ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ; ಈಗಾಗಲೇ ಸಿದ್ದವಾದ ವಿನಾಯಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 15, 2023 | 6:51 PM

ಗಣೇಶೋತ್ಸವಕ್ಕೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಅವಕಾಶ ನಿರಾಕರಿಸುವಂತೆ ಕೋರಿ ಅಂಜುಮನ್ ಸಂಸ್ಥೆ ಮತ್ತೆ ಕೋರ್ಟ್ ಮೊರೆ ಹೋಗಿತ್ತು. ಇಂದು ಮಧ್ಯಾಹ್ನದ ವೇಳೆ ಧಾರವಾಡ ಹೈಕೋರ್ಟ್​ನಲ್ಲಿ ಅಂಜುಮನ್ ಸಲ್ಲಿಸಿದ ಅರ್ಜಿ ತಿರಸ್ಕಾರ ಆಗಿದ್ದು, ಈ ಹಿನ್ನಲೆ ರಾಣಿ ಚೆನ್ನಮ್ಮ ಗಜಾನನ ಉತ್ಸವ ಆಚರಣೆ ಸಮಿತಿ ಕಡೆಯಿಂದ ಗಣಪತಿ ಪ್ರತಿಷ್ಠಾಪನೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ; ಈಗಾಗಲೇ ಸಿದ್ದವಾದ ವಿನಾಯಕ
ಸಿದ್ದವಾದ ಗಣೇಶ
Follow us on

ಹುಬ್ಬಳ್ಳಿ, ಸೆ.15: ಹುಬ್ಬಳ್ಳಿಯ ಈದ್ಗಾ ಮೈದಾನ (Idgah Maidan)ದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ದೊರೆತ ಹಿನ್ನೆಲೆ, ರಾಣಿ ಚೆನ್ನಮ್ಮ ಗಜಾನನ ಉತ್ಸವ ಆಚರಣೆ ಸಮಿತಿ ಕಡೆಯಿಂದ ಗಣಪತಿ ಪ್ರತಿಷ್ಠಾಪನೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಈಗಾಗಲೇ ವಿನಾಯಕ ಕೂಡ ಸಿದ್ದವಾಗಿದ್ದಾನೆ. ಹೌದು, ಧಾರವಾಡದ ಚರಂತಿಮಠ ಗಾರ್ಡನ್‌ನಲ್ಲಿ ಸುರೇಶ್ ಕರಿಗಾರ ಕೈಚಳಕದಲ್ಲಿ ಗಣಪ ಮೂಡಿ ಬಂದಿದ್ದು, ಐದು ಅಡಿ ಎತ್ತರ ಇರುವ ಪರಿಸರ ಸ್ನೇಹಿ ಗಣೇಶ ಇದಾಗಿದೆ.

ಗಣೇಶೋತ್ಸವಕ್ಕೆ ಅವಕಾಶ ಕೊಡದಂತೆ ಹೈಕೋರ್ಟ್ ಮೊರೆ ಹೋಗಿದ್ದ ಅಂಜುಮನ್ ಸಂಸ್ಥೆ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಕಳೆದ ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈದ್ಗಾ ಮೈದಾನ ಪಾಲಿಕೆಯ ಆಸ್ತಿಯಾಗಿದ್ದು, ಹುಬ್ಬಳ್ಳಿ- ಧಾರವಾಡ‌ ಮಹಾನಗರ ಪಾಲಿಕೆ ಬಿಜೆಪಿ ಆಡಳಿತದಲ್ಲಿದೆ. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಳೆದ ವರ್ಷ ಠರಾವು‌ ಪಾಸ್ ಮಾಡಿ ಗಣೇಶೊತ್ಸವಕ್ಕೆ ಅನುಮತಿ ನೀಡಲಾಗಿತ್ತು. ಈ ಹಿನ್ನಲೆ ಅಂಜುಮನ್ ಸಂಸ್ಥೆ ಗಣೇಶೋತ್ಸವಕ್ಕೆ ಅವಕಾಶ ಕೊಡದಂತೆ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ, ಮೈದಾನ ಪಾಲಿಕೆ ಆಸ್ತಿಯಾಗಿದ್ದು, ಸಾರ್ವಜನಿಕ ಬಳಕೆಗೆ ಕೊಡಬಹುದು ಎಂದು ಕೋರ್ಟ್ ಆದೇಶಿಸಿತ್ತು.

ಇದನ್ನೂ ಓದಿ:ಸರ್ಕಾರದ ಕುಮ್ಮಕ್ಕಿನಿಂದ ಹು-ಧಾ ಪಾಲಿಕೆ ಆಯುಕ್ತರು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿಲ್ಲ: ಮಹೇಶ್​ ಟೆಂಗಿನಕಾಯಿ

ಈ ವರ್ಷ ಕೂಡ ಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್

ಈ ವರ್ಷ ಕೂಡ ಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಮೇಯರ್ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ. ಇನ್ನೊಂದೆಡೆ ಅಂಜುಮನ್ ಸಂಸ್ಥೆ ಮತ್ತೆ ಕೋರ್ಟ್ ಮೊರೆ ಹೋಗಿತ್ತು. ಈ ನಡುವೆ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದ್ದಾರೆ. ಶಾಸಕ ಅರವಿಂದ ಬೆಲ್ಲದ್ ಮತ್ತು ಮಹೇಶ್ ಟೆಂಗಿನಕಾಯಿ ನೇತ್ರತ್ವದಲ್ಲಿ ಹೋರಾಟ ನಡೆಸಿದ್ದಾರೆ. ಎರಡು ದಿನಗಳಿಂದ ಬಿಜೆಪಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿತ್ತು, ಇದಕ್ಕೆ ಮುತಾಲಿಕ್ ಕೂಡಾ ಸಾಥ್ ನೀಡಿದ್ರು. ಮದ್ಯಾಹ್ನದ ವೇಳೆ ಧಾರವಾಡ ಹೈಕೋರ್ಟ್ ನಲ್ಲಿ ಅಂಜುಮನ್ ಸಲ್ಲಿಸಿದ ಅರ್ಜಿ ತಿರಸ್ಕಾರ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ