‘ಆನ್​​ಲೈನ್​​ನಲ್ಲಿಯೇ ಕಥೆ-ಕಾದಂಬರಿ ಓದಿ ಹಣ ಸಂಪಾದಿಸಿ’: ಬಣ್ಣದ ಮಾತು ನಂಬಿ ಹಣ ಕಳೆದುಕೊಂಡ ಸಾವಿರಾರು ಮಂದಿ

ಆನ್‌ಲೈನ್‌ನಲ್ಲಿ ಕಥೆ-ಕಾದಂಬರಿ ಓದಿ ಹಣ ಗಳಿಸಿ ಎಂಬ ಆಮಿಷಕ್ಕೆ ಒಳಗಾಗಿ 'ಫ್ಯೂಚರ್ ಬುಕ್ಸ್ ಟೆಕ್ನಾಲಜಿ' ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದ ಧಾರವಾಡ ಜಿಲ್ಲೆಯ ಸಾವಿರಾರು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಯಾವಾಗ ಹಣ ಮರುಪಾವತಿಯಾಗಲಿಲ್ಲವೋ ಆಗ ನೋಂದಣಿ ಮಾಡಿಕೊಂಡವರು ಕಂಗಾಲಾಗಿದ್ದಾರೆ. ಆ್ಯಪ್ ಕೂಡಾ ಸ್ಥಗಿತವಾಗಿದ್ದರಿಂದ ತಾವು ಮೋಸ ಹೋಗಿದ್ದೇವೆ ಅನ್ನೋದನ್ನು ಅರಿತ ಜನ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಆನ್​​ಲೈನ್​​ನಲ್ಲಿಯೇ ಕಥೆ-ಕಾದಂಬರಿ ಓದಿ ಹಣ ಸಂಪಾದಿಸಿ: ಬಣ್ಣದ ಮಾತು ನಂಬಿ ಹಣ ಕಳೆದುಕೊಂಡ ಸಾವಿರಾರು ಮಂದಿ
ಸಂತ್ರಸ್ತರು ಪೊಲೀಸರಿಗೆ ನೀಡಿರುವ ದೂರು
Image Credit source: Tv9 Kannada
Edited By:

Updated on: Sep 09, 2026 | 11:41 AM

ಹುಬ್ಬಳ್ಳಿ, ಸೆಪ್ಟೆಂಬರ್​​ 09: ಆನ್​​ಲೈನ್​​ನಲ್ಲಿಯೇ ಕಥೆ-ಕಾದಂಬರಿ ಓದಿ ಹಣ ಸಂಪಾದಿಸಿ ಎಂಬ ಬಣ್ಣದ ಮಾತು ನಂಬಿ ಸಾವಿರಾರ ರೂಪಾಯಿ ಹಣವನ್ನು ಹಲವರು ಕಳೆದುಕೊಂಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಪ್ಯೂಚರ್ ಬುಕ್ಸ್ ಟೆಕ್ನಾಲಜಿ ಎಂಬ ಕಂಪೆನಿ ವಿರುದ್ಧ ಆರೋಪ ಕೇಳಿಬಂದಿದ್ದು, ನಾವು ನೀಡುವ ಕಥೆ, ಕಾದಂಬರಿಗಳನ್ನು ಮನೆಯಲ್ಲಿ ಕೂತು ನೀವು ಕೆಲ ನಿಮಿಷಗಳ ಕಾಲ ಓದಿದರೆ ನಿಮಗೆ ಹಣ ಕೊಡ್ತೇವೆ ಎಂದು ಕಂಪನಿ ಪ್ರಚಾರ ಮಾಡಿತ್ತು. ಇದಕ್ಕಾಗಿ ನೀವು ಮೊದಲು ನೋಂದಣಿ ಮಾಡಿಕೊಳ್ಳಬೇಕು. 18,502 ರೂಪಾಯಿ ಹಣವನ್ನು ಫೋನ್​​ ಪೇ ಮೂಲಕ ಪಾವತಿಸಬೇಕು ಎಂದು ಸೂಚಿಸಲಾಗಿತ್ತು. ಹಣ ಪಾವತಿಸಿದವರಿಗೆ ಪ್ರತಿ ದಿನ 22 ಟಾಸ್ಕ್​​ಗಳನ್ನು ನೀಡಲಾಗುತ್ತಿತ್ತು. ಒಂದು ಟಾಸ್ಕ್ ಪೂರ್ಣಗೊಳಿಸಿದ್ರೆ 29 ರೂಪಾಯಿಯಂತೆ 22 ಟಾಸ್ಕ್ ಪೂರ್ಣಗೊಳಿಸಿದವರಿಗೆ 638 ರೂಪಾಯಿ ಪಾವತಿ ಮಾಡಲಾಗತ್ತಿತ್ತು. ಹೀಗಾಗಿ ಸಾವಿರಾರು ಜನರು ಹಣ ಪಾವತಿ ಮಾಡಿದ್ದರು ಎನ್ನಲಾಗಿದೆ.

ಕಂಪನಿಯಿಂದ ಗ್ರಾಹಕರಿಗೆ ಏನೆಲ್ಲ ಆಮಿಷ?

ಇನ್ನು ಕಂಪನಿ ಇತ್ತೀಚೆಗೆ ಗ್ರಾಹಕರಿಗೆ ಹೊಸ ಆಮಿಷಗಳನ್ನೂ ನೀಡಿತ್ತು. ಹೆಚ್ಚು ಹಣ ನೀಡಿ ಪ್ಲ್ಯಾನ್ ಅಪಗ್ರೇಡ್ ಮಾಡಿಕೊಂಡರೆ ಪ್ರತಿದಿನ ಜಾಸ್ತಿ ಹಣ ಸಂಪಾದನೆ ಮಾಡುವ ಅವಕಾಶ ಸಿಗುತ್ತದೆ ಎಂದು ತಿಳಿಸಿತ್ತು. 61,600 ಹಣ ತುಂಬಿದರೆ ಪ್ರತಿ ದಿನ 2200 ರೂಪಾಯಿ ಸಿಗಲಿದೆ. ಒಂದು ಲಕ್ಷ ತುಂಬಿದರೆ ಬೈಕ್, ಐದು ಲಕ್ಷ ತುಂಬಿದರೆ ಕಾರು ನೀಡುವ ಆಸೆಯನ್ನೂ ಗ್ರಾಹಕರಿಗೆ ತೋರಿಸಲಾಗಿತ್ತು. ಹೀಗಾಗಿ 18,502 ರೂಪಾಯಿಯಿಂದ ಐದು ಲಕ್ಷ, ಏಳು ಲಕ್ಷದವರಗೆ ಹಣವನ್ನು ಕಂಪನಿ ಸೂಚಿಸಿದ್ದ ಅಕೌಂಟ್ ನಂಬರ್, ಫೋನ್​​ ಪೇ ನಂಬರ್​​ಗೆ ಹಲವರು ಪಾವತಿಸಿದ್ದರು. ಆ ಬಳಿಕ ಎರಡು ತಿಂಗಳ ಕಾಲ ಟಾಸ್ಕ್ ಕಂಪ್ಲೀಟ್ ಮಾಡಿದವರಿಗೆ ಹಣ ಮರುಪಾವತಿ ಕೂಡ ಆಗಿತ್ತು. ಇದನ್ನು ನಂಬಿ ಮತ್ತಷ್ಟು ಜನರು ಹಣ ನೀಡಿ ಆ್ಯಪ್​​ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ನೀವು‌ ಇಂತಿಷ್ಟು ಜನರನ್ನು ಸೇರಿಸಿದರೆ ನಿಮಗೆ ಕಮಿಷನ್, ಬೋನಸ್ ಕೊಡ್ತೇವೆ ಅಂತ‌ಲೂ ಕಂಪನಿಯವರು ಹೇಳಿದ್ದರಂತೆ. ಹೀಗಾಗಿ ಹೆಚ್ಚಿನ ಜನರು ತಮ್ಮ ಪರಿಚಿತರು, ಸಂಬಂಧಿಗಳಿಗೆ ಹೇಳಿ ಹೂಡಿಕೆ ಮಾಡಿಸಿದ್ದರು.

ಇದನ್ನೂ ಓದಿ: ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ ವ್ಯಾಪಾರಿಗೆ ₹1.5 ಕೋಟಿ ವಂಚಿಸಿದ ಹರಿಯಾಣದ ವ್ಯಕ್ತಿ

ಆದರೆ ಎರಡು ತಿಂಗಳ ಕಾಲ ಹಣ ನೀಡಿದ್ದ ಕಂಪನಿ ಕಳೆದ ಎರಡು ವಾರದಿಂದ ಹಣ ಮರುಪಾವತಿ ಮಾಡಿಲ್ಲವಂತೆ. ಯಾವಾಗ ಹಣ ಮರುಪಾವತಿಯಾಗಲಿಲ್ಲವೋ ಆಗ ನೋಂದಣಿ ಮಾಡಿಕೊಂಡವರು ಕಂಗಾಲಾಗಿದ್ದಾರೆ. ಆ್ಯಪ್ ಕೂಡಾ ಸ್ಥಗಿತವಾಗಿದ್ದರಿಂದ ತಾವು ಮೋಸ ಹೋಗಿದ್ದೇವೆ ಅನ್ನೋದನ್ನು ಅರಿತ ಜನ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಜನರು ವಂಚನೆಗೊಳಗಾಗಿದ್ದಾರೆ ಎನ್ನಲಾಗಿದ್ದು, ಸರಿಸುಮಾರು ಆರು ಸಾವಿರಕ್ಕೂ ಹೆಚ್ಚು ಜನರು ಆ್ಯಪ್​​ನಲ್ಲಿ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

 

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us