ಅನ್ನೋ ಮನಸ್ಥಿತಿಯಲ್ಲಿದ್ದ ರೈತರಿಗೆ ಇದೀಗ ಈ ಹವಾಮಾನ ವರದಿಯಿಂದ ಆತಂಕ ಶುರುವಾಗಿದೆ.
Published On - 4:12 pm, Sun, 31 May 20