ಹುಬ್ಬಳ್ಳಿ: ರಾಜ್ಯದ ಅತ್ಯಂತ ದೊಡ್ಡ ಮಹಾನಗರ ಪಾಲಿಕೆ ಅನ್ನೋ ಹೆಸರಿಗೆ ಪಾತ್ರವಾಗಿರೋ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪಾಲಿಕೆ ಅತಂತ್ರವಾಗಿದೆ. ಆದರೂ ಅಧಿಕಾರ ಮಾತ್ರ ಈ ಬಾರಿಯೂ ಮತ್ತೆ ಬಿಜೆಪಿ ತೆಕ್ಕೆಗೆ ಬೀಳಲಿರೋದು ಖಚಿತ. ಬಿಜೆಪಿ ಅಂದುಕೊಂಡಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ ಅನ್ನೋದು ಪ್ರಮುಖ ಅಂಶವಾದರೆ, ಕಾಂಗ್ರೆಸ್ ತಾನು ಕೂಡ ಬಿಜೆಪಿಗಿಂತ ಕಡಿಮೆಯಲ್ಲ ಅನ್ನುವುದನ್ನು ತೋರಿಸಿಕೊಟ್ಟಿದೆ. ಆದರೆ ಕಳೆದ ಎರಡು ಬಾರಿ ಸ್ಪಷ್ಟ ಬಹುಮತ ಪಡೆದಿದ್ದ ಬಿಜೆಪಿಗೆ ಈ ಬಾರಿ ಅದನ್ನು ಪಡೆಯಲು ಸಾಧ್ಯವಾಗಿಲ್ಲ. ಇದು ಬಿಜೆಪಿ ಭದ್ರಕೋಟೆಯಲ್ಲಿಯೇ ಪಕ್ಷಕ್ಕೆ ಆಗಿರೋ ಹಿನ್ನೆಡೆಯಾಗಿದೆ.
ಅಚ್ಚರಿಯ ಫಲಿತಾಂಶ ನೀಡಿದ ಜನತೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ ಗಳಿಗೆ ಸೆಪ್ಟಂಬರ್ 3 ರಂದು ನಡೆದಿದ್ದ ಚುನಾವಣೆಯಲ್ಲಿ ಹೆಚ್ಚು ಜನ ಮತವನ್ನೇ ಹಾಕಿರಲಿಲ್ಲ. ಅದರ ಪರಿಣಾಮ ಈಗ ಫಲಿತಾಂಶದ ಮೇಲೂ ಆಗಿದ್ದು, ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಕೇವಲ 39 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನ ನಡೆಸಿಯೂ ಮೂರನೆಯ ಬಾರಿಯೂ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ. 82 ಸ್ಥಾನಗಳ ಪೈಕಿ ಈ ಬಾರಿ ಬಿಜೆಪಿ 39 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಗಿದ್ದರೆ, ಕಾಂಗ್ರೆಸ್ 33 ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಆ ಮೂಲಕ ತಾನು ಬಿಜೆಪಿಗಿಂತ ಕಡಿಮೆಯೇನಲ್ಲ ಅನ್ನುವನ್ನು ತೋರಿಸಿಕೊಟ್ಟಿದೆ.
ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಬಂಡಾಯವೆದ್ದಿದ್ದ ಆರು ಅಭ್ಯರ್ಥಿಗಳು ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನ ತಲಾ ಮೂವರು ಕಾರ್ಯಕರ್ತರಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಎಐಎಂಐಎಂ ತನ್ನ ಖಾತೆ ತೆರೆದಿದ್ದು, ನಿರೀಕ್ಷೆಗೂ ಮೀರಿ 3 ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಕಳೆದ ಬಾರಿ 9 ಸ್ಥಾನಗಳನ್ನು ಹೊಂದಿದ್ದ ಜೆಡಿಎಸ್ ಈ ಸಲ ಕೇವಲ 1 ಸ್ಥಾನ ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ. ಸಾಕಷ್ಟು ದಿನಗಳಿಂದ ನಿರಂತರವಾಗಿ ಪ್ರಚಾರ ಮಾಡುತ್ತಲೇ ಇದ್ದ ಆಮ್ ಆದ್ಮಿ ಪಕ್ಷ ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿದೆ. ಆಮ್ ಆದ್ಮಿ ಪಕ್ಷ 41 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ ಒಂದು ಕಡೆಯೂ ಆಮ್ ಆದ್ಮಿ ಪಕ್ಷಕ್ಕೆ ಗೆಲುವು ಸಿಕ್ಕೇ ಇಲ್ಲ.
ಕಳೆದ ಬಾರಿಯ ಫಲಿತಾಂಶ ಹೇಗಿತ್ತು?
ಇನ್ನು ಕಳೆದ ಬಾರಿಯ ಒಟ್ಟಾರೆ ಸದಸ್ಯರ ವಿವರ ಈ ರೀತಿ ಇದೆ:
ಒಟ್ಟು ಸ್ಥಾನ: 67
ಬಿಜೆಪಿ 33
ಕಾಂಗ್ರೆಸ್ 22
ಜೆಡಿಎಸ್ 09
ಪಕ್ಷೇತರ 02
ಕೆಜೆಪಿ 01
ಈ ಬಾರಿಯ ಫಲಿತಾಂಶದ ವಿವರ
ಒಟ್ಟು ಸ್ಥಾನಗಳು : 82
ಬಿಜೆಪಿ 39
ಕಾಂಗ್ರೆಸ್ 33
ಪಕ್ಷೇತರ 06
ಎಐಎಂಐಎಂ 03
ಜೆಡಿಎಸ್ 01
ಪಾಲಿಕೆ ಅತಂತ್ರವಾದರೂ ಅಧಿಕಾರ ಮಾತ್ರ ಬಿಜೆಪಿ ತೆಕ್ಕೆಗೆ
ಕಳೆದ ಎರಡು ಅವಧಿಗೆ ಬಿಜೆಪಿಯೇ ಅಧಿಕಾರ ನಡೆಸಿದೆ. ಈ ಬಾರಿ ಶತಾಯಗತಾಯ ಅಧಿಕಾರವನ್ನು ಪಡೆಯಬೇಕೆಂದು ಕಾಂಗ್ರೆಸ್ ಪ್ರಯತ್ನಿಸಿತ್ತು. ಅದರಷ್ಟೇ ಪ್ರಯತ್ನವನ್ನು ಬಿಜೆಪಿಯೂ ಮಾಡಿತ್ತು. ಹೀಗಾಗಿ ಎರಡೂ ಪಕ್ಷಗಳ ನಡುವೆಯೇ ನೇರ ಪೈಪೋಟಿ ಇತ್ತು. ಇನ್ನು ಜೆಡಿಎಸ್ 49 ಸ್ಥಾನಗಳಲ್ಲಿ ಮಾತ್ರ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಪ್ 41 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಸಿತ್ತು. ಆದರೆ ಆಮ್ ಆದ್ಮಿ ಪಕ್ಷಕ್ಕೆ ಜನರು ಮನ್ನಣೆಯನ್ನೇ ಕೊಟ್ಟಿಲ್ಲ. ಇದೇ ವೇಳೆ ಜೆಡಿಎಸ್ ಬಗ್ಗೆಯೂ ಜನರು ತಿರಸ್ಕಾರ ಭಾವನೆ ಹೊಂದಿರೋದು ಸ್ಪಷ್ಟವಾಗಿ ತಿಳಿದು ಬಂದಿದೆ.
82 ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಬೇಕೆಂದರೆ 42 ಸ್ಥಾನಗಳನ್ನು ಗೆಲ್ಲಬೇಕಿತ್ತು. ಆದರೆ ಬಿಜೆಪಿ ಎಷ್ಟೇ ಪ್ರಯತ್ನ ಮಾಡಿದರೂ 39 ಸ್ಥಾನ ಗೆಲ್ಲುವದರಲ್ಲಿಯೇ ಸಫಲವಾಗಿದೆ. ಆದರೆ ಮೇಯರ್ ಆಯ್ಕೆ ವೇಳೆ ಅವಳಿ ನಗರದ 9 ಜನಪ್ರತಿನಿಧಿಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಾಲ್ವರು ಶಾಸಕರು, ನಾಲ್ವರು ಎಂ.ಎಲ್.ಸಿ. ಹಾಗೂ ಓರ್ವ ಸಂಸದರು ಕೂಡ ಮೇಯರ್ ಆಯ್ಕೆ ವೇಳೆ ತಮ್ಮ ಮತವನ್ನು ಚಲಾಯಿಸಲು ಅವಕಾಶವಿದೆ. ಈ 9 ಜನಪ್ರತಿನಿಧಿಗಳ ಪೈಕಿ ಬಿಜೆಪಿಯದ್ದೇ ಸಿಂಹಪಾಲು. ನಾಲ್ವರು ಶಾಸಕರ ಪೈಕಿ ಮೂವರು ಬಿಜೆಪಿ, ಇಬ್ಬರು ಎಂ.ಎಲ್.ಸಿ. ಹಾಗೂ ಓರ್ವ ಸಂಸದ ಸೇರಿ ಆರು ಜನಪ್ರತಿನಿಧಿಗಳು ಬಿಜೆಪಿ ಪಾಲಿಗೆ ವರವಾಗಿದ್ದರೆ, ಕಾಂಗ್ರೆಸ್ ಗೆ ಇಬ್ಬರು ಹಾಗೂ ಜೆಡಿಎಸ್ ಗೆ ಓರ್ವ ಜನಪ್ರತಿನಿಧಿ ಸಹಾಯಕ್ಕೆ ಬರಬಹುದು. ಆದರೆ ಇದೀಗ ಬಂದಿರೋ ಫಲಿತಾಂಶದ ಮೇಲೆ ಲೆಕ್ಕಾಚಾರ ಹಾಕಿದರೆ, ಏನೇ ಮಾಡಿದರೂ ಕಾಂಗ್ರೆಸ್ ಗೆ ಅಧಿಕಾರ ಸಿಗೋದೇ ಇಲ್ಲ. ಏಕೆಂದರೆ ಮೇಯರ್ ಚುನಾವಣೆಯಲ್ಲಿ ಗೆಲ್ಲಲು 46 ಸ್ಥಾನಗಳ ಅಗತ್ಯವಿದೆ. 9 ಜನಪ್ರತಿನಿಧಿಗಳ ಪೈಕಿ ಆರು ಜನ ಬಿಜೆಪಿಯವರು. ಇನ್ನು ಬಸವರಾಜ ಹೊರಟ್ಟಿ ಬಿಜೆಪಿ ಕಡೆ ವಾಲುತ್ತಾರೆ. ಅಲ್ಲದೇ ಪಕ್ಷೇತರರಾಗಿ ಆಯ್ಕೆಯಾಗಿರೋ 6 ಅಭ್ಯರ್ಥಿಗಳಲ್ಲಿ ಬಿಜೆಪಿಗೆ ಸೇರೋರು ಕೂಡ ಇದ್ದಾರೆ. ಹೀಗಾಗಿ ಬಿಜೆಪಿಗೆ ಅಧಿಕಾರ ಪಡೆಯುವದರಲ್ಲಿ ಎರಡು ಮಾತಿಲ್ಲ.
ಈ ಬಾರಿಯ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ
ಈ ಮಧ್ಯೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಈ ಫಲಿತಾಂಶ ಬಿಜೆಪಿ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಏಕೆಂದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಇದೀಗ ಬಿಜೆಪಿಯದ್ದೇ ಸರಕಾರವಿದೆ. ಇನ್ನು ಅವಳಿ ನಗರದ ವ್ಯಾಪ್ತಿಯಲ್ಲಿ ಬಿಜೆಪಿಯ ಮೂವರು ಶಾಸಕರಿದ್ದಾರೆ. ಇದೇ ವ್ಯಾಪ್ತಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಕೂಡ ಇದ್ದಾರೆ. ಸಿಎಂ ರೇಸ್ ನಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಅರವಿಂದ ಬೆಲ್ಲದ್ ಕೂಡ ಅವಳಿ ನಗರದ ವ್ಯಾಪ್ತಿಯ ಶಾಸಕ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಹುಬ್ಬಳ್ಳಿಯವರು ಎಂದು ಗುರುತಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯವರು. ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಸಚಿವರಾಗಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಿನದು ಅಂದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಬಿಜೆಪಿಯ ಭದ್ರಕೋಟೆ ಅಂತಾನೇ ಕರೆಯಲಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ನಿಷ್ಟಾವಂತ ಕಾರ್ಯಕರ್ತರ ಪಡೆಯೇ ಇದೆ. ಇಷ್ಟೆಲ್ಲಾ ಧನಾತ್ಮಕ ಅಂಶಗಳಿದ್ದರೂ ಬಿಜೆಪಿ ಮ್ಯಾಜಿಕ್ ನಂಬರ್ ಮುಟ್ಟಲಾಗಲಿಲ್ಲ ಅಂದರೆ ಹೇಗೆ? ಅನ್ನುವುದು ರಾಜಕೀಯ ವಿಶ್ಲೇಷಕರ ಪ್ರಶ್ನೆ. ಹೀಗಾಗಿ ಈ ಬಾರಿಯ ಫಲಿತಾಂಶ ಬಿಜೆಪಿ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತೆ ಎನ್ನಲಾಗುತ್ತಿದೆ.
ಇಬ್ಬರ ಜಗಳ ಮೂರನೇಯವನಿಗೆ ಲಾಭ?
ಇತ್ತೀಚಿಗೆ ಪಕ್ಷದಲ್ಲಿ ನಡೆಯುತ್ತಿರೋ ಕೆಲ ವಿದ್ಯಮಾನಗಳಿಂದ ಇಂಥ ಫಲಿತಾಂಶ ಬಂದಿದೆ ಅಂತಾನೂ ಹೇಳಲಾಗುತ್ತಿದೆ. ನಾಯಕರ ನಡುವಿನ ಸಮನ್ವಯತೆಯ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಇತ್ತೀಚಿಗೆ ನಡೆದ ರಾಜಕೀಯ ವಿದ್ಯಮಾನಗಳಿಂದಾಗಿ ಜಿಲ್ಲೆಯ ನಾಯಕರಲ್ಲಿ ಪರಸ್ಪರ ಅಸಮಾಧಾನ ಹೊಗೆಯಾಡುತ್ತಿದೆ. ಯಾರು ಕೂಡ ಬಹಿರಂಗವಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲವಾದರೂ, ಒಳಗೊಳಗೆ ಪರಸ್ಪರ ಅಸಮಾಧಾನದ ಹೊಗೆ ಇದ್ದೇ ಇದೆ. ಇದೇ ಇದೀಗ ಬಿಜೆಪಿಗೆ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗದೇ ಇರೋದಕ್ಕೆ ಕಾರಣವಾಗಿದೆ. ಇನ್ನು ಇದು ಬಿಜೆಪಿ ಕಥೆಯಾದರೆ, ಜೆಡಿಎಸ್ ಕಥೆ ಮತ್ತೊಂದು. ಈ ಬಾರಿ ಜೆಡಿಎಸ್ 49 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ ಒಂದೇ ವಾರ್ಡ್ ನಲ್ಲಿ ಈ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಹೀಗಾಗಿ ಈ ಪಕ್ಷವನ್ನು ಅವಳಿ ನಗರದ ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದಾಗಿ ಅವಳಿ ನಗರದಲ್ಲಿ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದಂತಾಗಿದೆ.
ಕೈ ಪಕ್ಷಕ್ಕೆ ಮುಳುವಾಗಿದ್ದು ಯಾರು?
82ರ ಪೈಕಿ ಕಾಂಗ್ರೆಸ್ 33 ಸ್ಥಾನಗಳನ್ನು ಗೆದ್ದಿದ್ದು, ದೊಡ್ಡ ಸಾಧನೆಯೇ ಸರಿ. ಏಕೆಂದರೆ ಬಿಜೆಪಿಯ ಪ್ರಬಲ ಕೋಟೆಯಲ್ಲಿ ಕಾಂಗ್ರೆಸ್ ನ ಈ ಸಾಧನೆಯನ್ನು ಕಡಿಮೆ ಅನ್ನುವ ಹಾಗಿಲ್ಲ. ಆಮ್ ಆದ್ಮಿ ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಮತಗಳನ್ನು ಕಬಳಿಸಿರೋದು ಕಾಂಗ್ರೆಸ್ ಗೆ ಕೊಂಚ ಹಿನ್ನೆಡೆಯಾಗಿದೆ. ಇಲ್ಲದಿದ್ದರೆ ಬಿಜೆಪಿಗೆ ಕಾಂಗ್ರೆಸ್ ಮತ್ತಷ್ಟು ಪೈಪೋಟಿ ಕೊಡುವ ನಿರೀಕ್ಷೆ ಇತ್ತು. ಅಲ್ಲದೇ ಎಐಎಂಐಎಂ ಪಕ್ಷವೂ ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡಿದೆ. ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಗಳು ಇರುವಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಅದರಲ್ಲೂ ಮುಸ್ಲಿಂ ಮತಗಳು ಹೆಚ್ಚಿರುವ ಕಡೆಗಳಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ಕಾಂಗ್ರೆಸ್ ಗೆಲ್ಲುವ ಮೂರು ಕಡೆಗಳಲ್ಲಿ ಇದೀಗ ಎಐಎಂಐಎಂ ಗೆಲುವು ಸಾಧಿಸಿದೆ. ಇದಕ್ಕೆಲ್ಲ ಕಾರಣ ಅಸಾದುದ್ದೀನ್ ಓವೈಸಿ ಬಂದು ಪಕ್ಷದ ಪರ ಪ್ರಚಾರ ಮಾಡಿದ್ದು. ಅಲ್ಲದೇ ಎಐಎಂಐಎಂ ಒಟ್ಟು 12 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಈ ಅಭ್ಯರ್ಥಿಗಳು ಬಾಚಿಕೊಂಡಿದ್ದು ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳನ್ನೇ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಈ ಪಕ್ಷವೇ ಮುಳುವಾಗಿದ್ದು ಕೂಡ ಸತ್ಯ. ಒಟ್ಟಿನಲ್ಲಿ ಇದೀಗ ಮೂರನೇ ಬಾರಿಗೆ ಬಿಜೆಪಿ ಪಾಲಿಕೆಯಲ್ಲಿ ಕೇಸರಿ ಬಾವುಟ ಹಾರಿಸುವುದು ಖಚಿತವಾಗಿದ್ದರೂ, ಆ ಪಕ್ಷಕ್ಕೆ ಈ ಫಲಿತಾಂಶ ಮಾತ್ರ ಎಚ್ಚರಿಕೆಯ ಗಂಟೆ ಅನ್ನುವುದು ಒಂದು ಕಡೆಯಾದರೆ, ಕಾಂಗ್ರೆಸ್ ಕೊಂಚ ಯಾಮಾರಿದರೂ ಎಐಎಂಐಎಂ ಪಕ್ಷ ತನ್ನ ಸಾಂಪ್ರದಾಯಿಕ ಮತಗಳಿಗೆ ಕನ್ನ ಹಾಕುತ್ತೆ ಅನ್ನುವುದನ್ನು ಅದು ಅರ್ಥ ಮಾಡಿಕೊಳ್ಳಬೇಕಿದೆ. ಒಟ್ಟಿನಲ್ಲಿ ಫಲಿತಾಂಶ ಒಂದೇ ಆದರೂ ಇದರಿಂದಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಅನೇಕ ಪಾಠಗಳನ್ನು ಕಲಿಸಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ: ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿದ್ದ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ; ತೀವ್ರ ಆಕ್ರೋಶ