
ಧಾರವಾಡ, ಜನವರಿ 5: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (NWKSRTC) ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮುಸ್ಲಿಂ ಕಾನ್‌ಸ್ಟೆಬಲ್ ಒಬ್ಬರು ಧಾರವಾಡದ ಬಸ್ ಡಿಪೋ ಆವರಣದಲ್ಲಿ ಹನುಮಂತನ ಗುಡಿ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಹನುಮಾನ ಗುಡಿ ನಿರ್ಮಾಣವು ಕಳೆದ ವರ್ಷ ಪೂರ್ಣಗೊಂಡಿದ್ದರೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಲಾಲ್ ಸಾಬ್ ರಸಲ್ಸಾಬ್ ಬೂದಿಹಾಳ (60) ತಮ್ಮ ಸಮುದಾಯದ ಮುಖಂಡರು ಮತ್ತು ನಿಗಮದ ಉನ್ನತ ಅಧಿಕಾರಿಗಳ ವಿರೋಧದ ಹೊರತಾಗಿಯೂ ಹನುಮಾನ ಗುಡಿ ನಿರ್ಮಾಣ ಕೈಗೆತ್ತಿಕೊಂಡಿದ್ದರು. ಅವರು ಸ್ವಂತ ಹಣ ಮತ್ತು ಇಲಾಖೆಯಲ್ಲಿರುವ ಸಹೋದ್ಯೋಗಿಗಳ ನೆರವಿನಿಂದ ಗುಡಿ ನಿರ್ಮಾಣಕ್ಕೆ ಹಣ ಹೊಂದಿಸಿದ್ದರು.
ಗುಡಿ ನಿರ್ಮಾಣ ವಿಚಾರದಲ್ಲಿ ನಿಗಮದ ಭದ್ರತಾ ಮತ್ತು ವಿಜಿಲೆನ್ಸ್ ವಿಭಾಗದ ನೌಕರರು ಮತ್ತು ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆದಿದ್ದವು ಎಂದು ರಸಲ್ಸಾಬ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಗುಡಿಯಲ್ಲಿ ಪ್ರತಿಷ್ಠಾಪಿಸಲು ತರಲಾದ ವಿಗ್ರಹವನ್ನು ಹೊಸ ಡಿಪೋ ಆವರಣದಲ್ಲಿ ಇರಿಸಲಾಗಿತ್ತು.
‘ಹೊಸ ಡಿಪೋದಲ್ಲಿ ಕರ್ತವ್ಯದಲ್ಲಿದ್ದಾಗ, ವಾಹನ ಪಾರ್ಕಿಂಗ್ ಸ್ಥಳದಲ್ಲಿ ವಿಗ್ರಹ ಬಿದ್ದಿರುವುದನ್ನು ನೋಡಿದೆ. ದೇವರ ಮೂರ್ತಿಯನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ನನಗೆ ನೋವುಂಟು ಮಾಡಿತು ಮತ್ತು ಗುಡಿ ನಿರ್ಮಿಸಲು ನಿರ್ಧರಿಸಿದೆ. ಅನೇಕ ಜನರು ವಿರೋಧಿಸಿದರು. ಆದರೆ ನಾನು ಹಿಂದೆ ಸರಿಯಲಿಲ್ಲ. ಇದು ಕೇವಲ ಹನುಮಾನ ಗುಡಿಯಲ್ಲ, ಇದು ಇತರ ಧರ್ಮಗಳ ಕಡೆಗೆ ಸಹೋದರತ್ವ ಮತ್ತು ಗೌರವದ ಸಂಕೇತವಾಗಿದೆ’ ಎಂದು ಲಾಲ್ ಸಾಬ್ ರಸಲ್ಸಾಬ್ ಬೂದಿಹಾಳ ತಿಳಿಸಿದ್ದಾರೆ.
ಗುಡಿ ನಿರ್ಮಾಣದ ಆರಂಭಿಕ ಹಂತದಲ್ಲಿ ಕೆಲವು ಉದ್ಯೋಗಿಗಳು ಕೈಜೋಡಿಸಿದ್ದರು. ಆದರೆ ವಿಜಿಲೆನ್ಸ್ ತಂಡದಿಂದ ಅಮಾನತುಗೊಳಿಸುವ ಬೆದರಿಕೆ ಬಂದ ನಂತರ ಅವರೆಲ್ಲ ಹಿಂದೆ ಸರಿದಿದ್ದರು ಎಂದು ಡಿಪೋದ ಒಬ್ಬರು ಉದ್ಯೋಗಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಆದಾಗ್ಯೂ, ಲಾಲ್‌ಸಾಬ್ ಎಂದಿಗೂ ಹಿಂದೆ ಸರಿಯಲಿಲ್ಲ. ಅವರಿಗೆ ಅವರ ಸಮುದಾಯದವರಿಂದಲೇ ಬೆದರಿಕೆಗಳು ಬಂದಿದ್ದವು. ಆದರೆ ದೃಢನಿಶ್ಚಯದ ಬಲ ಮತ್ತು ಹನುಮಂತನ ಆಶೀರ್ವಾದವು ಅವರು ಗುರಿ ತಲುಪಲು ಸಹಾಯ ಮಾಡಿತು ಎಂದು ಉದ್ಯೋಗಿ ಹೇಳಿದ್ದಾರೆ.
ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು: ಸಿದ್ದರಾಮಯ್ಯ ಅಧಿಕೃತ ಘೋಷಣೆ
ಲಾಲ್ ಸಾಬ್ ಒಬ್ಬ ನಿಷ್ಠಾವಂತ ವ್ಯಕ್ತಿ ಮತ್ತು ಅವರ ವಿರೋಧಿಗಳು ಗುಡಿ ನಿರ್ಮಾಣವನ್ನು ನಿಲ್ಲಿಸುವಲ್ಲಿ ವಿಫಲರಾದರು. ಒಂದು ಹಂತದ ನಂತರ, ಮುಸ್ಲಿಂ ಸಮುದಾಯದ ಬಹುಪಾಲು ಉದ್ಯೋಗಿಗಳೇ ಅವರನ್ನು ಬೆಂಬಲಿಸಿದರು ನಿಗಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.