ಹುಬ್ಬಳ್ಳಿ ಅ.23: ಆಯುಧ ಪೂಜೆಯಂದು (Ayudha Pooja) ಕುರಿ, ಮೇಕೆ, ಟಗರುಗಳನ್ನು ಬಲಿ ಕೊಡಲಾಗುತ್ತದೆ. ಹೀಗಾಗಿ ಕುರಿ (Sheep), ಮೇಕೆ (Goat), ಟಗರುಗಳ (Ram) ಬೆಲೆ ಶೇ.40 ರಿಂದ 60ರಷ್ಟು ಏರಿಕೆಯಾಗಿದೆ. ಸುಮಾರು 15 ಕೆಜಿ ತೂಕದ ಕುರಿಯ ಬೆಲೆ ಸುಮಾರು 20 ಸಾವಿರ ರೂ. ಆಗಿದೆ. ಇನ್ನು ಮೇಕೆ ಬೆಲೆ ಕೂಡ 3 ಸಾವಿರ ರೂ. ನಷ್ಟು ಏರಿಕೆಯಾಗಿದೆ. ವಿಜಯಪುರ, ಬಾಗಲಕೋಟದಂತಹ ಜಿಲ್ಲೆಗಳಲ್ಲಿ ಟಗರು ಬೆಲೆ 50 ಸಾವಿರ ರೂ. ದಾಟಿದೆ.
ಆದರೂ ಕೂಡ ಕುರಿ, ಮೇಕೆ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆಗಳು ಅಷ್ಟೇನೂ ಏರಿಕೆಯಾಗಿಲ್ಲ. ಮೇಕೆ ಮರಿಗಳಿಗೆ 6 ರಿಂದ 7 ಸಾವಿರ ರೂ.ವರೆಗೆ ಬೆಲೆ ಇದ್ದು, ಸುಮಾರು 15 ಕೆಜಿ ತೂಕದ ಮೇಕೆಗಳನ್ನು 15 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿಯ ಬಂಜಾರ ಕಾಲೋನಿಯ ಕುರಿ, ಮೇಕೆ ಸಾಕುದಾರ ನೂರಪ್ಪ ಲಮಾಣಿ ತಿಳಿಸಿದರು.
ವಯಸ್ಕ ಕುರಿಗಳ ಬೆಲೆ 20,000 ರೂ.ಗಳಾಗಿದ್ದು, ಟಗರು ಬೆಲೆ 25,000-30,000 ರೂ. ಆಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದಸರಾ ಹಿನ್ನೆಲೆಯಲ್ಲಿ ಎಲ್ಲಾ ಜಾನುವಾರುಗಳ ಬೆಲೆ 2,000 ರಿಂದ 5,000 ರೂ.ಗಳಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ಕಳೆದ ಮಂಗಳವಾರ ನಡೆದ ವಾರದ ಜಾನುವಾರು ಮಾರುಕಟ್ಟೆಯಲ್ಲಿ ಇತರ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗೋವಾದಿಂದ ಖರೀದಿದಾರರು ಇಲ್ಲಿಗೆ ಆಗಮಿಸಿದ್ದರು. ಕೆರೂರಿನಲ್ಲಿ ಗುಣಮಟ್ಟದ ಉತ್ಪನ್ನಗಳು ಲಭ್ಯವಿದ್ದು, ಕುರುಬರು ಮತ್ತು ಪ್ರಾಣಿ ಸಾಕುದಾರರು ಹೆಚ್ಚು ಕಾಳಜಿಯಿಂದ ಪ್ರಾಣಿಗಳನ್ನು ಸಾಕಿದ್ದಾರೆ. ನಾವು ಈ ಬಾರಿ 50,000 ರೂ.ಗೆ ಒಂದು ಜೋಡಿ ಟಗರುಗಳನ್ನು ಮಾರಾಟ ಮಾಡಿದೇವು. ತಿಂಗಳ ಹಿಂದೆ 15 ಸಾವಿರ ರೂ.ಗೂ ಇದೇ ಜೋಡಿ ಟಗರು ಖರೀದಿಸುವವರು ಇರಲಿಲ್ಲ ಎಂದು ಬಾದಾಮಿಯ ಕುರುಬ ಹೊನ್ನಪ್ಪ ಕುರುಬರ ಹೇಳಿದರು.
ಇದನ್ನೂ ಓದಿ: ಆಯುಧ ಪೂಜೆಗಾಗಿ ಲಾರಿ ಚಾಲಕರಿಂದ 25 ಸಾವಿರ ರೂ. ವಸೂಲಿ; ತ್ಯಾಮಗೊಂಡ್ಲು ಪೊಲೀಸರ ವಿರುದ್ಧ ದೂರು
ಆದರೆ, ಈ ಬಾರಿ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರಿಂದ ದರ ಇಳಿಕೆಯಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ಮಾರುಕಟ್ಟೆಯ ಕುರಿ ವ್ಯಾಪಾರಿ ಪರಸಪ್ಪ ವಟವಾಟಿ. ರೈತರು ಆರ್ಥಿಕ ಬಿಕ್ಕಟ್ಟಿನಲ್ಲಿರುವ ಕಾರಣ, ಅವರು ಆಡುಗಳು, ಕುರಿಗಳು ಮತ್ತು ಟಗರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ ಮತ್ತು ನಾವು ಕಡಿಮೆ ಬೆಲೆಗೆ ಪ್ರಾಣಿಗಳನ್ನು ಮಾರಾಟ ಮಾಡಬೇಕಾಗಿದೆ. ಇಲ್ಲಿ ಟಗರುಗಳ ಬೆಲೆಯೂ 15 ಸಾವಿರದಿಂದ 12 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು.
ಶನಿವಾರ ಹುಬ್ಬಳ್ಳಿಯ ವಾರದ ಮಾರುಕಟ್ಟೆಯಲ್ಲಿ ನಾವು 15 ಕೆಜಿ ತೂಕದ ಕುರಿಗಳನ್ನು 7-8,000 ರೂ.ಗೆ ಮಾರಾಟ ಮಾಡಬೇಕಾಯಿತು. ಉತ್ತಮ ಗುಣಮಟ್ಟದ ಟಗರುಗಳು ಮಾತ್ರ 16,000 ರಿಂದ 20,000 ರೂ. ಮಾರಾಟವಾದವು ಎಂದು ಹಾವೇರಿ ಜಿಲ್ಲೆ ಗುತ್ತಲದ ಕುರುಬ ಮಂಜು ಮಕರಡ್ಡಿ ಹಂಚಿಕೊಂಡರು. ಹುಬ್ಬಳ್ಳಿಯ ಗ್ರಾಹಕರು ಚಿಲ್ಲರೆ ಮಾರುಕಟ್ಟೆಯಲ್ಲಿ ಕುರಿ ಮಾಂಸದ ಬೆಲೆ ಕೆಜಿಗೆ 700 ರಿಂದ 800-850 ರೂ. ದಾಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ