ಧಾರವಾಡ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಗಳು ಬಾಕಿ ಇರುವಾಗಲೇ ಮಾರ್ಚ್ 12 ರಂದು ಮತ್ತೆ ಕರ್ನಾಟಕಕ್ಕೆ ಕಾಲಿಡುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಧಾರವಾಡಕ್ಕೆ ಭೇಟಿ ನೀಡಿ 5 ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಂದು ಮಂಡ್ಯ ಜಿಲ್ಲೆಯ ಕಾರ್ಯಕ್ರಮ ಮುಗಿಸಿಕೊಂಡು ಪ್ರಧಾನಿ ಮೋದಿ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಬಳಿಕ ಹುಬ್ಬಳ್ಳಿ ಏರ್ ಪೋರ್ಟ್ನಿಂದ ಹೆಲಿಕಾಪ್ಟರ್ ಮೂಲಕ ಐಐಟಿ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ, ಧಾರವಾಡ ಐಐಟಿ (Dharwad IIT) ನೂತನ ಕಟ್ಟಡ, ಏಷ್ಯಾದ ಅತಿ ಉದ್ದದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್ ಫಾರ್ಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಐಐಟಿ-ಧಾರವಾಡ ಕ್ಯಾಂಪಸ್ ಹೊರಗೆ ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಅನ್ನು ಉದ್ಘಾಟಿಸಲಿದ್ದಾರೆ. ನಂತರ ತುಪ್ಪರಿಹಳ್ಳ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗೆ 312 ಕೋಟಿ ರೂ ವೆಚ್ಚವಾಗಿದೆ ಮತ್ತು 150 ಕೋಟಿ ರೂ.ಗಳ ವರ್ಕ್ ಆರ್ಡರ್ ನೀಡಲಾಗಿದೆ.
250 ಕೋಟಿ ರೂ.ಗಳ ಜಯದೇವ ಹೃದ್ರೋಗ ಸಂಸ್ಥೆ ಮತ್ತು 144 ಗ್ರಾಮ ಪಂಚಾಯಿತಿಗಳಿಗೆ ನಲ್ಲಿ ನೀರು ಒದಗಿಸುವ 1,200 ಕೋಟಿ ರೂ.ಗಳ ಜಲ ಜೀವನ್ ಮಿಷನ್ಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 42 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 295 ವಿವೇಕ್ ತರಗತಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ. ವೆಚ್ಚದ 15 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.
ಹುಬ್ಬಳ್ಳಿಯಲ್ಲಿ 166 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಮೋದಿ, ಹುಬ್ಬಳ್ಳಿ-ಹೊಸಪೇಟೆ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯನ್ನು ಕೂಡ ಉದ್ಘಾಟಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶಕ್ಕೆ ಧಾರವಾಡ ಜಿಲ್ಲೆಯಿಂದಲೇ ಎರಡು ಲಕ್ಷಕ್ಕೂ ಅಧಿಕ ಜನರು ಜಮಾಯಿಸುವ ನಿರೀಕ್ಷೆ ಇದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಸಚಿವರು, ಉಸ್ತುವಾರಿಗಳು, ಶಾಸಕರು, ನಾಯಕರು ಭರ್ಜರಿ ತಯಾರಿ ನಡೆಸಿದ್ದಾರೆ. ಇನ್ನು, ಈ ವರ್ಷ ವಿಶ್ವ ಸಿರಿ ಧಾನ್ಯ ವರ್ಷಾಚರಣೆ ಎಂದು ಘೋಷಿಸಿರುವ ಹಿನ್ನಲೆ ರಿಧಾನ್ಯಗಳ ಮೂಲಕವೇ ಪ್ರಧಾನಿಯವರನ್ನು ಸ್ವಾಗತಿಸಲು ತಯಾರಿ ನಡೆಸಲಾಗುತ್ತಿದೆ. ಸ್ಥಳೀಯ ಕಲಾವಿದರು ವಿವಿಧ ವೇಷಭೂಷಣ ಮೂಲಕ ಸ್ವಾಗತ ಮಾಡಲಿದ್ದಾರೆ.
ಇದಕ್ಕೂ ಮುನ್ನ ಮಂಡ್ಯಕ್ಕೆ ಭೇಟಿ ನೀಡಲಿರುವ ಮೋದಿಗೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಕಬ್ಬು ಬೆಳೆಗಾರರು ಹಲವು ಬಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ತಟ್ಟಿಸಿದ್ದರು. ಆದರೆ ಇದಕ್ಕೆಲ್ಲಾ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿ ಆಗಮನದಂದು ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಲು ನಿರ್ಧಾರಿಸಿದೆ. ಮಾರ್ಚ್ 12ರಂದು ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಗೆ ಆಗಮಿಸುತ್ತಿರುವ ಮೋದಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸಲು ಕರ್ನಾಟಕ ರಾಜ್ಯ ರೈತ ಸಂಘ ನಿರ್ಧರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 am, Thu, 9 March 23