ಹುಬ್ಬಳ್ಳಿ ಅ.11: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆ ವೇಳೆಗೆ ನಮಗೆ 2ಎ ಮೀಸಲಾತಿ ಕೊಡಬೇಕು ಎಂದು ಕೇಳಿದ್ದೇವು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (DK Shivakumar) ನಮಗೆ ಸ್ಪಂದನೆ ಮಾಡಿದ್ದರು. ಬಜೆಟ್ ಅಧಿವೇಶನದ ನಂತರ ಸಭೆ ಮಾಡುತ್ತೇವೆ ಅಂದಿದ್ದರು, ಆದರೆ ಇದುವರೆಗೂ ಮಾಡಿಲ್ಲ. ಹೀಗಾಗಿ ಮತ್ತೆ ನಾವು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೀಸಲಾತಿಗಾಗಿ ನಾವು ಮೂರು ವರ್ಷಗಳಿಂದ ಪಂಚಮಸಾಲಿ ಹೋರಾಟ ನಡೆಯುತ್ತಿದೆ. ಹಿಂದಿನ ಸರ್ಕಾರ ನಮಗೆ ಪರಿಪೂರ್ಣ ಮೀಸಲಾತಿ ಕೊಡಲಿಲ್ಲ. ನಾವು 2ಎ ಕೇಳಿದರೇ, ಸರ್ಕಾರ 2ಡಿ ಮೀಸಲಾತಿ ಕೊಟ್ಟಿತ್ತು. ನಾವು ಇದನ್ನು ಸ್ವೀಕಾರ ಮಾಡಿದ್ದೇವು. ಆದರೆ ಚುನಾವಣೆ ಬಂದ ನಂತರ ಅದು ಪರಿಪೂರ್ಣ ಆಗಲಿಲ್ಲ. ಇದೀಗ ಹೊಸ ಸರ್ಕಾರ ಬಂದಿದೆ. ನಮ್ಮ ಬೇಡಿಕೆಗೆ ಇನ್ನೂ ಸ್ಪಂದಿಸಿಲ್ಲ. ಹೀಗಾಗಿ ಪ್ರತಿಭಟನೆ ಮಾಡುತ್ತೇವೆ. ಎಲ್ಲ ಚಳುವಳಿಯನ್ನು ನಾವು ಮಾಡಿದ್ದೇವೆ. ಹೊಸ ಸರ್ಕಾರದ ಮೇಲೆ ಒತ್ತಡ ಹಾಕಲು ಇಷ್ಡಲಿಂಗ ಪೂಜೆ ಆರಂಭಿಸಿದ್ದೇವೆ. ಬೆಳಗಾವಿ, ಬಾಗಲಕೋಟ, ವಿಜಯಪುರ, ಕೊಪ್ಪಳ ಜಿಲ್ಲೆಯಲ್ಲಿ ಹೋರಾಟ ಮಾಡಿದ್ದೇವೆ. ಅ.13 ರಂದು ಹುಬ್ಬಳ್ಳಿಯ ಗಬ್ಬೂರ ಹೆದ್ದಾರಿ ಬಳಿ ಇಷ್ಟಲಿಂಗ ಪೂಜೆ ಮಾಡಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕರ್ನಾಟಕದ ಎಲ್ಲ ಜಿಲ್ಲೆಯಲ್ಲೂ ಹೋರಾಟ ಮಾಡುತ್ತೇವೆ. ಕಾನೂನು ಅಡತಡೆ ನಿವಾರಿಸಿ ಸರ್ಕಾರ ನಮಗೆ ಮೀಸಲಾತಿ ಕೊಡಬೇಕು. ಸರ್ಕಾರ ಆದಷ್ಟು ಬೇಗ ನಮಗೆ ಮೀಸಲಾತಿ ಕೊಡಬೇಕು. ಸರ್ಕಾರ ಬಗ್ಗದೆ ಹೋದರೇ ನಾವು ಮತ್ತೆ ಹೋರಾಟ ಮಾಡುತ್ತೇವೆ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೀವಿ ಕೇಳಲ್ಲ ಕಣ್ಣು ಕಾಣಲ್ಲ, ಚರ್ಮ ದಪ್ಪ ಆಗತ್ತೆ ಅನ್ನುವುದು ವಾಡಿಕೆ. ಹೀಗಾಗಿ ನಾವು ಹೋರಾಟಕ್ಕೆ ಮುಂದಾಗಿದ್ದೇವೆ. ಗ್ಯಾರಂಟಿ ಬಗ್ಗೆ ಅಷ್ಟೆ ಕೆಲಸ ಮಾಡಬೇಡಿ, ನಮಗೂ ನ್ಯಾಯ ಕೊಡಿ ಎಂದು ಆಗ್ರಹಿಸಿದರು.
ನಮಗೆ 2ಡಿ ಬೇಕಿಲ್ಲ, ಮೂಲ ಬೇಡಿಕೆ 2ಎ ಮೀಸಲಾತಿ ಬೇಕು. ಸುಪ್ರೀಂ ಕೋರ್ಟ್ ಈ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದಿದೆ. ಸರ್ಕಾರದಲ್ಲಿ ನಮ್ಮ ಸಮಾಜದ 11 ಜನ ಶಾಸಕರು ಇದಾರೆ. ಸಿದ್ದರಾಮಯ್ಯ ಅವರಿಗೆ ಇದು ಕಷ್ಟದ ವಿಚಾರ ಅಲ್ಲ. ಹಾಲುಮತ ಸಮಾಜಕ್ಕೆ ಎಸ್ಟಿ ಸೇರ್ಪಡೆ ವಿಚಾರದಲ್ಲಿ ಸರ್ಕಾರ ಗಟ್ಟಿ ನಿರ್ಧಾರ ತಗೆದುಕೊಂಡಿದೆ ನಾನು ಸ್ವಾಗತ ಮಾಡುತ್ತೇನೆ ಎಂದರು.
ಶಾಮನೂರ ಶಿವಶಂಕರಪ್ಪ ಅವರು ಹೇಳಿದ ಮಾತು ಸತ್ಯಕ್ಕೆ ಬಹಳ ಹತ್ತಿರ ಇದೆ. ಅದಾದ ಬಳಿಕ ನಾನು ಧ್ವನಿ ಎತ್ತಿದ್ದೇನೆ. ಕೆಲ ಲಿಂಗಾಯತ ಅಧಿಕಾರಿಗಳು ನಮ್ಮ ಜೊತೆ ಮಾತಾಡಿದ್ದಾರೆ. ಆದರೆ ನಾನು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸಿದ್ದರಾಮಯ್ಯ ಇದನ್ನು ಸರಿ ಮಾಡಬೇಕು. ಕೇವಲ ಒಂದು ಸಮಾಜ ಅಲ್ಲ, ಯಾವದೇ ಸಮಾಜದ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಕೊಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ