Hubli-Dharwad: ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಖ್ಯಾತ ಕಲಾವಿದರಿಂದ ಸಂಗೀತ ಸುಧೆ, ಲೇಸರ್​ ಶೋ

| Updated By: ವಿವೇಕ ಬಿರಾದಾರ

Updated on: Jan 11, 2023 | 5:08 PM

National Youth Fest: ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ 5 ದಿನಗಳ ಕಾಲ ಸುಮಧುರ ಸಂಗೀತ, ನೃತ್ಯದ ಜೊತೆಗೆ ವಿನೂತನ ಕಾರ್ಯಕ್ರಮಗಳನ್ನು ನೀಡಲು ಖ್ಯಾತ ಕಲಾವಿದರ ತಂಡಗಳು ಸಜ್ಜಾಗಿವೆ.

Hubli-Dharwad: ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಖ್ಯಾತ ಕಲಾವಿದರಿಂದ ಸಂಗೀತ ಸುಧೆ, ಲೇಸರ್​ ಶೋ
ಯುವಜನೋತ್ಸವಕ್ಕೆ ಸಿದ್ದವಾಗಿರುವ ಕೆಸಿಡಿ ಕಾಲೇಜ್​ ಧಾರವಾಡ
Follow us on

ಹುಬ್ಬಳ್ಳಿ-ಧಾರವಾಡ: ರಾಷ್ಟ್ರೀಯ ಯುವ ಜನೋತ್ಸವದಲ್ಲಿ (National Youth Fest) ವಿವಿಧ ರಾಜ್ಯಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವಷ್ಟೇ ಅಲ್ಲದೇ 5 ದಿನಗಳ ಕಾಲ ಸುಮಧುರ ಸಂಗೀತ, ನೃತ್ಯದ ಜೊತೆಗೆ ವಿನೂತನ ಕಾರ್ಯಕ್ರಮಗಳನ್ನು ನೀಡಲು ಖ್ಯಾತ ಕಲಾವಿದರ ತಂಡಗಳು ಸಜ್ಜಾಗಿವೆ. ಧಾರವಾಡ ನಗರದ ಕೆ.ಸಿ.ಡಿ.‌ ಕ್ರೀಡಾಂಗಣದಲ್ಲಿ ಮನರಂಜನೆಯ ಪ್ರವಾಹ ಉಕ್ಕೇರಲಿದೆ. ಮೈಕುಣಿಸುವ, ಮನ ತಣಿಸುವ ಸಂಗೀತ ಸುಧೆ ಹರಿಯಲಿದೆ. ವೇದಿಕೆ ಮೇಲೆ ಕಲಾವಿದರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದ್ದಾರೆ.

ಈ ವೈಭವದ ಕಾರ್ಯಕ್ರಮಗಳನ್ನು ಆಸ್ವಾದಿಸುವಂತೆ ಜಿಲ್ಲಾಡಳಿತ ಸ್ಥಳೀಯರಿಗೆ ಮನವಿ ಮಾಡಿದೆ. ಕಾರ್ಯಕ್ರಮಕ್ಕೆ ಬರುವವರು ಸಾಧ್ಯವಾದಷ್ಟು ಸಾರ್ವಜನಿಕ ವಾಹನಗಳನ್ನು ಬಳಸಬೇಕು. ಪಾರ್ಕಿಂಗ್ ಸಮಸ್ಯೆ ಮತ್ತು ಸಂಚಾರಿ ಒತ್ತಡ ತಗ್ಗಿಸಲು ಪ್ರತಿಯೊಬ್ಬರೂ ಜಿಲ್ಲಾಡಳಿತದ ಸೂಚನೆ ಪಾಲಿಸಬೇಕು ಎಂದು ಕೋರಲಾಗಿದೆ. ಕೆ.ಸಿ.ಡಿ. ಕಾಲೇಜು ಕ್ರೀಡಾಂಗಣಕ್ಕೆ ಒಂದೇ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳು ಇರುವುದರಿಂದ ಜನತೆ ಸಂಯಮದಿಂದ ವರ್ತಿಸಬೇಕು. ಕಾಲ್ತುಳಿತದಂತಹ ಗಂಭೀರ ಸಮಸ್ಯೆಗಳು ತಲೆ ದೋರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಯುಜನೋತ್ಸವಕ್ಕೆ ಮೋದಿ, ವೇದಿಕೆಯಲ್ಲಿ 21 ಗಣ್ಯರಿಗೆ ಅವಕಾಶ: ಜ.12ರಂದು ಹುಬ್ಬಳ್ಳಿ ಶಾಲಾ-ಕಾಲೇಜುಗಳಿಗೆ ರಜೆ

ಪ್ರತಿ ದಿನ ಸಂಜೆ 6 ರಿಂದ 10 ಗಂಟೆವರೆಗೆ ವಿಶೇಷ ಕಾರ್ಯಕ್ರಮಗಳ ಮೂಲಕ ಕಲಾವಿದರು ರಂಜಿಸಲಿದ್ದಾರೆ. ಜಾನಪದ ನೃತ್ಯ ಮತ್ತು ಜಾನಪದ ಸಂಗೀತ ವಲಯದಲ್ಲಿ ಸ್ಪರ್ಧೆಗಳು ಇರಲಿದ್ದು, ಉಳಿದವು ಮನರಂಜನಾ ಕಾರ್ಯಕ್ರಮಗಳಾಗಿವೆ. ಆಲೂರು ರಂಗಮಂದಿರದಲ್ಲಿ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದೆ.

ಕಾರ್ಯಕ್ರಮದ ವೇಳಾಪಟ್ಟಿ

1. ಕೆ.ಸಿ.ಡಿ ಕ್ರೀಡಾಂಗಣದಲ್ಲಿ ಪ್ರತಿದಿನ ಸಂಜೆ 5 ರಿಂದ 6 ಗಂಟೆವರೆಗೆ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು ಇರಲಿವೆ. ಮೊದಲ ದಿನ 12 ರಂದು ಸಂಜೆ ಖ್ಯಾತ ಗಾಯಕ ವಿಜಯಪ್ರಕಾಶ್ ಹಾಡು, ಅಯನಾ ನೃತ್ಯ ತಂಡದಿಂದ ವಿಶೇಷ ಪ್ರದರ್ಶನ ಇರಲಿದೆ.

2. 13 ರಂದು ರಾಜಸ್ಥಾನ ಮೂಲದ ಮಾಮೆ ಖಾನ್ ತಂಡ ಬಾಲಿವುಡ್ ಗೀತೆಗಳು, ಸಂಗೀತ, ಜಾನಪದ, ಭಾರತೀಯ ಸಂಗೀತದ ಜೊತೆಗೆ ಸೂಫಿ ಹಾಡುಗಳನ್ನು ಹಾಡಲಿದ್ದಾರೆ. ಎಂ.ಜೆ. 5- ನೃತ್ಯ ತಂಡ ಹಾಗೂ ಮೈಕೆಲ್ ಜಾಕ್ಸನ್ ಪಕ್ಕಾ ಅಭಿಮಾನಿಗಳ ತಂಡ ವೇದಿಕೆ ಮೇಲೆ ಕುಣಿದು ಕುಪ್ಪಳಿಸಲಿದೆ.

3. 14 ರಂದು ಕಿಂಗ್ಸ್ ಯುನೈಟೆಡ್‌ ನಿಂದ ಸ್ಟ್ಯಾಕಾಟೊ, ಥೈಕ್ಕುಡಂ ಬ್ರಿಡ್ಜ್ ಕಾರ್ಯಕ್ರಮವಿದೆ.

4. 15 ರಂದು ಪಪಾನ್ ಸಂಗೀತ ಗೋಷ್ಠಿ ಗಮನ ಸೆಳೆಯಲಿದೆ. ಇವರ ನಿಜವಾದ ಹೆಸರು ಅಂರಾಗ್ ಮಹಾಂತ. ಆದರೆ ಅಭಿಮಾನಿಗಳ ಮಧ್ಯೆ ಪಪಾನ್ ಎಂದೇ ಖ್ಯಾತಿ ಪಡೆದಿದ್ದಾರೆ. ಅಸ್ಸಾಮಿ, ಹಿಂದಿ, ಬೆಂಗಾಲಿ, ತಮಿಳು ಮರಾಠಿ ಭಾಷೆಯಲ್ಲಿ ಇವರು ಖ್ಯಾತಿ ಪಡೆದಿದ್ದಾರೆ.

6. ಕೊನೆಯ ದಿನ 16 ರಂದು ಖ್ಯಾತ ಬಾಲಿವುಡ್ ಗಾಯಕ ಅಮಿತ್ ತ್ರಿವೇದಿ ತಮ್ಮ ಸುಮಧುರ ಕಂಠದಿಂದ ಪ್ರೇಕ್ಷಕರನ್ನು ರಂಚಿಸಲಿದ್ದಾರೆ.

ಧಾರವಾಡ ಮಂದಿಗೆ ಲೇಸರ್ ಶೋ ಮಜಾ

ಯುವ ಜನೋತ್ಸವದ 6 ದಿನ ಸಾಯಂಕಾಲ ಕೆ‌ಸಿಡಿ ಮೈದಾನದಲ್ಲಿ ವಿಶೇಷ ಲೇಸರ್‌ ಷೋ ಆಯೋಜಿಸಲಾಗಿದ್ದು, ಈ ಲೇಸರ್‌ ಷೋ ನಲ್ಲಿ 26 ನೇ ಯುವ ಜನೋತ್ಸವದ ಎಲ್ಲಾ ಕಾರ್ಯಕ್ರಮಗಳ ಚಿತ್ರ ವಿವರಣೆ ಇರಲಿದೆ. ಅವಳಿ ನಗರದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ನಾಡೀನ ಸಂಗೀತ ಪರಂಪರೆಯ ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್ ಅವರ ಸಂಗೀತ ಸಾಧನೆಯ ವಿವರಣೆಯನ್ನೊಳಗೊಂಡ ಮೈ ನವಿರೇಳಿಸುವ ಲೇಸರ್ ಶೋ ಗಮನ ಸೆಳೆಯಲಿದೆ.

ಇದನ್ನೂ ಓದಿ: ಸರ್ಕಾರ, ಖಾಸಗಿ ಸಂಘ ಸಂಸ್ಥೆಗಳಿಂದ ಹರಿದು ಬಂದ ದೇಣಿಗೆ; ಅವಳಿ ನಗರದ ಹೃದಯ ಶ್ರೀಮಂತಿಕೆ ಅನಾವರಣ

ಧಾರವಾಡ ಜಿಲ್ಲೆಯ ವಿಶೇಷಗಳಾದ ಗರಗ ಧ್ವಜ, ಧಾರವಾಡ ಪೇಡ, ಕಲಘಟಗಿಯ ವಿಶೇಷ ತೊಟ್ಟಿಲು, ನವಲಗುಂದದ ಕಾರಪೇಟ್ ವೈಭವದ ಸಾಕ್ಷಿ ಚಿತ್ರಗಳನ್ನು ಲೋಸರ್ ಶೋ ಒಳಗೊಳ್ಳಲಿದೆ. ಕಿತ್ತೂರು ರಾಣಿ ಚೆನ್ನಮ್ಮನ ಗತ ವೈಭವ, ಸಿದ್ದಾರೂಢ ಸ್ವಾಮಿಗಳ ಮಹಾತ್ಮೆ, ವಿದ್ಯಾವಂತರ ನಗರ ಧಾರವಾಡದ – ಕೃಷಿ ಮಹಾವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಐಐಟಿ, ಕೆ.ಎಂ.ಸಿ ಇವೆಲ್ಲವೂ ಲೇಸರ್ ಶೋನ ಕಿರಣಗಳಲ್ಲಿ ಮೂಡಿಬರಲಿದೆ.

ವರದಿ-ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ